ADVERTISEMENT

‘ಆಯ್ಕೆ ಪ್ರಕ್ರಿಯೆಯಲ್ಲಿ ಗೊಂದಲ ಬೇಡ’

ಸಿಇಟಿ, ನೀಟ್‌ ಆಯ್ಕೆ ಪ್ರಕ್ರಿಯೆಗೆ ಕಿವಿಮಾತು, ಮಾರ್ಗದರ್ಶನ

​ಪ್ರಜಾವಾಣಿ ವಾರ್ತೆ
Published 18 ಮೇ 2019, 20:14 IST
Last Updated 18 ಮೇ 2019, 20:14 IST
ಎಚ್‌.ಡಿ.ಕೋಟೆ ತಾಲ್ಲೂಕಿನ ಅಂತರಸಂತೆಯ ಸರ್ಕಾರಿ ಪಿಯು ಕಾಲೇಜಿನ ಕನ್ನಡ ಉಪನ್ಯಾಸ ತಿಮ್ಮರಾಜು ಅವರು ಸಿಇಟಿ– ನೀಟ್ ಆಯ್ಕೆ ಪ್ರಕ್ರಿಯೆ ಕುರಿತು ಮಾಹಿತಿ ನೀಡಿದರು
ಎಚ್‌.ಡಿ.ಕೋಟೆ ತಾಲ್ಲೂಕಿನ ಅಂತರಸಂತೆಯ ಸರ್ಕಾರಿ ಪಿಯು ಕಾಲೇಜಿನ ಕನ್ನಡ ಉಪನ್ಯಾಸ ತಿಮ್ಮರಾಜು ಅವರು ಸಿಇಟಿ– ನೀಟ್ ಆಯ್ಕೆ ಪ್ರಕ್ರಿಯೆ ಕುರಿತು ಮಾಹಿತಿ ನೀಡಿದರು   

ಮೈಸೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಎಇ)ವು ವೃತ್ತಿಪರ ಕೋರ್ಸ್‌ಗಳಿಗೆ ಸೀಟು ಹಂಚುವ ಪ್ರಕ್ರಿಯೆಯಲ್ಲಿ ವಿವಿಧ ಸಂಕೀರ್ಣ ಹಂತಗಳಿದ್ದು, ಮುಂಚಿತವಾಗಿಯೇ ಸಿದ್ಧತೆ ಮಾಡಿಕೊಂಡಿದ್ದರೆ ಚಿಂತಿಸುವ ಅಗತ್ಯವಿಲ್ಲ ಎಂದು ಎಚ್‌.ಡಿ.ಕೋಟೆಯ ಅಂತರಸಂತೆ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕ ತಿಮ್ಮರಾಜು ಹೇಳಿದರು.

ಆಯ್ಕೆ ಪ್ರಕ್ರಿಯೆ ಆದಷ್ಟು ಸರಳವಾ ಗಿರಬೇಕು, ಗೊಂದಲಗಳಿಲ್ಲದೇ ನಡೆಯಬೇಕು, ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಸಮಸ್ಯೆಗಳು ಉಂಟಾಗಬಾರದು ಎಂಬ ಉದ್ದೇಶ ದಿಂದ ‘ಕೆಎಇ’ 15 ಸಹಾಯ ಕೇಂದ್ರಗಳನ್ನು ತೆರೆದಿದೆ. ಮೈಸೂರಿನಲ್ಲಿ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನಲ್ಲಿ ಈ ಕೇಂದ್ರವಿದ್ದು, ಕೌನ್ಸೆಲಿಂಗ್‌ಗೂ ಮುನ್ನ ಅಭ್ಯರ್ಥಿಗಳು ತಮ್ಮೆಲ್ಲ ದಾಖಲಾತಿಗಳನ್ನೂ ‍ಪರಿಶೀಲನೆ ಮಾಡಿಸಿಕೊಳ್ಳಬೇಕು. ಒಮ್ಮೆ ಈ ಹಂತವನ್ನು ದಾಟಿದರೆ ಆಯ್ಕೆ ಹಂತಗಳು ಸುಲಲಿತವಾಗಿ ನಡೆಯುತ್ತವೆ ಎಂದು ಅವರು ಕಿವಿಮಾತು ಹೇಳಿದರು.

ದಾಖಲಾತಿಗಳನ್ನು ಪರಿಶೀಲನೆ ಮಾಡಿಸಿಕೊಳ್ಳುವಾಗ ಕಡ್ಡಾಯವಾಗಿ ಮೂಲ ಪ್ರತಿಗಳನ್ನು ಕೊಂಡೊಯ್ಯಲೇಬೇಕು. ಜತೆಗೆ, ಈ ಎಲ್ಲ ಪ್ರತಿಗಳ ನಕಲು ಪ್ರತಿಗಳನ್ನು ಗೆಜೆಟೆಡ್‌ ಅಧಿಕಾರಿಯೊಬ್ಬರ ಮೂಲಕ ದೃಢೀಕರಿಸಿಕೊಂಡಿರಬೇಕು (Attestation). ಯಾವುದೇ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರು, ಪಿಯು, ಪದವಿ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರಿಂದ ದೃಢೀಕರಿಸಿಕೊಳ್ಳಬಹುದು. ನೋಟರಿಗಳಿಂದ ದೃಢೀಕರಿಸಿಕೊಂಡಿದ್ದರೆ ಅದು ತಿರಸ್ಕೃತಗೊಳ್ಳುವುದು. ಹಾಗಾಗಿ, ಈ ಹಂತವನ್ನು ಎಚ್ಚರಿಕೆಯಿಂದ ದಾಟಬೇಕು ಎಂದು ಸಲಹೆ ನೀಡಿದರು.

ADVERTISEMENT

ಒಮ್ಮೆ ರಾಜ್ಯ ಸರ್ಕಾರವು ವಿವಿಧ ಕಾಲೇಜುಗಳ ಸೀಟ್ ಪಟ್ಟಿ (Seat Matrix) ಯನ್ನು ‘ಕೆಎಇ’ಗೆ ಬಿಡುಗಡೆ ಮಾಡಿದ ಬಳಿಕ ಅಭ್ಯರ್ಥಿಗಳಿಗೆ ಸೀಟು ಆಯ್ಕೆಗೆ ಅವಕಾಶ ಮಾಡಿಕೊಡಲಾಗುತ್ತದೆ. ತಮ್ಮ ಸಿಇಟಿ ರ‍್ಯಾಂಕ್‌ ಅನ್ನು ಗಮನದಲ್ಲಿಟ್ಟುಕೊಂಡು ಒಟ್ಟು ನಾಲ್ಕು ಸುತ್ತುಗಳಲ್ಲಿ ನಡೆಯುವ ಪ್ರಕ್ರಿಯೆಯಲ್ಲಿ ಎಚ್ಚರಿಕೆಯಿಂದ ಭಾಗವಹಿಸಬೇಕು. ಮೊದಲ ಸುತ್ತಿಗೆ ಪ್ರಮುಖ ಆದ್ಯತೆಯ ಕಾಲೇಜುಗಳನ್ನು ಆಯ್ಕೆ ಮಾಡಿರಬೇಕು. ಈ ಸುತ್ತಿನಲ್ಲಿ ಸೀಟು ಸಿಗದೇ ಇದ್ದಲ್ಲಿ ಮುಂದಿನ ಹಂತವನ್ನು ಆಯ್ಕೆ ಮಾಡಿಕೊಳ್ಳಬೇಕು. ಆಯ್ಕೆಗೆ ನೀಡಿರುವ ಕೊನೆಯ ದಿನದವರೆಗೂ ಬದಲಾವಣೆಗೆ ಅವಕಾಶವಿರುತ್ತದೆ ಎಂದು ಮಾಹಿತಿ ನೀಡಿದರು.

ಪಾಸ್‌ವರ್ಡ್ ಬಗ್ಗೆ ಇರಲಿ ಎಚ್ಚರ: ಕೌನ್ಸೆಲಿಂಗ್‌ಗೆ ಮುನ್ನ ‘ಕೆಎಇ’ ವೆಬ್‌ಸೈಟ್‌ನಲ್ಲಿ ಖಾತೆ ತೆರೆಯುವಾಗ ಸಿಗುವ ಪಾಸ್‌ವರ್ಡ್‌ನ್ನು ಹಂಚಿಕೊಳ್ಳಬಾರದು ಎಂದರು.

ಶುಲ್ಕ ಪಾವತಿಗೆ ಗಮನ ನೀಡಿ: ‘ಸಿಇಟಿ’ ಮೂಲಕ ಆಯ್ಕೆಯಾಗಿ ಕಾಲೇಜಿನ ಶುಲ್ಕ ಪಾವತಿಸಿದ್ದು, ‘ಕಾಮೆಡ್‌– ಕೆ’ ಮೂಲಕ ತಮಗಿಷ್ಟದ ಸೀಟು ಸಿಕ್ಕಲ್ಲಿ, ‘ಸಿಇಟಿ’ಯ ಸೀಟನ್ನು ರದ್ದುಪಡಿಸಬೇಕು. ನಿಗದಿತ ಸಮಯದೊಳಗೆ ರದ್ದು ಪಡಿಸಿದರೆ ಶೇ 5ರಷ್ಟು ಶುಲ್ಕವನ್ನು ಮುರಿದುಕೊಂಡು ಹಣ ವಾಪಸಾಗುವುದು. ಇಲ್ಲವಾದಲ್ಲಿ ಪೂರ್ತಿ ಶುಲ್ಕವನ್ನು ‘ಕೆಎಇ’ ಮುಟ್ಟುಗೋಲು ಹಾಕಿಕೊಳ್ಳುತ್ತದೆ. ಈ ಕುರಿತು ಪೋಷಕರು ಎಚ್ಚರಿಕೆಯಿಂದ ಇರಬೇಕು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.