ADVERTISEMENT

ಮೈಸೂರಿನ ಎನ್‌ಟಿಎಂ ಶಾಲೆ ಉಳಿಸಲು ವಿವಿಧ ಸಂಘಟನೆಗಳಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2021, 8:55 IST
Last Updated 28 ಜೂನ್ 2021, 8:55 IST
ಎನ್‌ಟಿಎಂ ಸರ್ಕಾರಿ ಶಾಲೆ ಉಳಿಸಲು ಮಹಾರಾಣಿ ಮಾದರಿ (ಎನ್‌ಟಿಎಂ) ಶಾಲೆ ಉಳಿಸಿ ಹೋರಾಟ ಒಕ್ಕೂಟದಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಎನ್‌ಟಿಎಂ ಸರ್ಕಾರಿ ಶಾಲೆ ಉಳಿಸಲು ಮಹಾರಾಣಿ ಮಾದರಿ (ಎನ್‌ಟಿಎಂ) ಶಾಲೆ ಉಳಿಸಿ ಹೋರಾಟ ಒಕ್ಕೂಟದಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.   

ಮೈಸೂರು: ಎನ್‌ಟಿಎಂ ಸರ್ಕಾರಿ ಶಾಲೆ ಉಳಿಸಲು ಮಹಾರಾಣಿ ಮಾದರಿ (ಎನ್‌ಟಿಎಂ) ಶಾಲೆ ಉಳಿಸಿ ಹೋರಾಟ ಒಕ್ಕೂಟದಿಂದ ಸೋಮವಾರ ನಗರದ ವಿವಿಧೆಡೆ ಪ್ರತಿಭಟನೆ ನಡೆಸಲಾಯಿತು.

ರಾಜ್ಯ ರೈತ ಸಂಘ, ದಲಿತ ಸಂಘರ್ಷ ಸಮಿತಿ, ಸ್ವರಾಜ ಇಂಡಿಯಾ, ಆಮ್‌ ಆದ್ಮಿ ಪಾರ್ಟಿ ಸೇರಿದಂತೆ ಹಲವು ಸಂಘಟನೆಗಳ ಪ್ರತಿನಿಧಿಗಳು ಪಾಲ್ಗೊಂಡರು.

ಜಿಲ್ಲಾಧಿಕಾರಿ ಕಚೇರಿ, ಎನ್‌ಟಿಎಂ ಶಾಲೆ, ಮಾನಸಗಂಗೋತ್ರಿಯ ಕುವೆಂಪು ಪ್ರತಿಮೆ, ಮೈಸೂರು ವಿ.ವಿ ಕ್ರಾಫರ್ಡ್‌ ಹಾಲ್, ವಿದ್ಯಾಪೀಠ ವೃತ್ತದ ಕುವೆಂಪು ಉದ್ಯಾನ, ಪುರಭವನದ ಅಂಬೇಡ್ಕರ್‌ ಪ್ರತಿಮೆ, ವಿವೇಕಾನಂದನಗರದ ವಿವೇಕಾನಂದರ ಪ್ರತಿಮೆ ಬಳಿ ಪ್ರತಿಭಟನೆ ನಡೆದವು.

ADVERTISEMENT

‘ಮೈಸೂರಿನಲ್ಲಿ ಸ್ವಾಮಿ ವಿವೇಕಾನಂದ ಅವರ ಪ್ರತಿಮೆ ನಿರ್ಮಿಸುವುದಕ್ಕೆ ನಮ್ಮ ವಿರೋಧವಿಲ್ಲ. ನಾವು ಯಾರೂ ವಿವೇಕಾನಂದರ ವಿರೋಧಿಗಳಲ್ಲ. ಅವರೇ ಪ್ರತಿಪಾದಿಸಿದ ಶಿಕ್ಷಣದ ಮೌಲ್ಯವನ್ನು ಕಾಪಾಡುವ ಸಲುವಾಗಿ ಹೋರಾಟಕ್ಕೆ ಇಳಿದಿದ್ದೇವೆ. ಆದರೆ ಶತಮಾನದ ಇತಿಹಾಸ ಹೊಂದಿರುವ ಎನ್‌ಟಿಎಂ ಶಾಲೆಯನ್ನು ಕೆಡವಿ ಪ್ರತಿಮೆ ನಿರ್ಮಿಸುವುದು ಬೇಡ’ ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

‘ರಾಮಕೃಷ್ಣ ಆಶ್ರಮದವರು ತಮ್ಮ ಹಟ ಬಿಟ್ಟು, ಶಾಲೆಯೂ ಉಳಿಯಲಿ, ಸ್ಮಾರಕವೂ ನಿರ್ಮಾಣವಾಗಲಿ ಎಂಬ ಸೂತ್ರವನ್ನು ಒಪ್ಪಬೇಕು. ಶಾಲೆಯನ್ನು ಅದೇ ಸ್ಥಿತಿಯಲ್ಲಿ ಉಳಿಸಿಕೊಂಡೇ ಪ್ರತಿಮೆ ನಿರ್ಮಾಣ ಮಾಡಬೇಕು’ ಎಂದು ಒತ್ತಾಯಿಸಿದರು.

ಸಾಹಿತಿ ಪ್ರೊ.ಕೆ.ಎಸ್‌.ಭಗವಾನ್, ನಿವೃತ್ತ ಪ್ರಾಧ್ಯಾಪಕ ಪಿ.ವಿ.ನಂಜರಾಜೇ ಅರಸ್, ದಲಿತ ಸಂಘರ್ಷ ಸಮಿತಿಯ ಸಂಚಾಲಕ ಬೆಟ್ಟಯ್ಯ ಕೋಟೆ, ಒಡನಾಡಿ ಸಂಸ್ಥೆಯ ಸಂಸ್ಥಾಪಕ ಸ್ಟ್ಯಾನ್ಲಿ, ರಂಗಕರ್ಮಿಗಳಾದ ಜನಾರ್ದನ್‌ (ಜನ್ನಿ), ಬಸವಲಿಂಗಯ್ಯ, ಒಕ್ಕೂಟದ ಪ್ರಧಾನ ಸಂಚಾಲಕ ಸ.ರ.ಸುದರ್ಶನ, ರೈತ ಸಂಘದ ಹೊಸಕೋಟೆ ಬಸವರಾಜು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.