ADVERTISEMENT

ವಿದ್ಯುತ್‌ ರೈಲು ಸಂಚಾರಕ್ಕೆ ಅಡ್ಡಗಾಲು

ಮಂಡ್ಯದ ಎಲಿಯೂರಿನಲ್ಲಿ ವಿದ್ಯುತ್ ಉಪ ಕೇಂದ್ರ ಪೂರ್ಣಗೊಳ್ಳದ ಹೊರತು ಸಿಗದ ಸೌಲಭ್ಯ

ನೇಸರ ಕಾಡನಕುಪ್ಪೆ
Published 25 ಜೂನ್ 2018, 14:24 IST
Last Updated 25 ಜೂನ್ 2018, 14:24 IST
ವಿದ್ಯುದೀಕರಣಗೊಂಡಿರುವ ಮೈಸೂರು–ಬೆಂಗಳೂರು ರೈಲು ಮಾರ್ಗ (ಸಾಂದರ್ಭಿಕ ಚಿತ್ರ)
ವಿದ್ಯುದೀಕರಣಗೊಂಡಿರುವ ಮೈಸೂರು–ಬೆಂಗಳೂರು ರೈಲು ಮಾರ್ಗ (ಸಾಂದರ್ಭಿಕ ಚಿತ್ರ)   

ಮೈಸೂರು: ಮೈಸೂರು– ಬೆಂಗಳೂರು ನಡುವೆ ವಿದ್ಯುತ್‌ ರೈಲು ಮಾರ್ಗ ನಿರ್ಮಾಣಗೊಂಡು 6 ತಿಂಗಳು ಕಳೆದರೂ ಇನ್ನೂ ವಿದ್ಯುತ್‌ ರೈಲುಗಳ ಸಂಚಾರ ಭಾಗಶಃ ಆರಂಭವಾಗಿದೆ. ಮಂಡ್ಯದಲ್ಲಿರುವ ಎಲಿಯೂರು ವಿದ್ಯುತ್ ಉಪ ಕೇಂದ್ರ ಪೂರ್ಣಗೊಳ್ಳದೇ ಇರುವುದು ಇದಕ್ಕೆ ಕಾರಣವಾಗಿದೆ.

ದಕ್ಷಿಣ ವಲಯ ರೈಲುಮಾರ್ಗ ಸುರಕ್ಷಾ ಕಮಿಷನರ್‌ ಕೆ.ಎ.ಮನೋಹರನ್‌ ಅವರು ‍ಪೂರ್ಣಗೊಂಡಿರುವ ವಿದ್ಯುತ್ ರೈಲು ಮಾರ್ಗವನ್ನು ಪರೀಕ್ಷಿಸಿ ಡಿ. 26ರಿಂದ ರೈಲುಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಿದ್ದರೂ ಈವರೆಗೂ ಇದು ಸಂಪೂರ್ಣವಾಗಿ ಜಾರಿಗೊಂಡಿಲ್ಲ. ಹಾಗಾಗಿ, ಈಗ ಏಕಕಾಲಕ್ಕೆ ಎರಡು ವಿದ್ಯುತ್ ರೈಲುಗಳು ಮಾತ್ರ ಮೈಸೂರು– ಬೆಂಗಳೂರು ನಡುವೆ ಸಂಚರಿಸುತ್ತಿವೆ.

ಏನು ಕಾರಣ?:

ADVERTISEMENT

ಮೈಸೂರು– ಬೆಂಗಳೂರು ನಡುವಿನ ವಿದ್ಯುತ್‌ ರೈಲು ಮಾರ್ಗಕ್ಕೆ ಬಿಡದಿ ಬಳಿ ನಿರ್ಮಿಸಿರುವ ವಿದ್ಯುತ್ ಉಪಕೇಂದ್ರದಿಂದ ಈಗ ವಿದ್ಯುತ್‌ ಪೂರೈಸಲಾಗುತ್ತಿದೆ. ರೈಲ್ವೆ ಇಲಾಖೆಯು ಮಂಡ್ಯದ ಎಲಿಯೂರಿನಲ್ಲಿ ಮತ್ತೊಂದು ಉಪಕೇಂದ್ರ ನಿರ್ಮಿಸಿ ಹೆಚ್ಚುವರಿ ವಿದ್ಯುತ್ತನ್ನು ಪೂರೈಸಲು ಯೋಚಿಸಿತ್ತು. ಆದರೆ, ರೈಲ್ವೆ ಇಲಾಖೆಯು ಉಪ ಕೇಂದ್ರ ನಿರ್ಮಾಣದ ಜವಾಬ್ದಾರಿಯನ್ನು ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ (ಕೆಪಿಟಿಸಿಎಲ್) ಕ್ಕೆ ನೀಡಿದ ಬಳಿಕ ಕಾಮಗಾರಿ ಕುಂಠಿತಗೊಂಡಿದೆ.

ಹಾಗಾಗಿ, ಏಕಕಾಲಕ್ಕೆ ಈಗ ಎರಡು ವಿದ್ಯುತ್‌ ರೈಲುಗಳು ಮಾತ್ರ ಸಂಚರಿಸುತ್ತಿವೆ. ಇದಕ್ಕಿಂತಲೂ ಹೆಚ್ಚಿನ ರೈಲುಗಳನ್ನು ಸಂಚರಿಸಿದರೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ ಆಗುವ ಸಾಧ್ಯತೆ ಇರುವ ಕಾರಣ ಮಿತಿಗೊಳಿಸಲಾಗಿದೆ.

ಎಲಿಯೂರು ಉಪ ಕೇಂದ್ರಕ್ಕೆ ‘ಕೆಪಿಟಿಸಿಎಲ್‌’ನ ಮಂಡ್ಯದ ತೂಬಿನಕೆರೆ ಕೇಂದ್ರದಿಂದ ವಿದ್ಯುತ್‌ ಪೂರೈಕೆಯಾಗಬೇಕು. ಇದಕ್ಕಾಗಿ ಎಲ್ಲ ಸಿದ್ಧತೆಗಳೂ ನಡೆದಿವೆ. ವಿದ್ಯುತ್‌ ತರುವ ಮಾರ್ಗವನ್ನೂ ಗುರುತಿಸಲಾಗಿದೆ. ಆದರೆ, ವಿದ್ಯುತ್‌ ತಂತಿಗಳು ರೈತರ ಜಮೀನುಗಳ ಮೇಲೆ ಹಾದು ಬರುವ ಕಾರಣ, ಕಂಬಗಳನ್ನು ನೆಡಲು ರೈತರು ತಡೆದಿದ್ದಾರೆ. ಸರ್ಕಾರದಿಂದ ಸಿಗಬೇಕಿರುವ ಪರಿಹಾರದ ಮೊತ್ತ ನಿಗದಿಯಾಗದೇ ಇರುವುದು ರೈತರಲ್ಲಿ ಅಸಮಾಧಾನ ಮೂಡಿಸಿದೆ. ಇದೇ 19ರಂದು ಕೆಪಿಟಿಸಿಎಲ್‌ ಹಾಗೂ ರೈತರ ನಡುವೆ ನಡೆದ ಸಭೆ ಸಹ ವಿಫಲವಾಗಿದೆ. ಹಾಗಾಗಿ, ಎಲಿಯೂರು ಉಪ ಕೇಂದ್ರ ಕಾರ್ಯನಿರ್ವಹಿಸಲು ಸಮಯವಾಗಲಿದೆ.

ಮೆಮೂ ರೈಲು ಆರಂಭಗೊಳ್ಳದು:

ಈಗ ಸಂಚರಿಸುತ್ತಿರುವ ರೈಲುಗಳಲ್ಲಿ ವಿದ್ಯುತ್‌ ಎಂಜಿನ್‌ ಕೂರಿಸಲಾಗಿದೆ. ಆದರೆ, ಸಂಪೂರ್ಣ ವಿದ್ಯುತ್ ಮಯವಾಗಿರುವ
‘ಮೇನ್‌ ಲೈನ್‌ ಎಲೆಕ್ಟ್ರಿಕ್‌ ಮಲ್ಟಿಪಲ್‌ ಯೂನಿಟ್‌’ (ಮೆಮು) ರೈಲುಗಳು ಹಾಲಿ ಮಾರ್ಗದಲ್ಲಿ ಸಂಚರಿಸಲು ಯೋಗ್ಯವಾಗಿಲ್ಲ. ಮಾರ್ಗದಲ್ಲಿ ಅಗತ್ಯ ವಿದ್ಯುತ್ ಇಲ್ಲದ ಕಾರಣ, ಸಂಪೂರ್ಣ ವಿದ್ಯುತ್‌ ಬಯಸುವ ‘ಮೆಮು’ ರೈಲುಗಳು ಓಡಲಾರವು. ನೈರುತ್ಯ ರೈಲ್ವೇ ಬಳಿ ಈಗಾಗಲೇ ‘ಮೆಮು’ ರೈಲುಗಳು ಸಾಕಷ್ಟಿವೆ. ವಿದ್ಯುದೀಕರಣ ಪೂರ್ಣಗೊಂಡ ಬಳಿಕವಷ್ಟೇ ಈ ರೈಲುಗಳ ಸಂಚಾರ ಆರಂಭವಾಗಲಿದೆ ಎಂದು ರೈಲ್ವೆ ಇಲಾಖೆಯ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.