ADVERTISEMENT

ಹುಣಸೂರು: ರಾಜಕಾಲುವೆ ಒತ್ತುವರಿ ತೆರವಿಗೆ ಸೂಚನೆ

ಮಂಜುನಾಥ ಬಡಾವಣೆಯಲ್ಲಿ 28ರಿಂದ ಕಾರ್ಯಾಚರಣೆ: ಎಚ್‌.ಪಿ.ಮಂಜುನಾಥ್

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2021, 4:32 IST
Last Updated 28 ಅಕ್ಟೋಬರ್ 2021, 4:32 IST
ಹುಣಸೂರು ನಗರಸಭೆ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಶಾಸಕ ಎಚ್‌.ಪಿ.ಮಂಜುನಾಥ್ ಮಾತನಾಡಿದರು. ಗಿರೀಶ್, ಡಾ.ಅಶೋಕ್ ಇದ್ದಾರೆ
ಹುಣಸೂರು ನಗರಸಭೆ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಶಾಸಕ ಎಚ್‌.ಪಿ.ಮಂಜುನಾಥ್ ಮಾತನಾಡಿದರು. ಗಿರೀಶ್, ಡಾ.ಅಶೋಕ್ ಇದ್ದಾರೆ   

ಹುಣಸೂರು: ‘ನಗರ ವ್ಯಾಪ್ತಿಯ ಕೆಂಚಮ್ಮನಕೆರೆ, ಹೊಳ್ಳನಕಟ್ಟೆಗೆ ಸೇರಿದ ರಾಜಕಾಲುವೆ ಒತ್ತುವರಿ ಮಾಡಿಕೊಂಡು ನಿರ್ಮಿಸಿರುವ ಮನೆಗಳನ್ನು ತೆರವುಗೊಳಿಸಬೇಕು’ ಎಂದು ಶಾಸಕ ಎಚ್‌.ಪಿ.ಮಂಜುನಾಥ್ ಸೂಚಿಸಿದರು.

ನಗರಸಭೆ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಳೆ ಹಾನಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.

‘ನಗರದ ಮಂಜುನಾಥ ಬಡಾವಣೆ ಕಳೆದ ಮೂರು ವರ್ಷಗಳಿಂದ ಮಳೆ ನೀರು ನುಗ್ಗಿ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗುತ್ತಿದೆ. ಈ ಬಡಾವಣೆಗೆ ಹೊಂದಿಕೊಂಡಿರುವ ಕೆರೆಯ ರಾಜಕಾಲುವೆ ಒತ್ತುವರಿಯಾಗಿದ್ದು, ಈ ಸಮಸ್ಯೆ ಉದ್ಭವಿಸಿದೆ’ ಎಂದರು.

ADVERTISEMENT

‘ತಾಲ್ಲೂಕು ಆಡಳಿತದಿಂದ ಅ.28 ರಂದು ಸರ್ವೆ ನಡೆಸಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಬೇಕು. ಮನೆ ನಿರ್ಮಿಸಿದ್ದರೂ ಯಾವುದೇ ಒತ್ತಡಕ್ಕೂ ಒಳಗಾಗದೆ ತೆರವುಗೊಳಿಸಬೇಕು’ ಎಂದು ಸೂಚಿಸಿದರು.

‘ನಗರಸಭೆ ವ್ಯಾಪ್ತಿಗೆ ಸೇರಿದ ಈ ಬಡಾವಣೆಗಳಲ್ಲಿ ಚರಂಡಿ ನಿರ್ಮಿಸುವ ಪ್ರಯತ್ನಕ್ಕೆ ಅನಧಿಕೃತ ಬಡಾವಣೆ ಅಡ್ಡ ಬರುತ್ತಿದ್ದು, ಮೂಲಸೌಕರ್ಯ ಕಲ್ಪಿಸಲು ಆಡಳಿತಾತ್ಮಕ ಸಮಸ್ಯೆ ಎದುರಾಗಿದೆ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

‘ತಾಲ್ಲೂಕಿನಲ್ಲಿ 40 ಶಾಲೆಗಳು ಶಿಥಿಲಗೊಂಡಿವೆ. ಈ ಪೈಕಿ ಎರಡು ಶಾಲೆಗಳು ಕುಸಿದಿವೆ. ನಾಡಪ್ಪನಹಳ್ಳಿ ಶಾಲೆಯಲ್ಲಿ 40 ವಿದ್ಯಾರ್ಥಿಗಳಿದ್ದು, ಪರ್ಯಾಯ ವ್ಯವಸ್ಥೆ ಇಲ್ಲವಾಗಿದೆ. ಗಾವಡಗೆರೆ ಗ್ರಾಮದಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್ ತಿಳಿಸಿದರು.

ತಾಲ್ಲೂಕಿನಾದ್ಯಂತ ಒಟ್ಟು 307 ಮನೆಗಳು ಕುಸಿದಿವೆ. ಉದ್ದೂರು ಕಾವಲ್ ಪಂಚಾಯಿತಿಯಲ್ಲಿ 16 ಮನೆ ಹಾನಿಗೊಂಡಿವೆ. ಕುಪ್ಪೆಕೊಳಗಟ್ಟ ಕೆರೆ, ಕಾಮಗೋಡನಹಳ್ಳಿ ಕೆರೆ, ಮರೂರು ಕೆರೆ ಸೇರಿದಂತೆ ಹಾರಂಗಿಯ ಮೂರು ನಾಲೆಗಳು ಶಿಥಿಲವಾಗಿವೆ ಎಂದು ಅಧಿಕಾರಿಗಳು ತಿಳಿಸಿದರು.

ಸಭೆಯಲ್ಲಿ ಪಿಡಿಒಗಳು ಸಮಸ್ಯೆ ಚರ್ಚಿಸಲು ನಿರಾಸಕ್ತಿ ತೋರಿಸಿದ್ದರಿಂದ ಶಾಸಕರು ಗರಂ ಆದರು. ‘ಸಭೆಯಲ್ಲಿ ಮೌನವಹಿಸುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಸಾರ್ವಜನಿಕರು ಸಮಸ್ಯೆಯಲ್ಲಿ ಸಿಲುಕಿದ್ದು, ಅದರ ಗಂಭೀರತೆ ಅರಿಯಬೇಕು’ ಎಂದು ತಾಕೀತು ಮಾಡಿದರು.

ಸಭೆಯಲ್ಲಿ ತಾ.ಪಂ ಇ.ಒ ಗಿರೀಶ್, ನಗರಸಭೆ ಅಧ್ಯಕ್ಷೆ ಸೌರಭ ಸಿದ್ದರಾಜು, ತಹಶೀಲ್ದಾರ್ ಡಾ.ಅಶೋಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.