
ಮೈಸೂರು: ‘ರಾಜ್ಯದಲ್ಲಿರುವ ಪರಿಶಿಷ್ಟ ಪಂಗಡದ 50 ಬುಡಕಟ್ಟುಗಳಲ್ಲಿ 20ಕ್ಕೂ ಹೆಚ್ಚು ಬುಡಕಟ್ಟುಗಳ ಬಗ್ಗೆ ಸಮಗ್ರ ಮಾಹಿತಿ ಲಭ್ಯವಾಗಿಲ್ಲ. ಹೀಗಾಗಿ, ಈ ಬಗ್ಗೆ ಸೂಕ್ಷ್ಮ ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಬೇಕಾಗಿದೆ’ ಎಂದು ಶ್ರೀಕೃಷ್ಣದೇವರಾಯ ವಿ.ವಿಯ ವಿಶ್ರಾಂತ ಕುಲಪತಿ ಪ್ರೊ.ಕೆ.ಎಂ.ಮೇತ್ರಿ ಹೇಳಿದರು.
ಇಲ್ಲಿನ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಮೂಲ ಆದಿವಾಸಿಗಳ ಅಧ್ಯಯನ ಕೇಂದ್ರದಿಂದ ‘ಕರ್ನಾಟಕ, ತಮಿಳುನಾಡು, ಕೇರಳ ರಾಜ್ಯಗಳಲ್ಲಿರುವ ಇರುಳ, ಇರುಳರ್, ಇರುಳಿಗ ಬುಡಕಟ್ಟು: ಸಂಸ್ಕೃತಿ ಮತ್ತು ಪ್ರಸ್ತುತತೆ’ ಎಂಬ ವಿಷಯದ ಕುರಿತು ಆಯೋಜಿಸಿರುವ 2 ದಿನಗಳ ವಿಚಾರ ಸಂಕಿರಣವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಮೂಲದಿವಾಸಿಗಳ ಅಧ್ಯಯನ ಕೇಂದ್ರ ಹಾಗೂ ಬುಡಕಟ್ಟು ಸಂಶೋಧನಾ ಸಂಸ್ಥೆಯು ರಾಜ್ಯದ ಪ್ರತಿ ಬುಡಕಟ್ಟು ಸಮುದಾಯಗಳ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಹೆಚ್ಚು ಆಸಕ್ತಿ ವಹಿಸಿ, ಅಧ್ಯಯನ ಮತ್ತು ಸಂರಕ್ಷಣೆಗೆ ವಿಶೇಷ ಕೋಶಗಳನ್ನು ತೆರೆಯಬೇಕು’ ಎಂದು ಸಲಹೆ ನೀಡಿದರು.
ಸಂರಕ್ಷಿಸಬೇಕು: ‘ಅದರಲ್ಲೂ ಕಾಡು, ಕಾಡಂಚಿನಲ್ಲಿ ವಾಸಿಸುತ್ತಿರುವ ಸಮುದಾಯಗಳ ಭಾಷೆಗಳನ್ನು ಸಂರಕ್ಷಿಸಬೇಕಾಗಿದೆ. ಆ ಭಾಷೆಗಳಿಗೆ ಆದ್ಯತೆ ನೀಡಬೇಕಾಗಿದೆ. ಇದಕ್ಕಾಗಿ ಸರ್ಕಾರ ಹೆಚ್ಚು ಅನುದಾನ ಒದಗಿಸಬೇಕು’ ಎಂದು ಕೋರಿದರು.
‘ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿ ವ್ಯಾಪಿಸಿರುವ ಇರುಳಿಗ ಬುಡಕಟ್ಟು ಕಾವೇರಿ ನದಿಯ ಮುಖಜ ಭೂಮಿಯಲ್ಲಿ ಸವಿಸ್ತಾರವಾಗಿ ಕಂಡುಬರುವುದನ್ನು ಕಾಣಬಹುದು. ಬೇರೆ ಹೆಸರುಗಳಿಂದ ಕರೆದರೂ ಭಾಷಿಕ ಮತ್ತು ಸಾಂಸ್ಕೃತಿಕವಾಗಿ ಆಚಾರ–ವಿಚಾರ ಎಲ್ಲವುಗಳೂ ಒಂದೇ ಆಗಿವೆ’ ಎಂದರು.
ಮೂಲ ಆದಿವಾಸಿಗಳ ಅಧ್ಯಯನ ಕೇಂದ್ರದ ಸಂಶೋಧನಾಧಿಕಾರಿ ಕೃಷ್ಣಮೂರ್ತಿ ಕೆ.ವಿ., ‘ಸ್ವಾತಂತ್ರ್ಯ ನಂತರದ ಕಾಲಘಟ್ಟದಲ್ಲಿ ಬಿಡಿಬಿಡಿಯಾದ ಅಧ್ಯಯನಗಳು ನಡೆದಿವೆಯಾದರೂ ಅವುಗಳಲ್ಲಿ ಇರುಳಿಗರ ಬಗ್ಗೆ ಕೆಲವು ಕಡೆ ಗೊಂದಲಗಳಿರುವುದು ಸತ್ಯ. ಇಂಥಹ ಗೊಂದಲಗಳನ್ನು ನಿವಾರಿಸಬೇಕು’ ಎಂದು ಕೋರಿದರು.
ವಂಚಿತವಾಗಿದೆ: ‘ಒಂದೇ ಸಮುದಾಯ ಒಂದು ರಾಜ್ಯದಲ್ಲಿ ಪಿವಿಟಿಜಿ ಪಟ್ಟಿಯಲ್ಲಿರುವುದು, ಮತ್ತೊಂದು ರಾಜ್ಯದಲ್ಲಿ ವಂಚಿತವಾಗಿರುವುದು ಕಂಡುಬಂದಿದೆ. ಈ ಪಟ್ಟಿಯನ್ನು ನಿರ್ಧರಿಸುವ ಅಧಿಕಾರವು ಕೇಂದ್ರದ ಹಂತದಲ್ಲಿರುವುದರಿಂದಾಗಿ, ಈ ಸಮುದಾಯಗಳ ಪ್ರಾದೇಶಿಕ ಭಿನ್ನತೆ ಮತ್ತು ಸಂಸ್ಕೃತಿ, ಭಾಷೆಯ ಹೊಂದಾಣಿಕೆ ಸಾಮ್ಯತೆ ಇರುವುದನ್ನು ಅಧ್ಯಯನದ ಮೂಲಕ ತಿಳಿಸಬೇಕಾಗಿದೆ’ ಎಂದು ಅಭಿಪ್ರಾಯಪಟ್ಟರು.
ಉರಗ ತಜ್ಞ ರೋಮ್ಯಲಸ್ ವಿಟ್ಹೇಕರ್ ಮಾತನಾಡಿ, ‘ಇರುಳ ಸಮುದಾಯಗಳಲ್ಲಿರುವ ಹಾವು ಹಿಡಿಯುವ ಪಾರಂಪರಿಕ ಜ್ಞಾನ ಬಳಸಿಕೊಂಡು ತಮಿಳುನಾಡಿನಲ್ಲಿ ಪ್ರತ್ಯೇಕ ಸೊಸೈಟಿ ತೆರೆದಿದ್ದಾರೆ. ಹಾವಿನ ಪೊರೆ ಬಳಸಿಕೊಂಡು ವಿವಿಧ ವಸ್ತುಗಳನ್ನು ತಯಾರಿಸಿ ಮಾರುವ ಜ್ಞಾನ ಪರಂಪರೆ ಇರುಳ ಸಮುದಾಯದಲ್ಲಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಅದಕ್ಕೆ ನಿರ್ಬಂಧ ವಿಧಿಸಿದ್ದರಿಂದಾಗಿ ಅವರ ಪಾರಂಪರಿಕ ಜ್ಞಾನಕ್ಕೆ ತೊಡಕುಂಟಾಗಿದೆ’ ಎಂದು ವಿಷಾದಿಸಿದರು.
ಬುಡಕಟ್ಟು ಸಂಶೋಧನಾ ಸಂಸ್ಥೆ ಉಪ ನಿರ್ದೇಶಕಿ ಎಚ್.ಎಸ್.ಗಿರಿಜಾಂಬ, ಸಂಶೋಧನಾಧಿಕಾರಿ ಶಿವಕುಮಾರ, ಬೆಂಗಳೂರಿನ ಸಾಮಾಜಿಕ ಒಳಗೊಳ್ಳುವಿಕೆ ಅಧ್ಯಯನ ಕೇಂದ್ರದ ಪ್ರೊ.ಚಂದ್ರಶೇಖರ್ ಆರ್.ವಿ ಪಾಲ್ಗೊಂಡಿದ್ದರು.
ತೌಲನಿಕ ಅಧ್ಯಯನಕ್ಕಾಗಿ ಕೈಗೊಂಡಿರುವ ಈ ವಿಚಾರಸಂಕಿರಣದಲ್ಲಿ ಮೂರೂ ರಾಜ್ಯಗಳ 150ಕ್ಕೂ ಹೆಚ್ಚು ಇರುಳ, ಇರುಳಾಸ್ ಬುಡಕಟ್ಟು ಸಮುದಾಯದ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.