ADVERTISEMENT

ಎಐನಿಂದ ಹೊಸ ತಂತ್ರಜ್ಞಾನ ಕ್ರಾಂತಿ: ಹೈಕೋರ್ಟ್‌ ನ್ಯಾಯಮೂರ್ತಿ ಶುಕುರೆ ಕಮಲ್‌

​ಪ್ರಜಾವಾಣಿ ವಾರ್ತೆ
Published 13 ಜುಲೈ 2024, 16:09 IST
Last Updated 13 ಜುಲೈ 2024, 16:09 IST
ಮೈಸೂರಿನ ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಪ್ರೊ.ಪಿ.ಎಂ. ಚಿಕ್ಕಬೋರಯ್ಯ ಸ್ಮರಣಾರ್ಥ ಆಯೋಜಿಸಿದ್ದ ‘ಕೃತಕ ಬುದ್ಧಿಮತ್ತೆ ಮತ್ತು ನ್ಯಾಯ ವ್ಯವಸ್ಥೆ: ಈಗಿನ ಬೆಳವಣಿಗೆಗಳು’ ಕುರಿತ ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಹೈಕೋರ್ಟ್‌ ನ್ಯಾಯಮೂರ್ತಿ ಎಂ.ಜಿ. ಶುಕುರ್‌ ಕಮಲ್‌ ಮಾತನಾಡಿದರು
ಮೈಸೂರಿನ ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಪ್ರೊ.ಪಿ.ಎಂ. ಚಿಕ್ಕಬೋರಯ್ಯ ಸ್ಮರಣಾರ್ಥ ಆಯೋಜಿಸಿದ್ದ ‘ಕೃತಕ ಬುದ್ಧಿಮತ್ತೆ ಮತ್ತು ನ್ಯಾಯ ವ್ಯವಸ್ಥೆ: ಈಗಿನ ಬೆಳವಣಿಗೆಗಳು’ ಕುರಿತ ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಹೈಕೋರ್ಟ್‌ ನ್ಯಾಯಮೂರ್ತಿ ಎಂ.ಜಿ. ಶುಕುರ್‌ ಕಮಲ್‌ ಮಾತನಾಡಿದರು   

ಮೈಸೂರು: ‘ಅರಾಜಕತೆ, ಯುದ್ಧ, ಸ್ವಾತಂತ್ರ್ಯ ಚಳವಳಿ, ಹಸಿರು–ಕಾರ್ಮಿಕ ಕ್ರಾಂತಿ ಮೊದಲಾದವುಗಳನ್ನು ಕಂಡ ಈ ಭೂಮಿಯಲ್ಲೀಗ ಮತ್ತೊಂದು ಹೊಸ ಕ್ರಾಂತಿಯು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಮೂಲಕ ಹುಟ್ಟಲು ಸಿದ್ಧವಾಗುತ್ತಿದೆ’ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಎಂ.ಜಿ. ಶುಕುರೆ ಕಮಲ್‌ ವ್ಯಾಖ್ಯಾನಿಸಿದರು.

ಇಲ್ಲಿನ ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಪ್ರೊ.ಪಿ.ಎಂ. ಚಿಕ್ಕಬೋರಯ್ಯ ಸ್ಮರಣಾರ್ಥ ಆಯೋಜಿಸಿದ್ದ ‘ಕೃತಕ ಬುದ್ಧಿಮತ್ತೆ ಮತ್ತು ನ್ಯಾಯ ವ್ಯವಸ್ಥೆ: ಈಗಿನ ಬೆಳವಣಿಗೆಗಳು’ ಕುರಿತ ರಾಷ್ಟ್ರೀಯ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ಈ ಆಧುನಿಕ ತಂತ್ರಜ್ಞಾನ ಪ್ರಣೀತ ಸ್ಥಿತ್ಯಂತರವು ಮಾನವ ಜನಾಂಗಕ್ಕೆ ಪೂರಕವೋ ಅಥವಾ ಮಾರಕವೋ ಎನ್ನುವುದನ್ನು ನಾವು ಕಾದು ಕೋಡಬೇಕಿದೆ’ ಎಂದರು.

ADVERTISEMENT

ಗಾಬರಿಯಾಗುತ್ತದೆ: ‘ಆಧುನಿಕ ತಂತ್ರಜ್ಞಾನದ ಮೇಲೆ ಏಕಸ್ವಾಮ್ಯ ಮತ್ತು ಹಿಡಿತ ಸಾಧಿಸಿದ ರಾಷ್ಟ್ರಗಳೇ ಇಂದು ಅತ್ಯಂತ ಶಕ್ತಿಶಾಲಿಗಳೆಂದು ಗುರುತಿಸಿಕೊಂಡಿರುವ ಈ ಹೊತ್ತಿನಲ್ಲಿ ಎಐ ಎಂಬುದು ಅಂತಹ ದೇಶಗಳ ಕೈಗೆ ಸಿಕ್ಕರೆ ಏನಾಗಬಹುದು ಎಂಬುದನ್ನು ಅರಿಯಲು ಹೊರಟರೆ ಗಾಬರಿಯಾಗುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಮನುಷ್ಯ ನದಿ, ಬೆಟ್ಟ– ಗುಡ್ಡಗಳನ್ನೆಲ್ಲ ವ್ಯಕ್ತಿತ್ವದ ಭಾಗವಾಗಿ ನೋಡುತ್ತಿರುವ ಹೊತ್ತಿನಲ್ಲಿಯೇ ಯುಎಇ ದೇಶವು ‘ಸೋಫಿಯಾ’ ಎಂಬ ರೊಬೊಟ್‌ಗೆ ನಾಗರಿಕ ಹಕ್ಕುಗಳನ್ನು ನೀಡಿತು. ಈಗಾಗಲೇ ಚಾಲಕ ರಹಿತ ಕಾರುಗಳು ಚಾಲಕನ ಜಾಗಕ್ಕೆ ಬಂದಿವೆ. ವಕೀಲರು, ನ್ಯಾಯಾಧೀಶರಿಲ್ಲದೆ ಕೇವಲ ಎಐ ಇಟ್ಟುಕೊಂಡೇ ಮುಂದಿನ ದಿನಗಳಲ್ಲಿ ನ್ಯಾಯಾಲಯದ ಕಲಾಪಗಳು ನಡೆಯುವ ದಿನಗಳು ದೂರವಿಲ್ಲ’ ಎಂದರು.

ಎಐ ಅವಲಂಬಿಸಿ ಚಟುವಟಿಕೆ: ‘ಮುಂದಿನ ಕಾಲು ಶತಮಾನವಂತೂ ಇಡೀ ಜಗತ್ತಿನ ವ್ಯಾಪಾರ ವಹಿವಾಟು, ಕಾರ್ಪೊರೇಟ್‌ ಕಂಪನಿಗಳ ನಿತ್ಯದ ವಿದ್ಯಮಾನಗಳು ಎಐ ಅವಲಂಬಿಸಿಯೇ ಚಟುವಟಿಕೆ ನಡೆಸಲಿವೆ. ಈಗ ಆಧುನಿಕ ತಂತ್ರಜ್ಞಾನವು ಎಐ ರೂಪದಲ್ಲಿ ಮತ್ತೊಂದು ಅನೂಹ್ಯ ಸಾಧ್ಯತೆಯತ್ತಲೂ ಮಾನವ ಜನಾಂಗವನ್ನು ಕರೆದೊಯ್ಯುತ್ತಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

‘ಜಾತಿ, ಧರ್ಮ, ಮತ, ನಂಬಿಕೆಗಳ ಆಧಾರದ ಮೇಲೆ ಚದುರಿ ಛಿದ್ರವಾಗಿರುವ ಭಾರತದಂಥ ಬಹುತ್ವದ ಆಶಯಗಳುಳ್ಳ ದೇಶಕ್ಕೆ ಎಐ ತಂದೊಡ್ಡಬಹುದಾದ ಅಪಾಯಗಳತ್ತಲೂ ನಾವೆಲ್ಲರೂ ಗಂಭೀರವಾಗಿ ತಲೆಕೆಡಿಸಿಕೊಳ್ಳಲೇಬೇಕಾಗಿದೆ. ಇದಕ್ಕಾಗಿ ಶೈಕ್ಷಣಿಕ ಮತ್ತು ಸಂಶೋಧನಾ ವಲಯದಲ್ಲಿ ಗಂಭೀರ ಅಧ್ಯಯನಗಳು ಹಾಗೂ ವಿಚಾರಸಂಕಿರಣಗಳು ಹೆಚ್ಚಾಗಿ ನಡೆಯಬೇಕಿದೆ’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕಾನೂನು ಕಾಲೇಜಿನ ಪ್ರಾಂಶುಪಾಲ ಪ್ರೊ.ವಿ.ಸುದೇಶ್‌ ಹೇಳಿದರು.

‘ಮೀಟಾ, ಚಾಟ್‌ ಜಿಪಿಟಿಯಂಥವು ಮನುಷ್ಯನ ಒಳಿತಿಗೆ ನೆರವಾಗುವುದಕ್ಕಿಂತಲೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಿ ವ್ಯಕ್ತಿಗಳ ನಡುವೆ ಬಿರುಕು ಉಂಟು ಮಾಡಲು, ತೇಜೋವಧೆಗೆಂದೇ ಬಳಕೆಯಾಗುತ್ತಿವೆ. ಬಹಳ ಸುಲಭಕ್ಕೆ ಸಿಕ್ಕ ತಂತ್ರಜ್ಞಾನಗಳು ಉಳ್ಳವರ ಕೈಯೊಳಗಿನ ಆಯುಧಗಳಾಗಿಯೂ ಬಳಕೆಯಾಗುವ ಸಾಧ್ಯತೆಗಳನ್ನು ನಿರಾಕರಿಸುವಂತಿಲ್ಲ’ ಎಂದರು.

ಕಳೆದ ವರ್ಷ ನಡೆದ ಪ್ರೊ.ಪಿ.ಎಂ.ಚಿಕ್ಕಬೋರಯ್ಯ ನೆನಪಿನ ಉಪನ್ಯಾಸ ಮಾಲೆ-5ರ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.

ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿ ಸದಸ್ಯ ಶಿವಲಿಂಗಯ್ಯ, ವಿದ್ಯಾವರ್ಧಕ ಕಾನೂನು ಕಾಲೇಜಿನ ಪ್ರಾಂಶುಪಾಲೆ ಪಿ.ದೀಪು, ಕಾರ್ಯಕ್ರಮದ ಸಂಯೋಜಕ ಎಸ್.ಬಿ. ಬೋರೇಗೌಡ, ಎ.ಆರ್.ಪ್ರಕೃತಿ, .ಕೆ.ಎಲ್.ಚಂದ್ರಶೇಖರ್ ಪಾಲ್ಗೊಂಡಿದ್ದರು.

ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಆಯೋಜನೆ ಎಐ ಮೇಲೆ ಬೆಳಕು ಚೆಲ್ಲಿದ ಉಪನ್ಯಾಸ ಅಳವಡಿಕೆಯ ಸಾಧ್ಯತೆಗಳ ಬಗ್ಗೆ ವಿಚಾರಮಂಡನೆ
ಭಾರತವು ಇಂದಲ್ಲ ನಾಳೆ ಎಐಗೆ ತೆರೆದುಕೊಳ್ಳಬೇಕಾದ ಅನಿವಾರ್ಯತೆ ಬರಲಿದೆ. ಅದಕ್ಕೆ ಸಜ್ಜಾಗಲು ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ಅದನ್ನು ತಿಳಿದುಕೊಳ್ಳಬೇಕು
ಶುಕುರೆ ಕಮಲ್‌ ಹೈಕೋರ್ಟ್‌ ನ್ಯಾಯಮೂರ್ತಿ
‘ಪಾಶ್ಚಿಮಾತ್ಯ ದೇಶಗಳಲ್ಲಿ ಅಳವಡಿಕೆ’
‘ಭಾರತದ ನ್ಯಾಯಾಂಗ ವ್ಯವಸ್ಥೆಗೆ ತೀರಾ ಅಪರಿಚಿತ ಅನ್ನಿಸುವಂತಿದ್ದ ಕೃತಕ ಬುದ್ಧಿಮತ್ತೆಯನ್ನು ಪಾಶ್ಚಿಮಾತ್ಯ ದೇಶಗಳು ತಮ್ಮ ನಿತ್ಯದ ನ್ಯಾಯಾಂಗೀಯ ವಿಚಾರಣಾ ಪ್ರಕ್ರಿಯೆಗಳಲ್ಲಿ ಈಗಾಗಲೇ ಅಳವಡಿಸಿಕೊಂಡು ತೀರ್ಪು ನೀಡುವ ಸಾಧ್ಯತೆಗಳತ್ತ ಮುಖಮಾಡಿವೆ’ ಎಂದು ಶುಕುರೆ ಕಮಲ್‌ ತಿಳಿಸಿದರು. ‘ಭಾರತಕ್ಕೆ ತೀರಾ ಹೊಸದೆನ್ನುವ ಎಐ ಪಶ್ಚಿಮದ ದೇಶಗಳಿಗೆ ತೀರಾ ಹಳೆಯದೇ ಎನ್ನುವಂತಾಗಿದೆ. ನ್ಯಾಯ ನೀಡಿಕೆಯ ವ್ಯವಸ್ಥೆಗೆ ತಂತ್ರಜ್ಞಾನದ ಮೂಗು ತೂರಿಸುವಿಕೆಯನ್ನು ಅಲ್ಲಗಳೆಯುವಂತೆಯೂ ಇಲ್ಲ; ಆ ಸಾಧ್ಯತೆಯನ್ನು ನಿರಾಕರಿಸುವಂತೆಯೂ ಇಲ್ಲ’ ಎಂದು ಹೇಳಿದರು. ‘ನ್ಯಾಯ ನೀಡಿಕೆಯ ಪ್ರಕ್ರಿಯೆಯಲ್ಲಿ ಮನುಷ್ಯರು ಎಸಗಬಹುದಾದ ತಪ್ಪುಗಳನ್ನು ಮನುಷ್ಯರೇ ಸರಿಪಡಿಸಬಹುದಾದ ಸಾಧ್ಯತೆಗಳು ನಮ್ಮಲ್ಲಿ ಹೇರಳವಾಗಿವೆ. ಆದರೆ ತಂತ್ರಜ್ಞಾನ ಎಸಗುವ ತಪ್ಪುಗಳನ್ನು ಈ ಮನುಷ್ಯ ಜಗತ್ತು ನ್ಯಾಯಿಕ ವ್ಯವಸ್ಥೆ ಹೇಗೆ ಎದುರಿಸಲಿದೆ ಎಂಬುದು ನಿಜಕ್ಕೂ ಸವಾಲಿನ ವಿಷಯವಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.