ADVERTISEMENT

ಸಹಜ ಬಾಲ್ಯ ಪರಿಪೂರ್ಣ ಶಿಕ್ಷಣದ ಅಡಿಪಾಯ: ಎನ್.ಕೆ. ಲೋಕನಾಥ್

ನೈಪುಣ್ಯ ಈಜುಕೊಳ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 13:44 IST
Last Updated 3 ಜುಲೈ 2025, 13:44 IST
ಮೈಸೂರಿನ ಕನದಾಸ ನಗರದ (ದಟ್ಟಗಳ್ಳಿ) ನೈಪುಣ್ಯ ಸ್ಕೂಲ್‌ ಆಫ್‌ ಎಕ್ಸಲೆನ್ಸ್‌ ಕ್ಯಾಂಪಸ್‌ನಲ್ಲಿ ನಿರ್ಮಿಸಿರುವ ಈಜುಕೊಳವನ್ನು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಉದ್ಘಾಟಿಸಿದರು
ಮೈಸೂರಿನ ಕನದಾಸ ನಗರದ (ದಟ್ಟಗಳ್ಳಿ) ನೈಪುಣ್ಯ ಸ್ಕೂಲ್‌ ಆಫ್‌ ಎಕ್ಸಲೆನ್ಸ್‌ ಕ್ಯಾಂಪಸ್‌ನಲ್ಲಿ ನಿರ್ಮಿಸಿರುವ ಈಜುಕೊಳವನ್ನು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಉದ್ಘಾಟಿಸಿದರು   

ಮೈಸೂರು: ‘ಸಹಜ ಬಾಲ್ಯವು ಪರಿಪೂರ್ಣ ಶಿಕ್ಷಣದ ಅಡಿಪಾಯ’ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ತಿಳಿಸಿದರು.

ಇಲ್ಲಿನ ಕನದಾಸನಗರದ (ದಟ್ಟಗಳ್ಳಿ) ನೈಪುಣ್ಯ ಸ್ಕೂಲ್‌ ಆಫ್‌ ಎಕ್ಸಲೆನ್ಸ್‌ ಕ್ಯಾಂಪಸ್‌ನಲ್ಲಿ ನಿರ್ಮಿಸಿರುವ ನೂತನ ಈಜುಕೊಳದ ಉದ್ಘಾಟನೆಯನ್ನು ಗುರುವಾರ ನೆರವೇರಿಸಿ ಅವರು ಮಾತನಾಡಿದರು.

‘ಜಾಗತಿಕ ಪೈಪೋಟಿಯಲ್ಲಿ ತೊಡಗಿಕೊಳ್ಳಲು, ಭವಿಷ್ಯದಲ್ಲಿ ಮಕ್ಕಳು ಪ್ರತಿಭಾ ಸಾಮರ್ಥ್ಯ ಹೊಂದುವಂತಾಗಲು, ಪ್ರಾಥಮಿಕ ಶಿಕ್ಷಣದಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಹಾಗೂ ಮೌಲ್ಯಯುತ ಶಿಕ್ಷಣ ಒದಗಿಸಲು ಅತ್ಯುತ್ತಮ ಸವಲತ್ತು ಸೌಲಭ್ಯಗಳು ಅತ್ಯವಶ್ಯವಾಗಿವೆ. ಇಂದಿನ ದಿನಗಳಲ್ಲಿ ಶಿಕ್ಷಣ ಸಂಸ್ಥೆಗಳ ಮೇಲೆ ಸಾಕಷ್ಟು ಸವಾಲುಗಳಿವೆ’ ಎಂದರು.

ADVERTISEMENT

‘ಅಕ್ಷರ ಕಲಿಕೆಯ ಜೊತೆಯಲ್ಲೇ ಮಕ್ಕಳ ಸಾಮರ್ಥ್ಯ ಹಾಗೂ ಪ್ರತಿಭೆಯನ್ನು ಗುರುತಿಸಿ, ಅವರಲ್ಲಿರುವ ಕ್ರೀಡೆ ಹಾಗೂ ಸಾಂಸ್ಕೃತಿಕ ಪ್ರತಿಭೆ ಅನಾವರಣಗೊಳ್ಳುವಂತಾಗಲು ಪೂರಕ ವ್ಯವಸ್ಥೆ ಕಲ್ಪಿಸಬೇಕು’ ಎಂದು ಹೇಳಿದರು.

‘ಹಿಂದೆ ಮನೆಯೇ ಒಂದು ರೀತಿಯ ಪಾಠಶಾಲೆಯಾಗಿತ್ತು. ನೆರೆ-ಹೊರೆ ಸಂಬಂಧಗಳು ಬಾಲ್ಯದ ಚಟುವಟಿಕೆಗಳಿಗೆ ಪ್ರೇರಣೆಯಾಗಿದ್ದವು. ಕೆರೆ-ಕಟ್ಟೆಗಳಲ್ಲಿ ಈಜುವ ಅವಕಾಶಗಳು ದೊರೆಯುತ್ತಿತ್ತು. ಆದರೆ, ಇಂದು ಗ್ರಾಮೀಣ ಪ್ರದೇಶದಲ್ಲಿಯೂ ಅಂತಹ ಚಟುವಟಿಕೆಗಳಲ್ಲಿ ಮಕ್ಕಳು ತೊಡಗಿಕೊಳ್ಳಲು ಅವಕಾಶಗಳು ಕಡಿಮೆಯಾಗಿವೆ. ಪಟ್ಟಣ ಪ್ರದೇಶಗಳಲ್ಲಂತೂ ಕಾಂಕ್ರೀಟ್ ಕಾಡು ವಿಸ್ತಾರಗೊಳ್ಳುತ್ತಿರುವ ಪರಿಯಿಂದಾಗಿ ಮಕ್ಕಳ ದೈಹಿಕ ಚಟುವಟಿಕೆಗಳಿಗೆ ಅವಕಾಶಗಳು ಮರೀಚಿಕೆಯಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳೇ ಮಕ್ಕಳಿಗೆ ಸಹಜ ಬಾಲ್ಯ ಒದಗಿಸುವ ಜವಾಬ್ದಾರಿ ಹೊತ್ತುಕೊಂಡರೆ ಅದು ಮಕ್ಕಳಿಗೆ ಕೊಡಬಹುದಾದ ಪರಿಪೂರ್ಣ ಶಿಕ್ಷಣದ ಅಡಿಪಾಯವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘3ರಿಂದ 17 ವರ್ಷದವರೆಗಿನ ಮಕ್ಕಳು ಈಜು ಕಲಿಕೆ ಹಾಗೂ ಅಭ್ಯಾಸದಲ್ಲಿ ತೊಡಗಲು 2 ಬಗೆಯ ಸುಸಜ್ಜಿತ ಈಜುಕೊಳಗಳನ್ನು ನಿರ್ಮಿಸಲಾಗಿದೆ. ಶಾಲೆ ಮುಗಿದ ನಂತರ ಹೊರಗಿನ ಮಕ್ಕಳಿಗೂ ಈಜು ಕಲಿಕೆಗೆ ಅವಕಾಶ ಕಲ್ಪಿಸಲಾಗುವುದು’ ಎಂದು ಸಂಸ್ಥೆಯ ಅಧ್ಯಕ್ಷ ಆರ್‌. ರಘು ತಿಳಿಸಿದರು.

ಸಂಸ್ಥೆಯ ಕಾರ್ಯದರ್ಶಿ ಆರ್‌. ಕೌಟಿಲ್ಯ, ಪ್ರಾಂಶುಪಾಲ ಎಂ.ಎನ್‌. ಮಹೇಂದ್ರ, ಉಪ ಪ್ರಾಂಶುಪಾಲರಾದ ಶೀನಾ ಕೆ. ಗುರ್ನಾನಿ ಪಾಲ್ಗೊಂಡಿದ್ದರು.

ನೈಪುಣ್ಯ ಶಾಲೆಯು ಉತ್ತಮ ಈಜುಕೊಳ ನಿರ್ಮಿಸಿ ಮಕ್ಕಳಿಗೆ ಈಜು ಕಲಿಕೆಗೆ ಅವಕಾಶ ಕಲ್ಪಿಸಿ ಸಾಧಕರಾಗಲು ಪ್ರೇರೇಪಿಸುತ್ತಿರುವುದು ಶ್ಲಾಘನೀಯ
ಪ್ರೊ.ಎನ್.ಕೆ. ಲೋಕನಾಥ್, ಕುಲಪತಿ, ಮೈಸೂರು ವಿಶ್ವವಿದ್ಯಾಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.