ADVERTISEMENT

ಇಷ್ಟು ಬೇಗ ರಾಜಕೀಯಕ್ಕೆ ಏಕೆ– ನಿಖಿಲ್‌ಗೆ ಕೃಷ್ಣ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2019, 7:04 IST
Last Updated 17 ಮಾರ್ಚ್ 2019, 7:04 IST
   

ಮೈಸೂರು:‘ಇಷ್ಟು ಬೇಗ ಲೋಕಸಭಾ ಚುನಾವಣೆಗೆ ಬರಬಾರದಿತ್ತು. ಸಿನಿಮಾ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿದ್ದವು. ವಿಧಾನಸಭೆಗೆ ಸ್ಪರ್ಧಿಸಿ ನಂತರ ಲೋಕಸಭೆಗೆ ಬರಬಹುದಿತ್ತು’ ಎಂದು ಮಾಜಿ ಸ್ಪೀಕರ್ ಕೃಷ್ಣ ಅವರು ತಮ್ಮನ್ನು ಶನಿವಾರ ರಾತ್ರಿ ಇಲ್ಲಿ ಭೇಟಿಯಾದ ನಿಖಿಲ್ ಕುಮಾರಸ್ವಾಮಿ ಅವರಿಗೆ ಸಲಹೆ ನೀಡಿದ್ದಾರೆ.

ಕೃಷ್ಣ ಅವರೊಂದಿಗೆ ನಿಖಿಲ್ ಕುಮಾರಸ್ವಾಮಿ, ಶಾಸಕಿ ಅನಿತಾ ಕುಮಾರಸ್ವಾಮಿ, ಸಂಸದ ಎಲ್.ಆರ್.ಶಿವರಾಮೇಗೌಡ, ಸಚಿವ ಸಾ.ರಾ.ಮಹೇಶ್ ಸುದೀರ್ಘ ಚರ್ಚೆ ನಡೆಸಿದರು. ಈ ವೇಳೆ ಬೆಂಬಲ ನೀಡುವಂತೆ ಕೃಷ್ಣ ಅವರಲ್ಲಿ ನಿಖಿಲ್ ಮನವಿ ಮಾಡಿದರು ಎಂದು ಗೊತ್ತಾಗಿದೆ.

ಸುಮಲತಾ ಅವರಿಗೆ ರಾಜಕೀಯ ಏಕೆ ಬೇಕಿತ್ತು?:ನಟ ಅಂಬರೀಷ್ ಅವರಿಗೆ ರಾಜಕೀಯ ಬೇಡ ಎನಿಸಿತ್ತು. ಅವರಿಗೆ ಬೇಡ ಎನಿಸಿದ್ದು ಸುಮಲತಾ ಅವರಿಗೆ ಏಕೆ ಬೇಕಿತ್ತು? ಎಂದು ಸಂಸದ ಎಲ್.ಆರ್.ಶಿವರಾಮೇಗೌಡ ಪ್ರಶ್ನಿಸಿದರು. ಮಾಜಿ ಸ್ಪೀಕರ್ ಕೃಷ್ಣ ಅವರ ನಿವಾಸಕ್ಕೆ ಶನಿವಾರ ರಾತ್ರಿ ಭೇಟಿ ನೀಡಿದ ಅವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ADVERTISEMENT

‘ಸುಮಲತಾ ಅವರು ಬೇರೆ ಪಕ್ಷದಿಂದ ಸ್ಪರ್ಧಿಸಿದರೆ ನನ್ನ ಆಕ್ಷೇಪ ಏನೂ ಇಲ್ಲ. ಆದರೆ, ಪಕ್ಷೇತರರಾಗಿ ಸ್ಪರ್ಧಿಸುವುದು ಸರಿಯಲ್ಲ. ಈಗ ಸ್ಪರ್ಧಿಸುವುದು ಸುಲಭ. ಆದರೆ, ಮುಂದಿನ ಚುನಾವಣೆಗಳಲ್ಲಿ ಅವರ ಗತಿ ಏನು ಎಂಬುದೇ ಪ್ರಶ್ನೆಯಾಗಿದೆ’ ಎಂದು ಅವರು ಹೇಳಿದರು.

ರಾಕ್‌ಲೈನ್‌ ವೆಂಕಟೇಶ್ ಅವರನ್ನು ಭೇಟಿ ಮಾಡಿ ಸುಮಲತಾ ಅವರಿಗೆ ಸ್ಪರ್ಧೆಯಿಂದ ಹಿಂದೆ ಸರಿಯುವಂತ ಸಲಹೆ ನೀಡಬೇಕು ಎಂದು ಮನವಿ ಮಾಡಿದ್ದೆ. ಈಗಲಾದರೂ ಸುಮಲತಾ ಮನಸ್ಸು ಮಾಡಿ ಸ್ಪರ್ಧೆಯಿಂದ ಹಿಂದೆ ಸರಿಯಲಿ ಎಂದು ಒತ್ತಾಯಿಸಿದರು. ಸಚಿವ ಸಾ.ರಾ.ಮಹೇಶ್ ಮಾತನಾಡಿ, ‘ನಿಖಿಲ್ ಮತ್ತು ಅಭಿಷೇಕ್ ಉತ್ತಮ ಸ್ನೇಹಿತರು. ಸುಮಲತಾ ಅವರು ತಮ್ಮ ಪುತ್ರನ ಸ್ನೇಹಿತನನ್ನು ಪುತ್ರನಂತೆ ಕಾಣಬಹುದಿತ್ತು. ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಯಾರೋ ಒತ್ತಡ ಹಾಕಿರಬಹುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.