ADVERTISEMENT

ಪುರಸಭೆ ತೆರಿಗೆ ವಂಚನೆ: ಆಡಿಯೊ ವೈರಲ್‌: ಮುಖ್ಯಾಧಿಕಾರಿಗೆ ಪೊಲೀಸ್‌ ನೋಟಿಸ್‌

ತಿ.ನರಸೀಪುರ ಪುರಸಭೆ ತೆರಿಗೆ ವಂಚನೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 30 ಜುಲೈ 2025, 7:46 IST
Last Updated 30 ಜುಲೈ 2025, 7:46 IST
<div class="paragraphs"><p>ವಂಚನೆ</p></div>

ವಂಚನೆ

   

ತಿ. ನರಸೀಪುರ (ಮೈಸೂರು ಜಿಲ್ಲೆ): ಇಲ್ಲಿನ ಪುರಸಭೆಯಲ್ಲಿ ನಡೆದಿರುವ ತೆರಿಗೆ ವಂಚನೆ ಪ್ರಕರಣದ ಕುರಿತು ಮುಖ್ಯಾಧಿಕಾರಿ ಬಿ.ಕೆ.ವಸಂತ ಕುಮಾರಿ ಅವರು ಮಾತನಾಡಿದ್ದಾರೆನ್ನಲಾದ ಆಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದು, ಅದರಲ್ಲಿರುವ ಗೊಂದಲಗಳ ಬಗ್ಗೆ ಸ್ಪಷ್ಟನೆ ನೀಡುವಂತೆ ಅವರಿಗೆ ಪಟ್ಟಣ ಠಾಣೆಯ ಇನ್‌ಸ್ಪೆಕ್ಟರ್‌ ನೋಟಿಸ್‌ ನೀಡಿದ್ದಾರೆ.

ಜುಲೈ 19ರಂದು ವಸಂತ ಕುಮಾರಿ ಅವರು ಪುರಸಭೆ ಸದಸ್ಯ ಟಿ.ಎಂ.ನಂಜುಂಡಸ್ವಾಮಿ ವಿರುದ್ಧ ದೂರು ದಾಖಲಿಸಿದ್ದರು. ‘ಕೆಲವು ಆಸ್ತಿ ಮಾಲಿಕರು ಅವರೊಂದಿಗೆ ಸೇರಿ ಸರ್ಕಾರಕ್ಕೆ ಸಲ್ಲಬೇಕಿದ್ದ ತೆರಿಗೆ ವಂಚಿಸುವ ಉದ್ದೇಶದಿಂದ ಕೆನರಾ ಬ್ಯಾಂಕ್‌ನ ನಕಲಿ ಸಹಿ ಮಾಡಿ, ₹3,43,626 ಆಸ್ತಿ ತೆರಿಗೆ ಪಾವತಿಸಿರುವುದಾಗಿ ಸುಳ್ಳು ದಾಖಲೆ ಸೃಷ್ಟಿಸಿದ್ದಾರೆ’ ಎಂದು ಆರೋಪಿಸಿದ್ದರು. 

ADVERTISEMENT

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಜುಲೈ 23ರ ರಾತ್ರಿ ನಂಜುಂಡಸ್ವಾಮಿ ಅವರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಈ ಬೆಳವಣಿಗೆಗಳ ಬಳಿಕ ಸೇವಾಶ್ರಯ ಫೌಂಡೇಷನ್ ಟ್ರಸ್ಟ್ ನ ಅಧ್ಯಕ್ಷ ಆರ್.ಮಣಿಕಂಠ ರಾಜ್ ಗೌಡ ಮುಖ್ಯಾಧಿಕಾರಿಗೆ ಕರೆ ಮಾಡಿ ಮಾತನಾಡಿ‌ದ್ದರು. ಅವರಿಬ್ಬರ ನಡುವಿನ ಸಂಭಾಷಣೆಯ 57 ನಿಮಿಷದ ಆಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ಆಡಿಯೊದಲ್ಲಿ ಮಣಿಕಂಠ ಅವರು, ‘ಒಂದು ₹40 ಲಕ್ಷ ಮಾಡಿದ್ದಾನಾ ಮೇಡಂ’ ಎಂದು ಅಧಿಕಾರಿಯನ್ನು ಕೇಳುತ್ತಾರೆ. ಅವರು ಪ್ರತಿಕ್ರಿಯಿಸಿ, ‘ಎಲ್ಲಿ ಹೇಳಿದ್ರಿ, ₹ 30 ರಿಂದ ₹ 40 ಕೋಟಿ ಮಾಡಿದ್ದಾರೆ. ಗ್ರಾಮ ಪಂಚಾಯಿತಿ ಇರುವ ಕಾಲದಿಂದಲೂ ಮಾಡಿದ್ದಾರೆ. ನಾವು 3, 4 ಸಾವಿರ ಖಾತೆ ಮಾಡಿದ್ದು, ಅದರಲ್ಲಿ 1 ಸಾವಿರ ಖಾತೆ ಇವನದ್ದೇ ಇದೆ’ ಎಂದು ತಿಳಿಸಿದ್ದಾರೆ. ಆದರೆ, ಇಲ್ಲಿ ನಂಜುಂಡಸ್ವಾಮಿ ಹೆಸರನ್ನು ಉಲ್ಲೇಖಿಸಿಲ್ಲ.

ಈ ಬಗ್ಗೆ ಸ್ಪಷ್ಟನೆ ಕೇಳಿ ಇನ್‌ಸ್ಪೆಕ್ಟರ್‌ ಧನಂಜಯ ಅವರು ಮುಖ್ಯಾಧಿಕಾರಿಗೆ ನೋಟಿಸ್‌ ನೀಡಿದ್ದು, ‘ಆಡಿಯೊ ನಿಮ್ಮದೆಯೇ, ಪ್ರಕರಣವು ವಿಚಾರಣೆ ಹಂತದಲ್ಲಿರುವಾಗ ಯಾಕೆ ಈ ಬಗ್ಗೆ ಮಾತನಾಡಿದ್ದೀರಿ. ನೀವು ನೀಡಿರುವ ದೂರಿನಲ್ಲಿ ಹಾಗೂ ಆಡಿಯೊದಲ್ಲಿ ವಂಚನೆಯ ಮೊತ್ತದ ವಿವರದಲ್ಲಿ ವ್ಯತ್ಯಾಸ ಏಕಿದೆ’ ಎಂದು ಸ್ಪಷ್ಟನೆ ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.