
ಮೈಸೂರು: ಶ್ರೀರಂಗಪಟ್ಟಣದಿಂದ ಕುಶಾಲನಗರವನ್ನು ಬೆಸೆಯುವ ರಾಷ್ಟ್ರೀಯ ಹೆದ್ದಾರಿ 275ರ ಕಾಮಗಾರಿ ಭರದಿಂದ ಸಾಗಿದ್ದು, ಮುಂದಿನ ವರ್ಷಾಂತ್ಯಕ್ಕೆ ಬಳಕೆಗೆ ಮುಕ್ತವಾಗಲಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿಯಿಂದ ಕೊಡಗು ಜಿಲ್ಲೆಯ ಕುಶಾಲನಗರದ ಗುಡ್ಡೆಹೊಸೂರುವರೆಗೆ ಬರೋಬ್ಬರಿ 92 ಕಿ.ಮೀ. ಉದ್ದದ ಹೆದ್ದಾರಿ ಇದು. ಇದರಲ್ಲಿ 84 ಕಿ.ಮೀ. ನಷ್ಟು (ಗ್ರೀನ್‌ಫೀಲ್ಡ್) ರಸ್ತೆ ಹೊಸತಾಗಿ ನಿರ್ಮಾಣವಾಗುತ್ತಿರುವುದು ವಿಶೇಷ. ಹಸಿರು ಹೊದ್ದ ಗದ್ದೆಗಳು, ಕಾಲುವೆಗಳಲ್ಲಿ ಹರಿಯುವ ಝಳುಝುಳು ನೀರಿನ ನಡುವೆಯೇ ಹೆದ್ದಾರಿ ಸಾಗಲಿದ್ದು, ಪ್ರಯಾಣಿಕರಿಗೆ ವಿಶೇಷ ಅನುಭವ ನೀಡಲಿದೆ.
ಈ ಹೆದ್ದಾರಿ ನಿರ್ಮಾಣ ನಡೆದಿರುವ ಕಡೆ ‘ಪ್ರಜಾವಾಣಿ’ ಭೇಟಿ ಕೊಟ್ಟು ಅಲ್ಲಿನ ವಸ್ತುಸ್ಥಿತಿ ಅರಿಯುವ ಪ್ರಯತ್ನ ಮಾಡಿದೆ.
ನಾಲ್ಕು ಹಂತದ ಪ್ಯಾಕೇಜ್: ಇಡೀ ಕಾಮಗಾರಿಯನ್ನು ನಾಲ್ಕು ಪ್ಯಾಕೇಜ್‌ಗಳನ್ನಾಗಿ ವಿಂಗಡಿಸಲಾಗಿದೆ. ‘ಮೈಸೂರು–ಕುಶಾಲನಗರ ಹೆದ್ದಾರಿ’ ಎಂದು ಯೋಜನೆಗೆ ಹೆಸರಿಟ್ಟಿದ್ದರೂ ಯೋಜನೆ ಆರಂಭಗೊಳ್ಳುವುದು ಮಂಡ್ಯ ಜಿಲ್ಲೆಯ ಗಡಿಯಿಂದ. ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಪ್ರಯಾಣಿಸುವವರು ಶ್ರೀರಂಗಪಟ್ಟಣದ ಬಳಿ ಹೆದ್ದಾರಿಗೆ ಹೊರಳಿ ಕುಶಾಲನಗರದವರೆಗೂ ಪ್ರಯಾಣಿಸಬಹುದು.
ಪಶ್ಚಿಮವಾಹಿನಿಯಿಂದ ಮೈಸೂರು ತಾಲ್ಲೂಕಿನ ಇಲವಾಲ ಹೋಬಳಿಯ ಯಲಚಹಳ್ಳಿವರೆಗೆ ‘ಪ್ಯಾಕೇಜ್–5’ ಹಾಗೂ ಯಲಚಹಳ್ಳಿಯಿಂದ ಹುಣಸೂರುವರೆಗೆ ‘ಪ್ಯಾಕೇಜ್–4’ ಕಾಮಗಾರಿಗಳು ಭರದಿಂದ ಸಾಗಿವೆ. ಬೆಳಗೊಳ ಸಮೀಪ ಕಾಲುವೆಯ ಒಳಗೂ ಬೃಹತ್ತಾದ ಪಿಲ್ಲರ್‌ಗಳನ್ನು ಕಟ್ಟಿ ಸೇತುವೆಗಳನ್ನು ನಿರ್ಮಿಸಲಾಗುತ್ತಿದೆ. ಬೃಹತ್ ಯಂತ್ರಗಳು ನೆಲ ಬಗೆದು ಕಾಂಕ್ರೀಟ್ ಹಾಸುತ್ತಿವೆ.
ಬಹುತೇಕ ಕಡೆಗಳಲ್ಲಿ ಸಿವಿಲ್ ಕಾಮಗಾರಿಗಳು ಅರ್ಧದಷ್ಟು ಪೂರ್ಣಗೊಂಡಿವೆ. ಹುಣಸೂರಿನಿಂದ ಪಿರಿಯಾಪಟ್ಟಣದವರೆಗಿನ ‘ಪ್ಯಾಕೇಜ್–3’ ಹಾಗೂ ಪಿರಿಯಾಪಟ್ಟಣದಿಂದ ಕುಶಾಲನಗರದವರೆಗಿನ ‘ಪ್ಯಾಕೇಜ್–2’ ಕಾಮಗಾರಿಗಳೂ ಆರಂಭಗೊಂಡಿವೆ.
ಬೆಂಗಳೂರು–ಮೈಸೂರು ನೂತನ ಹೆದ್ದಾರಿ ಮಾದರಿಯಲ್ಲಿಯೇ ಇದನ್ನೂ ವಿನ್ಯಾಸಗೊಳಿಸಲಾಗಿದೆ. ಇಲ್ಲಿ ನಾಲ್ಕು ಪಥದ ರಸ್ತೆ ಇರಲಿದೆ. ರಸ್ತೆಗಳ ಅಗಲವು ಕನಿಷ್ಠ 45 ಮೀಟರ್‌ನಿಂದ ಗರಿಷ್ಠ 60 ಮೀಟರ್‌ವರೆಗೆ ಇರಲಿದೆ. ವಾಹನಗಳ ಪ್ರವೇಶ–ನಿರ್ಗಮನಕ್ಕೆ ನಿರ್ಬಂಧವೂ ಇರಲಿದೆ.
ಅಲ್ಲೇ ಪರೀಕ್ಷೆ– ಪ್ರಯೋಗಾಲಯ: ‘ಪ್ರತಿ ಪ್ಯಾಕೇಜ್‌ನಲ್ಲೂ ಗುತ್ತಿಗೆ ಕಂಪನಿಗಳು ತಮ್ಮದೇ ಉತ್ಪಾದನಾ ಘಟಕಗಳನ್ನು ಹೊಂದಿವೆ. ನೆಲಹಾಸಿನಿಂದ ಹಿಡಿದು ಕಾಂಕ್ರೀಟ್ ಬ್ಲಾಕ್‌ಗಳು, ಬೃಹತ್ ಗಾತ್ರದ ಸೇತುವೆ ನಿರ್ಮಾಣ ಸಾಮಗ್ರಿಗಳನ್ನು ಒಂದೆಡೆ ತಯಾರಿಸಿ, ಬೃಹತ್ ಯಂತ್ರಗಳ ಮೂಲಕ ಅಗತ್ಯವಿರುವಲ್ಲಿಗೆ ಸಾಗಿಸಿ ಜೋಡಿಸಲಾಗುತ್ತಿದೆ. ಇದರಿಂದ ಕಾಮಗಾರಿ ಇನ್ನಷ್ಟು ವೇಗ ಪಡೆದಿದೆ’ ಎನ್ನುತ್ತಾರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು.
‘ಈ ಹೆದ್ದಾರಿಗೆ ಇತರೆ ಕಚ್ಚಾವಸ್ತುಗಳ ಜೊತೆಗೆ ಶೇ 2–2.5ರಷ್ಟು ಸಿಮೆಂಟ್ ಅನ್ನೂ ಬಳಸಲಾಗುತ್ತಿದೆ. ಗುಣಮಟ್ಟದ ಪರೀಕ್ಷೆಗೆ ಸ್ಥಳದಲ್ಲೇ ಪರೀಕ್ಷೆಗಳನ್ನು ಮಾಡಲಾಗುತ್ತಿದ್ದು, ಪ್ರತ್ಯೇಕ ಪ್ರಯೋಗಾಲಯವೂ ಇದೆ’ ಎನ್ನುತ್ತಾರೆ ಯೋಜನೆ ಉಸ್ತುವಾರಿ ನೋಡಿಕೊಳ್ಳುತ್ತಿರುವ ಶ್ರೀನಿವಾಸನ್ ಮಾಮಡಿ.
ರಂಗನತಿಟ್ಟು ಪಕ್ಷಿಧಾಮದಲ್ಲಿನ ಬಾನಾಡಿಗಳ ಸ್ವಚ್ಛಂದ ವಿಹಾರಕ್ಕೆ ಅಡ್ಡಿಯಾಗದಿರಲಿ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಹೆದ್ದಾರಿಗೇ ತಡೆಗೋಡೆ ಕಟ್ಟಲಿದೆ. ಹೌದು! ಮೈಸೂರು–ಕುಶಾಲನಗರ ಹೆದ್ದಾರಿಯು ಇಂತಹದ್ದೊಂದು ವಿಶೇಷ ನಿರ್ಮಾಣವನ್ನು ಒಳಗೊಳ್ಳಲಿದೆ. ‘ಪಕ್ಷಿಧಾಮಕ್ಕೆ ಹೊಂದಿಕೊಂಡಂತೆಯೇ ರಸ್ತೆ ಹಾದುಗೋಗುತ್ತಿದ್ದು ವಾಹನಗಳ ಶಬ್ದಕ್ಕೆ ಹಕ್ಕಿಗಳು ಬೆಚ್ಚಬಾರದೆಂದು ಹೆದ್ದಾರಿಯ ಆಚೀಚೆ ಸುಮಾರು 650 ಮೀಟರ್ ಉದ್ದಕ್ಕೆ ತಡೆಗೋಡೆಯನ್ನು ನಿರ್ಮಿಸಲು ಯೋಜಿಸಲಾಗಿದೆ. ಸುತ್ತಲಿನ ಮರಗಳ ಎತ್ತರಕ್ಕೆ ಗೋಡೆ ಕಟ್ಟಲಾಗುತ್ತದೆ. ಇದರಿಂದ ವಾಹನಗಳು ಹಕ್ಕಿಗಳ ಕಣ್ಣಿಗೆ ಕಾಣಿಸದು. ಶಬ್ದವೂ ಕೇಳಿಸದು. ಅರಣ್ಯ ಇಲಾಖೆಯ ಮಾರ್ಗದರ್ಶನದಂತೆ ಕಾಮಗಾರಿ ನಡೆಸುತ್ತೇವೆ’ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.