ADVERTISEMENT

ಪುಕ್ಕಟೆ ಯೋಜನೆಗೆ ಕೇಂದ್ರದ ನೆರವಿಲ್ಲ: ನಿರ್ಮಲಾ ಸೀತಾರಾಮನ್‌

ರಾಜ್ಯ ಸರ್ಕಾರದ ‘ಗ್ಯಾರಂಟಿ’ ವಿರುದ್ಧ ವಿತ್ತ ಸಚಿವೆ ಟೀಕೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2024, 15:41 IST
Last Updated 24 ಮಾರ್ಚ್ 2024, 15:41 IST
<div class="paragraphs"><p>ನಿರ್ಮಲಾ ಸೀತಾರಾಮನ್‌</p></div>

ನಿರ್ಮಲಾ ಸೀತಾರಾಮನ್‌

   

ಮೈಸೂರು: ‘ರಾಜ್ಯ ಕಾಂಗ್ರೆಸ್ ಸರ್ಕಾರವು ಉಚಿತ ಯೋಜನೆಗಳಿಗೆ ಹಣ ಹೊಂದಿಸಲಾರದೇ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಆರೋಪಿಸಿದರು.

‘ಥಿಂಕರ್ಸ್ ಫೋರಂ ಮೈಸೂರು’ ಸಂಘಟನೆಯು ಇಲ್ಲಿನ ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ADVERTISEMENT

‘ಕಾಂಗ್ರೆಸ್‌ ಘೋಷಿಸಿದ್ದ ಐದು ಪುಕ್ಕಟೆ ಯೋಜನೆಗಳಿಗೆ ₹60 ಸಾವಿರ ಕೋಟಿ ಹಣ ಬೇಕು. ನಿಮಗೆ ಬಜೆಟ್‌ನಲ್ಲಿ ಅವಕಾಶ ಇದ್ದರೆ ಎಷ್ಟು ಬೇಕಾದರೂ ಉಚಿತ ಯೋಜನೆಗಳನ್ನು ನೀಡಿ. ಅದಕ್ಕೆ ಹಣ ಹೊಂದಿಸಿಕೊಳ್ಳಿ. ಅದಕ್ಕೆ ಕೇಂದ್ರದಿಂದ ಏಕೆ ಅನುದಾನ ನಿರೀಕ್ಷಿಸುತ್ತೀರಿ’ ಎಂದು ಪ್ರಶ್ನಿಸಿದರು.

‘ಕೇಂದ್ರದಿಂದ ಕರ್ನಾಟಕಕ್ಕೆ ಸಲ್ಲಬೇಕಾದ ಎಲ್ಲ ಅನುದಾನ ನೀಡಲಾಗಿದೆ. ಇದರ ಆಡಿಟ್ ಪ್ರಮಾಣಪತ್ರವನ್ನೂ ಬಿಡುಗಡೆ ಮಾಡುತ್ತೇವೆ. ಯಾವ ರಾಜ್ಯಕ್ಕೆ ಎಷ್ಟು ಪಾಲು ಸಲ್ಲಬೇಕು ಎಂಬ ಹಣಕಾಸು ಆಯೋಗದ ಶಿಫಾರಸಿನ ಕನ್ನಡ ಆವೃತ್ತಿಯನ್ನೂ ಕರ್ನಾಟಕ ಸರ್ಕಾರಕ್ಕೆ ತಲುಪಿಸುತ್ತೇವೆ’ ಎಂದರು.

ನ್ಯಾಯಾಲಯವೇ ತೀರ್ಮಾನಿಸಲಿ:

‘ಎನ್‌ಡಿಆರ್‌ಎಫ್‌ ಅನುದಾನದ ನೆಪ ಇಟ್ಟುಕೊಂಡು ಇದೀಗ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ ಮೊರೆ ಹೋಗಿದೆ. ನ್ಯಾಯ ಕೇಳುವುದು ಪ್ರಜೆಗಳ ಹಕ್ಕು. ಎಲ್ಲ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಇಡಿ. ನ್ಯಾಯಾಲಯವೇ ತೀರ್ಮಾನಿಸಲಿ’ ಎಂದು ಹೇಳಿದರು.

ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಬಂಧನ ವಿಷಯ ಪ್ರಸ್ತಾಪಿಸಿದ ಅವರು, ‘ದಾಖಲೆ, ತನಿಖೆ ಇಲ್ಲದೇ ಯಾರನ್ನೂ ಬಂಧಿಸಲು ಆಗದು. ಸಾಕಷ್ಟು ಸಮನ್ಸ್ ನೀಡಿಯೇ ಬಂಧಿಸಲಾಗಿದೆ. ಇದಕ್ಕೆ ನ್ಯಾಯಾಲಯದ ಸೂಚನೆಯೂ ಇತ್ತು. ಈ ವಿಷಯವನ್ನು ರಾಜಕೀಯ ಮಾಡಬಾರದು’ ಎಂದರು.

‘ಕಳೆದ ಹತ್ತು ವರ್ಷದ ಬಿಜೆಪಿ ಆಡಳಿತದಲ್ಲಿ ಭ್ರಷ್ಟಾಚಾರದ ಬಗ್ಗೆ ಒಂದು ಚುಕ್ಕೆ ಇಟ್ಟಿಲ್ಲ. ಈಗ ಕೆಲವರು ಚುನಾವಣಾ ಬಾಂಡ್‌ ಬಗ್ಗೆ ಮಾತನಾಡುತ್ತಿದ್ದಾರೆ. ಈ ಹಣ ಎಲ್ಲ ರಾಜಕೀಯ ಪಕ್ಷಗಳಿಗೂ ತಲುಪಿದೆ ಅಷ್ಟೇ. ಮೋದಿ ಹೆಸರಿಗೆ ಕಪ್ಪು ಮಸಿ ಬೆಳೆಯುವ ಪ್ರಯತ್ನ ಫಲಿಸದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.