ಮೈಸೂರು: ‘ಕಮಲ್ ಹಾಸನ್ ತುಂಬಾ ತಿಳಿದಂತಹ ಮನುಷ್ಯ. ಅವರು ಏನೂ ಹೇಳಿದ್ದಾರೆ ಎಂದರೆ ಅದ್ಕೊಂದು ತರ್ಕವಿರಲಿದೆ. ಏನೋ ಅರ್ಥವಿರಬೇಕು. ಅದೇನೆಂಬುದನ್ನು ಕೇಳಿ ತಿಳಿದು ಕೊಳ್ಳಬೇಕು. ಅವರ ಹೇಳಿಕೆಯನ್ನು ಅಷ್ಟೊಂದು ಭಾವುಕವಾಗಿ ನೋಡುವ ಅಗತ್ಯವಿಲ್ಲ’ ಎಂದು ಚಲನಚಿತ್ರ ನಟ ಕಿಶೋರ್ ಹೇಳಿದರು.
‘ಕನ್ನಡ ತಮಿಳು ಭಾಷೆಯಿಂದ ಹುಟ್ಟಿದ್ದು’ ಎಂಬ ಚಲನಚಿತ್ರ ನಟ ಕಮಲ್ ಹಾಸನ್ ಹೇಳಿಕೆಗೆ ಇಲ್ಲಿ ಶನಿವಾರ
ಪ್ರತಿಕ್ರಿಯಿಸಿದ ಅವರು, ‘ನನ್ನ ತಾಯಿಯ ಹೊಟ್ಟೆಯಲ್ಲಿ ನಾನು ಜನಿಸಿದೆ ಎಂದರೆ ನನಗೆ ಹಾಗೂ ನನ್ನ ತಾಯಿಗೆ ಅವಮಾನವೇನಲ್ಲ. ಹಾಗೆಯೇ ಕಮಲ್ ಹೇಳಿಕೆಯನ್ನು ಅವಹೇಳನಕಾರಿ ಎಂದೇಕೆ ಭಾವಿಸಬೇಕು?’ ಎಂದು ಕೇಳಿದರು.
‘ಎಲ್ಲಾ ಭಾಷೆಗಳೂ ಎಲ್ಲಿಂದಲೋ ಹುಟ್ಟಿ ಬಂದಿರುತ್ತವೆ. ಹಾಗೆಂದು ಯಾವುದೂ ಮೇಲೂ ಅಲ್ಲ, ಕೀಳೂ ಅಲ್ಲ. ಕನ್ನಡವೂ ಎಲ್ಲಿಂದಲೋ ಹುಟ್ಟಿ ಬಂದಿದೆ. ಹಾಗೆಯೇ ತಮಿಳು ಕೂಡ ಎಲ್ಲಿಂದಲೂ ಹುಟ್ಟಿ ಬಂದಿದೆ. ಈ ವಿಷಯದಲ್ಲಿ ಜನರನ್ನು ಭಾವುಕವಾಗಿ ರೊಚ್ಚಿಗೆಬ್ಬಿಸಬಾರದು’ ಎಂದರು.
‘ಈಗಾಗಲೇ ನಮ್ಮಲ್ಲಿ ಭಾಷೆ, ಜಾತಿ, ಧರ್ಮ ಎಲ್ಲವನ್ನೂ ಬಂಡವಾಳವಾಗಿಸಿಕೊಂಡು ರಾಜಕೀಯ ಮಾಡಲಾಗುತ್ತಿದೆ. ಭಾಷೆಯನ್ನು ಭಾವುಕತೆಯಿಂದ ನೋಡದೆ ಭಾಷೆಯಾಗಿ ನೋಡಬೇಕು’ ಎಂದು ಹೇಳಿದರು.
‘ಕಮಲ್ ಹೇಳಿಕೆಯಿಂದ ಯಾರಿಗೂ ಅವಮಾನವಾಗಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.