ADVERTISEMENT

ಮೈಸೂರು: ಪಾಲಿಕೆಯಿಂದ ತಿರಂಗಾ ಮಾರಾಟ!

1.50 ಲಕ್ಷ ಮನೆಗಳಿಗೆ ತಲುಪಿಸುವ ಗುರಿ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2022, 13:47 IST
Last Updated 12 ಆಗಸ್ಟ್ 2022, 13:47 IST
ಜೆ.‍‍ಪಿ.ನಗರದಲ್ಲಿ ಮಹಾನಗರ ಪಾಲಿಕೆ ಸಿಬ್ಬಂದಿ ತ್ರಿವರ್ಣ ಧ್ವಜ ಮಾರಾಟದಲ್ಲಿ ತೊಡಗಿದ್ದಾರೆ
ಜೆ.‍‍ಪಿ.ನಗರದಲ್ಲಿ ಮಹಾನಗರ ಪಾಲಿಕೆ ಸಿಬ್ಬಂದಿ ತ್ರಿವರ್ಣ ಧ್ವಜ ಮಾರಾಟದಲ್ಲಿ ತೊಡಗಿದ್ದಾರೆ   

ಮೈಸೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸುವ ‘ಹರ್ ಘರ್‌ ತಿರಂಗಾ’ ಅಭಿಯಾನದ ಯಶಸ್ಸಿಗೆ ಮಹಾನಗರಪಾಲಿಕೆ ಸಾಥ್ ನೀಡಿದೆ. ಬಡಾವಣೆಗಳಲ್ಲಿ ಬಾವುಟಗಳ ಮಾರಾಟದಲ್ಲಿ ತೊಡಗಿದೆ.

‘ನಗರದ ಕನಿಷ್ಠ 1.50 ಲಕ್ಷ ಮನೆಗಳಿಗೆ ಧ್ವಜಗಳನ್ನು ತಲುಪಿಸುವ ಉದ್ದೇಶವಿದೆ. ನಮ್ಮ ಸಿಬ್ಬಂದಿಯು ಮನೆ ಮನೆಗಳಿಗೆ ತೆರಳಿ ₹ 25ಕ್ಕೆ ಒಂದು ಬಾವುಟವನ್ನು ಮಾರುತ್ತಿದ್ದಾರೆ.ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಆ.15ರಂದು ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸುವುದಕ್ಕೆ ಪ್ರೇರಣೆ ಕೊಡಬೇಕು ಎಂಬ ಸರ್ಕಾರದ ಸೂಚನೆ ಮೇರೆಗೆ ಈ ಕ್ರಮ ವಹಿಸಲಾಗಿದೆ’ ಎಂದು ನಗರಪಾಲಿಕೆ ಆಯುಕ್ತ ಲಕ್ಷ್ಮಿಕಾಂತರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಖರೀದಿಸಲೇಬೇಕು ಎಂದು ಯಾರಿಗೂ ಒತ್ತಾಯ ಮಾಡುತ್ತಿಲ್ಲ. ಬಯಸಿದವರು ತೆಗೆದುಕೊಳ್ಳಬಹುದು. ನಾವು ಅವು ಲಭ್ಯವಾಗುವಂತೆ ಮಾಡುತ್ತಿದ್ದೇವೆಯಷ್ಟೆ. ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ’ ಎಂದು ಪ್ರತಿಕ್ರಿಯಿಸಿದರು.

ADVERTISEMENT

ಪಾಲಿಕೆಯ 9 ವಲಯಗಳಲ್ಲೂ ಸಿಬ್ಬಂದಿಯ ಮೂಲಕ ಮನೆಗಳ ಬಳಿಗೆ ಧ್ವಜ ಒಯ್ಯಲಾಗುತ್ತಿದೆ. ಖರೀದಿಸಿದವರಿಗೆ ರಸೀದಿ ನೀಡಲಾಗುತ್ತಿದೆ. ಮನೆ, ಕಚೇರಿಗಳು, ಅಂಗಡಿ, ಮಳಿಗೆಗಳ ಮೇಲೆ ಹಾರಿಸಬಹುದಾದ ಅಳತೆಯ ಧ್ವಜಗಳನ್ನು ಸಿದ್ಧ‍ಪಡಿಸಲಾಗಿದೆ.

ವಲಯ ಅಧಿಕಾರಿಗಳಿಗೆ ಮಾರಾಟದ ಜವಾಬ್ದಾರಿ ನೀಡಲಾಗಿದೆ. ದೊಡ್ಡ ವಲಯಗಳಿಗೆ 30ಸಾವಿರ, ಚಿಕ್ಕ ವಲಯಗಳಿಗೆ 15ಸಾವಿರ ಬಾವುಟಗಳನ್ನು ಕೊಡಲಾಗಿದೆ. ಕಂದಾಯ ಸಿಬ್ಬಂದಿ, ಆರೋಗ್ಯ ಇನ್‌ಸ್ಪೆಕ್ಟರ್‌ಗಳು ತಂಡದಲ್ಲಿದ್ದಾರೆ. ಅವರಿಗೆ ಆ ಭಾಗದ ಪೌರಕಾರ್ಮಿಕರು ಸಾಥ್ ನೀಡುತ್ತಿದ್ದಾರೆ. ಈಗಾಗಲೇ 40ಸಾವಿರಕ್ಕೂ ಹೆಚ್ಚು ಬಾವುಟಗಳ ಮಾರಾಟವಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

‘ಧ್ವಜ ಮಾರಾಟಕ್ಕೆ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಕೆಲವರು ಸ್ವಯಂಪ್ರೇರಣೆಯಿಂದ ಖರೀದಿಸುತ್ತಿದ್ದಾರೆ. ಉಳಿದವರಿಗೆ ನಾವು ಅಭಿಯಾನದ ಬಗ್ಗೆ ತಿಳಿಸಿ ಖರೀದಿಸುವಂತೆ ತಿಳಿಸುತ್ತಿದ್ದೇವೆ. ಕಡ್ಡಾಯ ಎಂದೇನೂ ಇಲ್ಲ. ಕೆಲವರು 2–3 ಬಾವುಟ ತೆಗೆದುಕೊಂಡಿದ್ದೂ ಉಂಟು. ಮನೆಗಳೊಂದಿಗೆ ಶಾಲೆ, ಕಚೇರಿಗಳಲ್ಲೂ ಮಾರಾಟ ನಡೆಯುತ್ತಿದೆ’ ಎಂದು ಸಿಬ್ಬಂದಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.