ADVERTISEMENT

ಇನ್ನು ಸಚಿವ ಸ್ಥಾನದ ಮೇಲೆ ವಿಶ್ವನಾಥ್ ಕಣ್ಣು...

ವಿಶ್ವನಾಥ್‌ಗೆ ಮತ್ತೆ ರಾಜಕೀಯ ಪುನರ್‌ ಜನ್ಮ–ಚೊಚ್ಚಲ ಬಾರಿ ವಿಧಾನ ಪರಿಷತ್‌ ಪ್ರವೇಶ

ಕೆ.ಓಂಕಾರ ಮೂರ್ತಿ
Published 23 ಜುಲೈ 2020, 6:57 IST
Last Updated 23 ಜುಲೈ 2020, 6:57 IST
ಎಚ್‌.ವಿಶ್ವನಾಥ್
ಎಚ್‌.ವಿಶ್ವನಾಥ್   

ಮೈಸೂರು: ‘ಮಾತುಕೊಟ್ಟಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನನ್ನ ಕೈಬಿಡಲಾರರು. ರಾಜಕಾರಣ ನಡೆಯುವುದು ನಂಬಿಕೆ ಹಾಗೂ ಭರವಸೆ ಮೇಲೆ’ ಎಂದು ಪದೇಪದೇ ಹೇಳುತ್ತಿದ್ದ ಬಿಜೆಪಿ ಮುಖಂಡ ಎಚ್‌.ವಿಶ್ವನಾಥ್‌ ಅವರಿಗೆ ರಾಜಕೀಯವಾಗಿ ಮತ್ತೊಮ್ಮೆ ಪುನರ್‌ ಜನ್ಮ ಲಭಿಸಿದೆ.

42 ವರ್ಷಗಳಿಂದ ರಾಜಕೀಯದಲ್ಲಿ ಹಲವು ಏಳುಬೀಳು ಕಂಡಿರುವ ಇವರು, ಇದೇ ಮೊದಲ ಬಾರಿ ವಿಧಾನ ಪರಿಷತ್‌ ಮೆಟ್ಟಿಲೇರುತ್ತಿದ್ದಾರೆ.

2019ರಲ್ಲಿ ಜೆಡಿಎಸ್‌ ತೊರೆದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸರ್ಕಾರದ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಿಶ್ವನಾಥ್‌ ಅವರ ಕಣ್ಣು ಈಗ ಸಚಿವ ಸ್ಥಾನದ ಮೇಲೆ ಇರುವುದು ಸಹಜ.

ADVERTISEMENT

ವಿಧಾನ ಪರಿಷತ್‌ಗೆ ನಾಮನಿರ್ದೇಶನಗೊಂಡಿರುವ ಖುಷಿ ಹಂಚಿಕೊಂಡ 70 ವರ್ಷ ವಯಸ್ಸಿನ ಅವರು, ‘ಸಚಿವ ಸ್ಥಾನದ ಬಗ್ಗೆ ಈಗಲೇ ಮಾತನಾಡಲಾರೆ. ಮುಂದೆ ನೋಡೋಣ’ ಎಂದಷ್ಟೇ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಇದರೊಂದಿಗೆ ಮೈಸೂರು ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆ ಮತ್ತೆ ಚುರುಕು ಪಡೆದುಕೊಂಡಿದೆ. ಅದರಲ್ಲೂ ಬಿಜೆಪಿಯಲ್ಲಿ ಚರ್ಚೆ ಪ್ರಾರಂಭವಾಗಿದ್ದು, ವಿವಿಧ ಗುಂಪುಗಳು ವಿವಿಧ ರೀತಿಯ ವಿಶ್ಲೇಷಣೆಯಲ್ಲಿ ತೊಡಗಿವೆ. ಸಚಿವ ಸ್ಥಾನ ಲಭಿಸಿದರೆ ಮೈಸೂರು ಜಿಲ್ಲಾ ಉಸ್ತುವಾರಿಯೂ ಆಗಲಿದ್ದಾರೆ ಎಂಬ ಮಾತು ಒಂದು ಗುಂಪಿನಿಂದ ಕೇಳಿಬರುತ್ತಿದ್ದರೆ, ವಯಸ್ಸು ಅಡ್ಡಿಯಾಗಬಹುದು ಎಂದು ಇನ್ನೊಂದು ಗುಂಪು ಹೇಳುತ್ತಿದೆ.

‘ವಿಶ್ವನಾಥ್‌ ತ್ಯಾಗಕ್ಕೆ ನ್ಯಾಯ ಸಿಕ್ಕಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೋರಾಟಕ್ಕಿಳಿದಿದ್ದರು. ಇದನ್ನು ಪಕ್ಷ ಗುರುತಿಸಿದೆ. ಹಿರಿಯ ರಾಜಕಾರಣಿಯಾಗಿರುವ ಅವರು ಮೂರನೇ ಬಾರಿ ಮೈಸೂರು ಜಿಲ್ಲೆ ಉಸ್ತುವಾರಿ ಸಚಿವರಾಗಲಿ’ ಎಂದು ಹೇಳಿದ್ದು ಬಿಜೆಪಿ ಮುಖಂಡ ಸಿ.ಎಚ್‌.ವಿಜಯಶಂಕರ್‌.

‘ಬಿಜೆಪಿ ಸರ್ಕಾರ ರಚನೆಗೆ ಕಾರಣರಾದವರಲ್ಲಿ ವಿಶ್ವನಾಥ್‌ ಕೂಡ ಒಬ್ಬರು ಎಂದು ಒಪ್ಪಿಕೊಳ್ಳುತ್ತೇನೆ. ಅದಕ್ಕೆ ಪ್ರತಿಯಾಗಿ ಈಗ ಮೇಲ್ಮನೆಯಲ್ಲಿ ಸ್ಥಾನ ಕಲ್ಪಿಸಲಾಗಿದೆ. ಆದರೆ, ಜಿಲ್ಲೆಯಿಂದ ಸಚಿವ ಸ್ಥಾನವನ್ನು ಮೂಲ ಬಿಜೆಪಿಗರಿಗೇ ಕೊಡಬೇಕು’ ಎಂದು ಹೆಸರು ಬಹಿರಂಗ ಪಡಿಸಲು ಬಯಸದ ಸ್ಥಳೀಯ ಬಿಜೆಪಿ ನಾಯಕರೊಬ್ಬರು ನುಡಿದರು.

1978ರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಕೆ.ಆರ್‌.ನಗರ ಕ್ಷೇತ್ರದಲ್ಲಿ ಗೆದ್ದು ಮೊದಲ ಬಾರಿ ಶಾಸಕರಾಗಿದ್ದ ವಿಶ್ವನಾಥ್‌, ವೀರಪ್ಪ ಮೊಯಿಲಿ ಮುಖ್ಯಮಂತ್ರಿಯಾಗಿದ್ದಾಗ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದರು. ಬಳಿಕ ಅರಣ್ಯ ಸಚಿವರಾದರು. ಎಸ್‌.ಎಂ.ಕೃಷ್ಣ ಸರ್ಕಾರದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ 10 ಬಾರಿ ಸ್ಪರ್ಧಿಸಿ ನಾಲ್ಕು ಬಾರಿ ಗೆದ್ದು, ಆರು ಬಾರಿ ಸೋಲು ಕಂಡಿದ್ದಾರೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದರೆ, 2019ರ ಉಪಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸೋಲುಂಡಿದ್ದರು.

2009ರಲ್ಲಿ ಮೈಸೂರು ಕ್ಷೇತ್ರದಿಂದ ಲೋಕಸಭೆ ಪ್ರವೇಶಿಸಿದ್ದ ಇವರು, 2014ರಲ್ಲಿ ಪರಾಭವಗೊಂಡಿದ್ದರು.‌‌‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.