ADVERTISEMENT

ಮೈಸೂರು| ಎನ್‌ಇಪಿ ವಿದ್ಯಾರ್ಥಿ ಕೇಂದ್ರಿತ: ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2025, 7:05 IST
Last Updated 10 ನವೆಂಬರ್ 2025, 7:05 IST
<div class="paragraphs"><p>ಮೈಸೂರಿನ ಜೆಎಸ್‌ಎಸ್‌ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯಲ್ಲಿ ಭಾನುವಾರ ನಡೆದ 16ನೇ ಘಟಿಕೋತ್ಸವದಲ್ಲಿ ಬಿಡಿಎಸ್‌ ವಿಭಾಗದಲ್ಲಿ ನಾಲ್ಕು ಚಿನ್ನದ ಪದಕ ಪಡೆದ ಸುಹಾನಿ ಜೈನ್‌ ಅವರಿಗೆ ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್, ಪದಕ ಹಾಗೂ ‍ಪ್ರಮಾಣಪತ್ರ ಫಲಕ ವಿತರಿಸಿದರು.</p></div>

ಮೈಸೂರಿನ ಜೆಎಸ್‌ಎಸ್‌ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯಲ್ಲಿ ಭಾನುವಾರ ನಡೆದ 16ನೇ ಘಟಿಕೋತ್ಸವದಲ್ಲಿ ಬಿಡಿಎಸ್‌ ವಿಭಾಗದಲ್ಲಿ ನಾಲ್ಕು ಚಿನ್ನದ ಪದಕ ಪಡೆದ ಸುಹಾನಿ ಜೈನ್‌ ಅವರಿಗೆ ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್, ಪದಕ ಹಾಗೂ ‍ಪ್ರಮಾಣಪತ್ರ ಫಲಕ ವಿತರಿಸಿದರು.

   

ಪ್ರಜಾವಾಣಿ ಚಿತ್ರ

ಮೈಸೂರು: ‘ರಾಷ್ಟ್ರೀಯ ಶಿಕ್ಷಣ ನೀತಿ–2020 ವಿದ್ಯಾರ್ಥಿ ಕೇಂದ್ರಿತವಾಗಿದ್ದು, ಅವಕಾಶಗಳನ್ನು ಸೃಷ್ಟಿಸಿದೆ. ಒಂದೇ ಸಮಯದಲ್ಲಿ ಎರಡು ಪದವಿಯನ್ನೂ ಪಡೆಯಬಹುದು’  ಎಂದು ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್‌ ಪ್ರತಿಪಾದಿಸಿದರು. 

ADVERTISEMENT

ಇಲ್ಲಿನ ಬನ್ನಿಮಂಟಪದ ಶಿವರಾತ್ರೀಶ್ವರ ನಗರದಲ್ಲಿರುವ ಜೆಎಸ್‌ಎಸ್‌ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯಲ್ಲಿ ಭಾನುವಾರ ನಡೆದ ಸಂಸ್ಥೆಯ 16ನೇ ಘಟಿಕೋತ್ಸವದಲ್ಲಿ ಮುಖ್ಯ ಭಾಷಣ ಮಾಡಿದ ಅವರು, ‘ಹೊಸ ನೀತಿಯು ಶಿಕ್ಷಣವನ್ನು ಸರಳೀಕೃತಗೊಳಿಸಿದ್ದು, ಬಹುಶಿಸ್ತೀಯ ಕಲಿಕೆಗೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತದೆ’ ಎಂದು ಹೇಳಿದರು. 

‘ಬೇಡದ ವಿಷಯಗಳಿಗೆ ತಲೆ ಕೆಡಿಸಿಕೊಳ್ಳಬಾರದು. ಏಕಾಗ್ರತೆಯಿಂದ ಜ್ಞಾನವನ್ನು ಹೆಚ್ಚಿಸಿಕೊಳ್ಳುವತ್ತ ಶ್ರಮಿಸಬೇಕು. ನಿಮಗೆ ಸಂಬಂಧಿಸಿದ ವಿಷಯಗಳ ಬಗ್ಗೆಯಷ್ಟೇ ಯೋಚಿಸಬೇಕು. ಸಾಮಾಜಿಕ ಮಾಧ್ಯಮಗಳಲ್ಲಿ ಸ್ಕ್ರಾಲ್ ಮಾಡುತ್ತಾ, ರೀಲ್ಸ್‌ಗಳಲ್ಲಿ ಕಳೆದು ಹೋಗಬಾರದು. ಉತ್ತಮ ವಿಚಾರ ಕಲಿತು ಅನುಭವ ಗಳಿಸಿಕೊಳ್ಳಬೇಕು. ಗುರು ಹಾಗೂ ಪೋಷಕರ ಸಲಹೆ, ಮಾರ್ಗದರ್ಶನ ಪಾಲಿಸಬೇಕು’ ಎಂದರು. 

ಸೋಲುಗಳಿಗೆ ಕಂಗೆಡಬೇಡಿ: ‘ಪದವಿ ನಂತರವೂ ಸಂಶೋಧನೆ ಮತ್ತು ಆವಿಷ್ಕಾರದಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕು. ಸೋಲುಗಳಿಗೆ ಕಂಗೆಡಬಾರದು. ಅವು ನಮ್ಮನ್ನು ಬಲಿಷ್ಠಗೊಳಿಸುತ್ತವೆ. ಪರಿಶ್ರಮ ಪಟ್ಟರೆ ಮಾತ್ರವೇ ಸ್ಥಾನಗಳು ಹುಡುಕಿಕೊಂಡು ಬರುತ್ತವೆ’ ಎಂದು ಉಪ ರಾಷ್ಟ್ರಪತಿ ಹೇಳಿದರು. 

‘ನಾನು 5 ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದೆ, ಮೊದಲೆರಡು ಬಾರಿ ಗೆದ್ದು, ನಂತರ 3 ಬಾರಿ ಸೋತಿದ್ದೆ. ಆದರೂ, ಉಪ ರಾಷ್ಟ್ರಪತಿ ಸ್ಥಾನದವರೆಗೆ ಸಾಗಿದೆ. ಸೋತಾಗ ಕುಗ್ಗಲಿಲ್ಲ. ಗೆದ್ದಾಗ ಹಿಗ್ಗಲಿಲ್ಲ. ನನ್ನ ಪಾಲಿನ ಕರ್ತವ್ಯ ಪಾಲಿಸಿದೆ. ಪದವೀಧರರು ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳಬೇಕು. ಜವಾಬ್ದಾರಿಯನ್ನು ನಿಭಾಯಿಸುವುದೇ ಗುರಿಯಾಗಿರಬೇಕು. ಹೀಗಾಗಿಯೇ ನಿಮ್ಮ ಮುಂದೆ ನಿಂತಿದ್ದೇನೆ’ ಎಂದು ಉದಾಹರಿಸಿದರು. 

‘ಎದುರಾಗುವ ಸಮಸ್ಯೆ, ಸವಾಲುಗಳು ಪ್ರತಿಯೊಬ್ಬರಿಗೂ ಭಿನ್ನವಾಗಿರುತ್ತವೆ. ಮತ್ತೊಬ್ಬರಿಗೆ ನಮ್ಮನ್ನು ಹೋಲಿಸಿಕೊಳ್ಳುವ ಕೆಲಸ ಎಂದಿಗೂ ಮಾಡಬಾರದು. ಹೃದಯವನ್ನು ಸೋಲಲು ಬಿಡಬಾರದು. ಸವಾಲು ಎದುರಿಸುವಾಗ ಸಿಕ್ಕ ಅನುಭವಗಳು ನಿಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುತ್ತವೆ’ ಎಂದು ಹೇಳಿದರು. 

ರಾಜ್ಯಪಾಲ ಥಾವರಚಂದ್‌ ಗೆಹಲೋತ್‌, ‘ಕೃತಕ ಬುದ್ಧಿಮತ್ತೆ (ಎಐ) ಸೇರಿದಂತೆ ಹೊಸ ತಂತ್ರಜ್ಞಾನಗಳು ಬಂದಿರುವ ಈ ಕಾಲದಲ್ಲಿ ಪದವೀಧರರು ಸೃಜನಶೀಲತೆಯನ್ನು ತೋರಬೇಕು. 2047ರ ವೇಳೆಗೆ ಭಾರತವನ್ನು ಸ್ವಾವಲಂಬಿ ಹಾಗೂ ಅಭಿವೃದ್ಧಿ ಹೊಂದಿದ ದೇಶವಾಗಿಸಲು ಉದ್ಯಮಶೀಲತೆಯನ್ನು ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.  

ಪದವಿ ಪ್ರದಾನ ಮಾಡಿದ ಸಂಸ್ಥೆಯ ಕುಲಾಧಿಪತಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಪ್ರಮಾಣ ಬೋಧಿಸಿದರು.  

ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ವಿ.ಪಾಟೀಲ, ಕುಲಪತಿ ಡಾ.ಎಚ್‌.ಬಸವನಗೌಡಪ್ಪ,
ಪ್ರೊ ಛಾನ್ಸಲರ್‌ ಡಾ.ಬಿ.ಸುರೇಶ್‌, ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಸಿ.ಜಿ.ಬೆಟಸೂರಮಠ ಹಾಜರಿದ್ದರು. 

ವೈದ್ಯಕೀಯ ಪದವೀಧರರ ಸಂಭ್ರಮ

ಪದವೀಧರ ವಿದ್ಯಾರ್ಥಿಗಳು ಸಾಧನೆಯ ಸಂಭ್ರಮದಲ್ಲಿದ್ದರೆ ಚಿನ್ನದ ಪದಕ ಹಾಗೂ ನಗದು ಬಹುಮಾನ ಪುರಸ್ಕೃತ ಮಕ್ಕಳನ್ನು ನೋಡಿದ ಪೋಷಕರಲ್ಲಿ ಸಂತಸದ ಭಾವ ಮೂಡಿತ್ತು.

ಸಂಸ್ಥೆಯ ವಿವಿಧ ನಿಕಾಯಗಳಲ್ಲಿ ಪದವಿ ಡಿಪ್ಲೊಮಾ ಪಡೆದ 2925 ವಿದ್ಯಾರ್ಥಿಗಳಲ್ಲಿ 80 ಮಂದಿಗೆ ಪಿಎಚ್‌.ಡಿ 7 ಅಭ್ಯರ್ಥಿಗಳಿಗೆ ಡಿಎಂ (ಡಾಕ್ಟರ್ ಆಫ್‌ ಮೆಡಿಸಿನ್‌) ಎಂಸಿಎಚ್‌ ಪದವಿ ಹಾಗೂ ಎನ್‌ಇಪಿ–2020 ಅಡಿಯಲ್ಲಿ ಬಿಎಸ್ಸಿ ಆನರ್ಸ್‌ನ ಮೊದಲ ಬ್ಯಾಚ್‌ನ 132 ಮಂದಿಗೆ ಪದವಿ ಪ್ರದಾನವನ್ನು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾಡಿದರು.

ಬಿಡಿಎಸ್‌ ಎಂಡಿಎಸ್ ಎಂ.ಎಸ್ಸಿ ಬಿ.ಎಸ್ಸಿ ಬಿ.ಡಿಎಸ್ ಎಂ.ಫಾರ್ಮ್ ಬಿ.ಫಾರ್ಮ್ ಎಂಬಿಎ ಬಿಬಿಎ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಉತ್ತಮ ಸಾಧನೆ ಮಾಡಿದ 68 ಮಂದಿಗೆ ಒಟ್ಟು 100 ಚಿನ್ನದ ಪದಕ ವಿತರಿಸಲಾಯಿತು. ‌

ಬಿಡಿಎಸ್‌ನ ಸುಹಾನಿ ಜೈನ್‌ ಬಿ. ಫಾರ್ಮಾದ ಎಸ್.ಉಮಾ ಮಹೇಶ್ವರಿ ತಲಾ 4 ಎಂಡಿ–ಜನರಲ್ ಮೆಡಿಸಿನ್‌ನಲ್ಲಿ ಡಾ.ಪ್ರೀತಿ ಪ್ರಕಾಶ್ ಪ್ರಭು ಡಾ.ಯನಮಲ ಕೀರ್ತಿ ಎಂಬಿಬಿಎಸ್‌ನಲ್ಲಿ ಇಶಾ ಕುಮತೇಕರ ಎಂ.ಫಾರ್ಮಾದಲ್ಲಿ ಜೆ.ವಿಘ್ನೇಶ್ ಫಾರ್ಮ ಡಿನಲ್ಲಿ ಡಾ.ಎಸ್‌.ಎ.ಪಳನಿಸ್ವಾಮಿ ತಲಾ 3 ಚಿನ್ನದ ಪದಕ ‍ಪಡೆದರು. 

ಪದವಿ ಪೂರೈಸಿದ ವಿದ್ಯಾರ್ಥಿಗಳು ಪದಕ ಪಡೆದವರಿಗೆ ಹಸ್ತಲಾಘವ ನೀಡಿ ಸಂತಸ ಹಂಚಿಕೊಂಡರು.

‘ಕನ್ನಡ ಶ್ರೀಮಂತ ಭಾಷೆ’

‘ಕನ್ನಡ ಭಾಷೆಯು ವಿಶ್ವದಲ್ಲಿಯೇ ಶ್ರೀಮಂತ ಭಾಷೆಯಾಗಿದ್ದು ಶಾಸ್ತ್ರೀಯ ಭಾಷಾ ಸ್ಥಾನಮಾನವೂ ಸಿಕ್ಕಿದೆ. ನಾಡಗೀತೆಯೂ ಮಾಧುರ್ಯದಿಂದ ತುಂಬಿದೆ’ ಎಂದು ರಾಧಾಕೃಷ್ಣನ್ ಹೇಳಿದರು. 

‘ಸುಂದರ ಪ್ರಕೃತಿಯ ಬೀಡಾದ ರಾಜ್ಯವು ಅಧ್ಯಾತ್ಮ ಹಾಗೂ ಧಾರ್ಮಿಕ ಸಂಸ್ಕೃತಿಯಿಂದಲೂ ಶ್ರೀಮಂತ. ಚಾಮುಂಡಿ ಬೆಟ್ಟ ಮಹದೇಶ್ವರ ಬೆಟ್ಟ ಧರ್ಮಸ್ಥಳ ಕೊಲ್ಲೂರು ಮೂಕಾಂಬಿಕೆ ಮೇಲುಕೋಟೆ ಸ್ಥಳಗಳು ವೈವಿಧ್ಯಮಯ ಸಂಸ್ಕೃತಿ ಕೇಂದ್ರಗಳಾಗಿವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.