ADVERTISEMENT

ಸಿಎಂ ಕ್ಷೇತ್ರದಲ್ಲಿ ನರರೋಗ ಆಸ್ಪತ್ರೆ: ₹ 100 ಕೋಟಿ ಮೊತ್ತದ ಯೋಜನೆ, 160 ಹಾಸಿಗೆ

ಗುಡುಮಾದನಹಳ್ಳಿಯಲ್ಲಿ ನಿರ್ಮಾಣ, ₹ 100 ಕೋಟಿ ಮೊತ್ತದ ಯೋಜನೆ, 160 ಹಾಸಿಗೆಗಳ ಸಾಮರ್ಥ್ಯ

ಎಂ.ಮಹೇಶ
Published 25 ಜನವರಿ 2026, 5:11 IST
Last Updated 25 ಜನವರಿ 2026, 5:11 IST
ಗುಡುಮಾದನಹಳ್ಳಿಯಲ್ಲಿ ನಿರ್ಮಾಣಗೊಳ್ಳಲಿರುವ ನಿಮ್ಹಾನ್ಸ್‌ ಮಾದರಿಯ ಆಸ್ಪತ್ರೆಯ ಕಟ್ಟಡದ ನೀಲನಕ್ಷೆ
ಗುಡುಮಾದನಹಳ್ಳಿಯಲ್ಲಿ ನಿರ್ಮಾಣಗೊಳ್ಳಲಿರುವ ನಿಮ್ಹಾನ್ಸ್‌ ಮಾದರಿಯ ಆಸ್ಪತ್ರೆಯ ಕಟ್ಟಡದ ನೀಲನಕ್ಷೆ    

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ, ತಾಲ್ಲೂಕಿನ ಗುಡುಮಾದನಹಳ್ಳಿಯಲ್ಲಿ ನರರೋಗ ಆಸ್ಪತ್ರೆ ತಲೆ ಎತ್ತಲಿದೆ.

ಬೆಂಗಳೂರಿನಲ್ಲಿರುವ ನಿಮ್ಹಾನ್ಸ್ (ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ) ಮಾದರಿಯಲ್ಲಿ ಇಲ್ಲೂ ಆಸ್ಪತ್ರೆ ನಿರ್ಮಿಸಲಾಗುತ್ತಿದೆ.

ಬರೋಬ್ಬರಿ ₹ 100 ಕೋಟಿ ಮೊತ್ತದ, 160 ಹಾಸಿಗೆಗಳ ಸಾಮರ್ಥ್ಯದ ಆರೋಗ್ಯ ಸಂಸ್ಥೆಯು ಮೈಸೂರು ತಾಲ್ಲೂಕು ಮತ್ತು ವರುಣ ವಿಧಾನಸಭಾ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ಎನಿಸಲಿದೆ. 

ADVERTISEMENT

ಜಾಗ ಹಸ್ತಾಂತರ: 

ಇದಕ್ಕಾಗಿ ಬೇಕಾಗಿರುವ 20 ಎಕರೆ ಜಾಗವನ್ನು ಕಂದಾಯ ಇಲಾಖೆಯಿಂದ ವೈದ್ಯಕೀಯ ಶಿಕ್ಷಣ ಇಲಾಖೆಗೆ ಹಸ್ತಾಂತರಿಸಲಾಗಿದೆ.

ಕೆಲವರು, ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದರು. ಇದನ್ನು ತೆರವುಗೊಳಿಸಿ ಆಸ್ಪತ್ರೆ ನಿರ್ಮಾಣಕ್ಕೆ ಒದಗಿಸಲಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ದೊರೆಯುವ ನಿರೀಕ್ಷೆ ಇದೆ. ಕಳೆದ ರಾಜ್ಯ ಬಜೆಟ್‌ನಲ್ಲಿ ಯೋಜನೆ ಬಗ್ಗೆ ಘೋಷಿಸಲಾಗಿತ್ತು.

‘ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದ್ದು, ಸರ್ಕಾರದಿಂದ ಕಾರ್ಯಾದೇಶ ನೀಡುವುದು ಬಾಕಿ ಇದೆ. ಕಾರ್ಯಾದೇಶ ನೀಡಿದ 24 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಬೇಕಾಗುತ್ತದೆ. ಅನುದಾನಕ್ಕಾಗಿ ಸರ್ಕಾರದಿಂದ ಅನುಮೋದನೆ ದೊರೆತಿದೆ. ವೈದ್ಯಕೀಯ ಶಿಕ್ಷಣ ಇಲಾಖೆಯ ಅನುದಾನದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುತ್ತಿದೆ’ ಎಂದು ಆರೋಗ್ಯ ಇಲಾಖೆಯ ಎಇಇ ಗುರುಪ್ರಸಾದ್‌ ಎಸ್. ಮಾಹಿತಿ ನೀಡಿದರು.

ನೀಲನಕ್ಷೆ ಸಿದ್ಧ: 

ಯೋಜನೆಯ ಮೊದಲ ಹೆಜ್ಜೆಯಾಗಿ, ಗುರುತಿಸಲಾದ ಗುಡುಮಾದನಹಳ್ಳಿ ಸರ್ವೆ ನಂ.8ರಲ್ಲಿ 5.05 ಎಕರೆ, ಸರ್ವೆ ನಂ.60ರಲ್ಲಿ 6.10 ಎಕರೆ ಹಾಗೂ ಸರ್ವೆ ನಂ.68ರಲ್ಲಿ 8.25 ಎಕರೆ ಭೂಮಿಯನ್ನು ಎಂಎಂಸಿಆರ್‌ಐಗೆ ಹಸ್ತಾಂತರಿಸಲಾಗಿದೆ. ಕಟ್ಟಡದ ನೀಲನಕ್ಷೆಯನ್ನೂ ಸಿದ್ಧಪಡಿಸಲಾಗಿದೆ.

ಈ ಆಸ್ಪತ್ರೆಯು ನ್ಯೂರಾಲಜಿ, ನ್ಯೂರೋ ಸರ್ಜರಿ, ನ್ಯೂರೋ ರೇಡಿಯಾಲಜಿ, ನ್ಯೂರೋ ಅನಸ್ತೇಶಿಯಾ, ನ್ಯೂರೋ ಸೈಕ್ಯಾಟ್ರಿ, ಪುನರ್ವಸತಿ ಕೇಂದ್ರ, ಬ್ಲಡ್‌ ಬ್ಯಾಂಕ್‌, ಪ್ರಯೋಗಾಲಯ ಹೊಂದಿರಲಿದೆ. ಇದು ನಿರ್ಮಾಣವಾದಲ್ಲಿ ಕೆ.ಆರ್. ಆಸ್ಪತ್ರೆ ಹಾಗೂ ಬೆಂಗಳೂರಿನ ನಿಮ್ಹಾನ್ಸ್‌ ಮೇಲಿನ ಒತ್ತಡ ಕಡಿಮೆ ಆಗಲಿದೆ ಎಂದು ಆಶಿಸಲಾಗಿದೆ.

ಬೆಂಗಳೂರಿನಲ್ಲಿರುವ ನಿಮ್ಹಾನ್ಸ್‌ ಸಂಸ್ಥೆಗೆ, ನಿತ್ಯವೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಜೊತೆಗೆ ಹೊರರಾಜ್ಯಗಳಿಂದಲೂ ರೋಗಿಗಳು ಚಿಕಿತ್ಸೆಗೆಂದು ಬರುತ್ತಾರೆ. ಹೀಗಾಗಿ, ಅಲ್ಲಿ ಬಹಳ ಒತ್ತಡವಿದೆ. ಆ ಹೊರೆ ಕಡಿಮೆ ಮಾಡುವ ಉದ್ದೇಶದಿಂದ ಬೆಂಗಳೂರಿನ ಹೊರಗೂ ಆಸ್ಪತ್ರೆ ನಿರ್ಮಿಸುವ ಯೋಜನೆಯನ್ನು ಹೊಂದಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ಕಟ್ಟಡದಲ್ಲಿ ಏನೇನಿರಲಿದೆ?

ಆಸ್ಪತ್ರೆಯಲ್ಲಿ ದೊರೆಯಲಿರುವ ಸೌಲಭ್ಯಗಳು

ನೆಲಮಹಡಿ: ರೇಡಿಯೋಲಜಿ ಲಿನಿಯರ್‌ ಎಕ್ಸಿಲರೇಟರ್‌ ಫಾರ್ಮಸಿ ಟ್ರಯೇಜ್‌/ ಎಮರ್ಜೆನ್ಸಿ ಓಟಿ ಪ್ರಿಆಪರೇಟಿವ್ ರಿಕವರಿ. ಮೊದಲನೇ ಮಹಡಿ: ಅನ್ಕಾಲಜಿ ವಾರ್ಡ್‌ (ಮಹಿಳೆಯರು) ಅನ್ಕಾಲಜಿ ವಾರ್ಡ್‌ (ಮಹಿಳೆಯರು) ಅಸೋಸಿಯೇಟ್ ಪ್ರೊಫೆಸರ್‌ ಕೊಠಡಿಗಳು ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕವಾಗಿ ಸೈಕಿಯಾಟ್ರಿ ವಾರ್ಡ್‌ಗಳು ಫಿಸಿಯಾಟ್ರಿ ಒಪಿಡಿಗಳು ಹಾಗೂ ಸೆಮಿನಾರ್‌ ಕೊಠಡಿಗಳು. 2ನೇ ಮಹಡಿ: ನ್ಯೂರೋ ಸರ್ಜರಿ 7 ಸೆಮಿಸ್ಪೆಷಲ್‌ ವಾರ್ಡ್‌ಗಳು ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕ ವಾರ್ಡ್‌ಗಳು ಒಪಿಡಿ ಕೊಠಡಿಗಳು 2 ವಿಐಪಿ ವಾರ್ಡ್‌. 3ನೇ ಮಹಡಿ: ಸಿಎಸ್‌ಎಸ್‌ಡಿ ನ್ಯೂರೋ–ಪುನರ್ವಸತಿ ಹಾಲ್‌ ನ್ಯೂರೋ–ಪುನರ್ವಸತಿ ವಾರ್ಡ್‌ ಅಸೋಸಿಯೇಟ್‌ ಪ್ರೊಫೆಸರ್‌ ಕೊಠಡಿಗಳು ಒಪಿಡಿ ಕೊಠಡಿಗಳು ಮಹಿಳೆಯರು ಹಾಗೂ ಪುರುಷರಿಗೆ ನ್ಯೂರೋಲಜಿ ವಾರ್ಡ್‌ಗಳು ಸೆಮಿನಾರ್‌ ಕೊಠಡಿ ಡ್ರಗ್‌ ಸ್ಟೋರ್‌. 4ನೇ ಮಹಡಿ: ರಿಕವರಿ ವಾರ್ಡ್‌ ಅನಸ್ತೇಷಿಯಾ ಸ್ಟೆರೈಲ್‌ ಝೋನ್‌ ಒಟಿಗಳು ಎಚ್‌ಡಿಯು ವಾರ್ಡ್‌ಗಳು ಐಸಿಯುಗಳು ಸೆಮಿನಾರ್‌ ರೂಂಗಳು ನ್ಯೂರೋ ರೇಡಿಯಾಲಜಿ ವಾರ್ಡ್‌. 5ನೇ ಮಹಡಿ: ರಕ್ತನಿಧಿ ಔಷಧಾಲಯ ವೈದ್ಯರ ಉಪಾಹಾರ ಗೃಹ ಸಾರ್ವಜನಿಕ ಕ್ಯಾಂಟೀನ್‌ ಮೆಡಿಕಲ್ ರೆಕಾರ್ಡ್‌ ಕೊಠಡಿ ವೇಟಿಂಗ್‌ ರೂಂ ಕಾನ್ಫರೆನ್ಸ್ ಕೊಠಡಿಗಳು ಮೊದಲಾದವು. ಇನ್ನಿತರ ಸೌಲಭ್ಯ: ಲಿಫ್ಟ್ ಸಿಸಿಟಿವಿ ಕ್ಯಾಮೆರಾಗಳು ಟೆಲಿಫೋನ್‌ ನೆಟ್‌ವರ್ಕಿಂಗ್‌ ಯುಪಿಎಸ್ ವ್ಯವಸ್ಥೆ ಸೋಲಾರ್ ಎಚ್‌ವಿಎಸಿ ಸೌಲಭ್ಯ ಮೆಡಿಕಲ್ ಗ್ಯಾಸ್ ಪೈಪ್‌ಲೈನ್‌ ಫಾಲ್‌ ಸೀಲಿಂಗ್ ಅಗ್ನಿನಂದಕಗಳು ಮೆಟ್ಟಿಲುಗಳು ಹಾಗೂ ರ‍್ಯಾಂಪ್‌.

ಈಗ ಏನಿದೆ ಪರಿಸ್ಥಿತಿ? ಪ್ರಸ್ತುತ ಮಾನಸಿಕ ಆರೋಗ್ಯ ಹಾಗೂ ನರರೋಗಕ್ಕೆ ಸಂಬಂಧಿಸಿದ ಚಿಕಿತ್ಸೆಗಾಗಿ ಈ ಭಾಗದ ರೋಗಿಗಳು ಮೈಸೂರಿನ ಕೆ.ಆರ್. ಆಸ್ಪತ್ರೆಯನ್ನು ಅವಲಂಬಿಸಬೇಕಾಗಿದೆ. ಅಲ್ಲಿನ ನರರೋಗ ವಿಭಾಗದಲ್ಲಿ ಇಬ್ಬರು ಸರ್ಜನ್‌ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ನರರೋಗಕ್ಕೆ ಸಂಬಂಧಿಸಿದಂತೆ ವಾರಕ್ಕೆ ಸರಾಸರಿ 350ರಿಂದ 400 ಮಂದಿ ಚಿಕಿತ್ಸೆಗೆಂದು ಬರುತ್ತಿದ್ದಾರೆ. ಉಳಿದಂತೆ ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸಬೇಕಾಗಿದೆ. ಇಲ್ಲವೇ ಬೆಂಗಳೂರಿನ ನಿಮ್ಹಾನ್ಸ್‌ಗೆ ಹೋಗಬೇಕಾಗಿದೆ.

‘ಐದು ಜಿಲ್ಲೆಗಳವರಿಗೆ ಅನುಕೂಲ’

‘ಕೆಲವು ಅತ್ಯಾಧುನಿಕ ಸೇವೆಗಳಿಗಾಗಿ ಈ ಭಾಗದ ಜನರು ಬೆಂಗಳೂರಿನ ನಿಮ್ಹಾನ್ಸ್‌ಗೆ ಹೋಗಬೇಕಾದ ಪರಿಸ್ಥಿತಿ ಇದೆ. ಇದನ್ನು ಹೋಗಲಾಡಿಲು ಮೈಸೂರಿನಲ್ಲೇ ಹೊಸದಾಗಿ ಆಸ್ಪತ್ರೆ ನಿರ್ಮಿಸುವ ಯೋಜನೆಯನ್ನು ಸರ್ಕಾರ ರೂಪಿಸಿದೆ’ ಎಂದು ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಎಂಎಂಸಿಆರ್‌ಐ)ಯ ಡೀನ್‌ ಡಾ.ದಾಕ್ಷಾಯಿಣಿ ‘ಪ್ರಜಾವಾಣಿ’ಗೆ ತಿಳಿಸಿದರು. ‘ಇದು ನಿರ್ಮಾಣಗೊಂಡಲ್ಲಿ ಮೈಸೂರು ಮಂಡ್ಯ ಚಾಮರಾಜನಗರ ಹಾಸನ ಹಾಗೂ ಕೊಡಗು ಜಿಲ್ಲೆಗಳ ಜನರಿಗೆ ಇಲ್ಲೇ ಸೇವೆ ದೊರೆಯಲಿದೆ. ಬೆಂಗಳೂರಿಗೆ ಹೋಗಬೇಕಾಗುವ ಪರಿಸ್ಥಿತಿ ಇರುವುದಿಲ್ಲ. ಇದರಿಂದ ಸಮಯ ಹಾಗೂ ಹಣ ಉಳಿತಾಯ ಆಗುತ್ತದೆ. ಸುಧಾರಿತ ಸೇವೆಯೂ ಲಭ್ಯವಾಗಲಿದೆ’ ಎನ್ನುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.