ADVERTISEMENT

ಹೊಸ ವರ್ಷಾಚರಣೆ: ಚಾಮುಂಡಿಬೆಟ್ಟಕ್ಕೆ ಪ್ರವೇಶ ಇಲ್ಲ

ಬಲವಂತವಾಗಿ ಶುಭಾಷಯ ಕೋರಿದರೆ ಶಿಸ್ತು ಕ್ರಮದ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2019, 13:33 IST
Last Updated 30 ಡಿಸೆಂಬರ್ 2019, 13:33 IST
   

ಮೈಸೂರು: ಹೊಸ ವರ್ಷಾಚರಣೆಯ ಸಂಭ್ರಮಾಚರಣೆಯನ್ನು ಚಾಮುಂಡಿಬೆಟ್ಟದಲ್ಲಿ ನಿಷೇಧಿಸಲಾಗಿದೆ. ಡಿ.31ರ ಸಂಜೆ 7ರಿಂದ ಜ. 1ರ ಬೆಳಿಗ್ಗೆ 6 ಗಂಟೆಯವರೆಗೆ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಉತ್ತನಹಳ್ಳಿಗೇಟ್, ದೈವಿವನ ಗೇಟ್, ಲಲಿತಮಹಲ್ ಗೇಟ್ ಹಾಗೂ ಚಾಮುಂಡಿಬೆಟ್ಟದ ಪಾದದ ಬಳಿ ಇರುವ ಗೇಟ್‌ಗಳಲ್ಲಿ ಈ ಅವಧಿಯಲ್ಲಿ ಪ್ರವೇಶ ಇರುವುದಿಲ್ಲ. ತಾವರೆಕಟ್ಟೆ ಗೇಟ್‌ನಲ್ಲಿ ಚಾಮುಂಡಿಬೆಟ್ಟದ ನಿವಾಸಿಗಳಿಗಷ್ಟೇ ಪ್ರವೇಶವಕಾಶ ಇರಲಿದೆ. ಬೆಟ್ಟ ಹಾಗೂ ಬೆಟ್ಟದ ತಪ್ಪಲಿನಲ್ಲಿ ಸಂಭ್ರಮಾಚರಣೆ ನಡೆಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಕಮಿಷನರ್ ಕೆ.ಟಿ.ಬಾಲಕೃಷ್ಣ ತಿಳಿಸಿದ್ದಾರೆ.

ನಗರದ ಎಲ್ಲಾ ಹೋಟೆಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್, ಹೋಂ ಸ್ಟೇ, ಸರ್ವಿಸ್ ಅಪಾರ್ಟ್‍ಮೆಂಟ್, ಅಪಾರ್ಟ್‍ಮೆಂಟ್ ಅಸೋಸಿಯೇಷನ್, ಮಾಲ್ಸ್, ಸಂಘ ಸಂಸ್ಥೆಗಳು ಸಂಭ್ರಮಾಚರಣೆಯನ್ನು ಮಧ್ಯರಾತ್ರಿ 1 ಗಂಟೆಯೊಳಗೆ ಒಳಾವರಣದಲ್ಲಿ ಮಾತ್ರ ನಡೆಸಬೇಕು. ಮದ್ಯಪಾನ ಸರಬರಾಜು ಮಾಡುವ ಹೋಟೆಲ್‌ಗಳು ನಿಗದಿತ ಸಮಯಕ್ಕಿಂತ ಹೆಚ್ಚಿನ ಸಮಯದಲ್ಲಿ ಮದ್ಯ ವ್ಯಾಪಾರ ಮಾಡಲು ಅಬಕಾರಿ ಮತ್ತು ಪೊಲೀಸ್‌ ಇಲಾಖೆಯಿಂದ ಲಿಖಿತವಾದ ಅನುಮತಿ ಅಗತ್ಯ ಎಂದು ಹೇಳಿದ್ದಾರೆ.

ADVERTISEMENT

ಹೊಸ ವರ್ಷ ಆಚರಣೆ ನೆಪದಲ್ಲಿ ರಸ್ತೆಗಳಲ್ಲಿ ಅಸಭ್ಯವಾಗಿ ವರ್ತಿಸುವವರು, ರಸ್ತೆಯಲ್ಲಿ ಮದ್ಯಪಾನ ಮಾಡುವುದು ಮತ್ತು ಬಾಟಲನ್ನು ತೂರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಸಂಭ್ರಮಾಚರಣೆಗೆ ಧ್ವನಿವರ್ಧಕ ಬಳಸಲು ಅನುಮತಿ ಅಗತ್ಯ, ಧ್ವನಿವರ್ಧಕಗಳ ಶಬ್ದವು ಕಾನೂನಿನಡಿಯಲ್ಲಿ ನಿರ್ದಿಷ್ಟಪಡಿಸಿರುವ ಡೆಸಿಬಲ್‌ಗಳನ್ನು ಮೀರಬಾರದು. ಖಾಸಗಿ ಸ್ಥಳಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷಾಚರಣೆ ಮಾಡುವವರು ಕಡ್ಡಾಯವಾಗಿ ಪೊಲೀಸರಿಂದ ಅನುಮತಿ ಪಡೆದಿರಬೇಕು ಎಂದು ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.