ADVERTISEMENT

ನಾಸ್ತಿಕರಾದರೂ ಆಸ್ತಿಕತೆ ಗೌರವಿಸಿ: ನಿರ್ಮಲಾನಂದನಾಥ ಶ್ರೀ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2023, 12:54 IST
Last Updated 7 ಸೆಪ್ಟೆಂಬರ್ 2023, 12:54 IST
ನಿರ್ಮಲಾನಂದನಾಥ ಸ್ವಾಮೀಜಿ
ನಿರ್ಮಲಾನಂದನಾಥ ಸ್ವಾಮೀಜಿ   

ಮೈಸೂರು: 'ಧರ್ಮದ ನಿಜ ಅರ್ಥ ತಿಳಿದವರು ಇನ್ನೊಂದು ಧರ್ಮದ ಬಗ್ಗೆ ಮಾತನಾಡುವುದಿಲ್ಲ. ಧರ್ಮದ ಅರ್ಥ ತಿಳಿಯದವರು ತಾನು ಹುಟ್ಟಿದ ಧರ್ಮ ಹಾಗೂ ಅನ್ಯ ಧರ್ಮದ ಬಗ್ಗೆಯೂ ಮಾತನಾಡುತ್ತಾರೆ’ ಎಂದು ಆದಿಚುಂಚನಗಿರಿ ಪೀಠದ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ಸನಾತನ ಧರ್ಮದ ಕುರಿತು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆಗೆ ಮೈಸೂರಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಅವರು ‘ಸನಾತನ ಎಂಬುದಕ್ಕೆ ಪುರಾತನ ಎಂಬ ಅರ್ಥ ಇದೆ. ಹಿಂದೂ ಧರ್ಮ ಜಗತ್ತಿನ ಎಲ್ಲ ಧರ್ಮಗಳಿಗಿಂತ ಪುರಾತನವಾದುದರಿಂದ ಇದನ್ನು ಸನಾತನ ಧರ್ಮ ಎಂದು ಕರೆಯುತ್ತಾರೆ. ಧರ್ಮ ಎಂಬುದು ಆಮ್ಲಜನಕ ಇದ್ದಂತೆ. ಅದು ಇಲ್ಲದೆ ಬದುಕಲು ಸಾಧ್ಯವೇ’ ಎಂದು ಪ್ರಶ್ನಿಸಿದರು.

‘ಸೃಷ್ಟಿಯಲ್ಲಿ ಪ್ರತಿ ವ್ಯಕ್ತಿ, ಪ್ರತಿ ಧರ್ಮವೂ ಭಿನ್ನ. ನಾಡನ್ನು ಆಳುವ ದೊರೆ ನಾಸ್ತಿಕನಾದರೂ ಪ್ರಜೆಗಳ ಆಸ್ತಿಕತೆ ಗೌರವಿಸಬೇಕು ಎಂದು ಚಾಣಕ್ಯ ಬಹಳ ಹಿಂದೆಯೇ ಹೇಳಿದ್ದಾರೆ. ಇದು ಜನಪ್ರತಿನಿಧಿಗಳಿಗೂ ಅನ್ವಯಿಸುತ್ತದೆ ಎಂದರು. ಹಿಂದೂ ಧರ್ಮದ ಬಗ್ಗೆ ಹಿಂದೆಯೂ ಸಾಕಷ್ಟು ಅವಹೇಳನ ನಡೆದಿದೆ. ಇದು ಅತಿಯಾದಲ್ಲಿ ನಾವೂ ಇನ್ನೊಂದು ಹೆಜ್ಜೆ ಮುಂದಿಡಬೇಕಾಗುತ್ತದೆ’ ಎಂದು ಹೋರಾಟದ ಮುನ್ಸೂಚನೆಯನ್ನೂ ಅವರು ನೀಡಿದರು.

ADVERTISEMENT

ಇಂಡಿಯಾ ಬದಲಿಗೆ ಭಾರತ ಎಂಬ ಪದ ಬಳಕೆ ಬಗೆಗಿನ ಚರ್ಚೆ ಕುರಿತು ಪ್ರತಿಕ್ರಿಯಿಸಿದ ಶ್ರೀಗಳು ‘ ಇಂಗ್ಲಿಷ್‌ನಲ್ಲಿ ‘ಇಂಡಿಯಾ’ ಎಂಬುದನ್ನು ಪ್ರಾದೇಶಿಕ ಭಾಷೆಗಳಲ್ಲಿ ‘ಭಾರತ’ ಎಂದು ಈಗಾಗಲೇ ಬಳಸಲಾಗುತ್ತಿದೆ. ಕೇಂದ್ರ ಸರ್ಕಾರವೇ ಮರುನಾಮಕರಣ ಚರ್ಚೆ ನಮ್ಮ ಮುಂದಿಲ್ಲ ಎಂದು ಸ್ಪಷ್ಟಪಡಿಸಿದೆ. ಹೀಗಾಗಿ ಈ ವಿಚಾರದಲ್ಲಿ ಚರ್ಚೆ ಅನಗತ್ಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.