ADVERTISEMENT

ಸಂಘರ್ಷದ ತಾಣವಾದ ‘ನುಗು’

‘ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ’ದ ಶಿಫಾರಸನ್ನು ಪುರಸ್ಕರಿಸದ ರಾಜ್ಯ ಸರ್ಕಾರ

ಮೋಹನ್ ಕುಮಾರ ಸಿ.
Published 28 ಅಕ್ಟೋಬರ್ 2025, 4:33 IST
Last Updated 28 ಅಕ್ಟೋಬರ್ 2025, 4:33 IST
ನುಗು ಜಲಾಶಯ ಹಾಗೂ ವನ್ಯಜೀವಿ ಧಾಮ 
ನುಗು ಜಲಾಶಯ ಹಾಗೂ ವನ್ಯಜೀವಿ ಧಾಮ    

ಮೈಸೂರು: ‘ಜಿಲ್ಲೆಯ ಸರಗೂರು ತಾಲ್ಲೂಕಿನ ನು‌ಗು ವನ್ಯಜೀವಿಧಾಮದ ಸುತ್ತಮುತ್ತಲ ಗ್ರಾಮಗಳಲ್ಲಿ ಮಾನವ– ವನ್ಯಜೀವಿ ಸಂಘರ್ಷ ತೀವ್ರಗೊಳ್ಳಲು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು (ಎನ್‌ಟಿಸಿಎ) 2 ವರ್ಷದ ಹಿಂದೆ ನೀಡಿದ್ದ ಶಿಫಾರಸನ್ನು ರಾಜ್ಯ ಸರ್ಕಾರ ಪುರಸ್ಕರಿಸದಿರುವುದೇ ಕಾರಣ’ ಎಂಬ ದೂರು ಪರಿಸರ ಹೋರಾಟಗಾರರಿಂದ ವ್ಯಕ್ತವಾಗಿದೆ. 

30.32 ಚದರ ಕಿ.ಮೀ. ವಿಸ್ತೀರ್ಣ ಹೊಂದಿರುವ ವನ್ಯಜೀವಿಧಾಮವನ್ನು ‘ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ’ದ ‘ಕೋರ್‌– ಕ್ರಿಟಿಕಲ್ ಪ್ರದೇಶ’ ಎಂದು ಘೋಷಿಸಲು ರಾಜ್ಯ ಸರ್ಕಾರ ಕ್ರಮವಹಿಸುವಂತೆ ‘ಎನ್‌ಟಿಸಿಎ’ 2023ರ ನ.17ರಂದು ಶಿಫಾರಸು ಮಾಡಿತ್ತು. 

ನಾಗರಹೊಳೆ ಹಾಗೂ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಗಳ ಮಧ್ಯಭಾಗದಲ್ಲಿ ಚಾಚಿರುವ ಈ ವನ್ಯಜೀವಿಧಾಮವು ಹುಲಿಗಳ ಆವಾಸಸ್ಥಾನದ ಸೂಕ್ಷ್ಮ ಪ್ರದೇಶ. ಶಿಫಾರಸನ್ನು ಮಾನ್ಯ ಮಾಡಿದ್ದರೆ ಪ್ರವಾಸೋದ್ಯಮ ಸೇರಿದಂತೆ ಮಾನವ ಚಟುವಟಿಕೆಗಳಿಗೆ ಕಡಿವಾಣ ಬೀಳುತ್ತಿತ್ತು. ಶಿಫಾರಸನ್ನು ಪುರಸ್ಕರಿಸದಿರುವುದು, ನುಗು ಜಲಾಶಯದಲ್ಲಿ ಮೀನುಗಾರಿಕೆ ಅವಕಾಶ ನೀಡಿರುವುದು, ಪ್ರವಾಸೋದ್ಯಮ ಬೆಳವಣಿಗೆಗಾಗಿ ‘ಬೇಲದಕುಪ್ಪೆ ಮಹದೇಶ್ವರ ದೇವಾಲಯ’ವನ್ನು ಪ್ರವಾಸಿತಾಣ ಮಾನ್ಯತೆ ಕೊಟ್ಟಿರುವುದು ಮಾನವ ವನ್ಯಜೀವಿ ಸಂಘರ್ಷವನ್ನು ಇನ್ನಷ್ಟು ಹೆಚ್ಚುವಂತೆ ಮಾಡಿದೆ ಎಂದು ಆರೋಪಿಸಲಾಗುತ್ತಿದೆ.

ADVERTISEMENT

15 ದಿನದಲ್ಲಿ ಎರಡು ದಾಳಿ: ಧಾಮದ ಬಫರ್ ವಲಯದ ಗ್ರಾಮಗಳಲ್ಲಿ ಹುಲಿಗಳ ಉಪಟಳ ತೀವ್ರವಾಗಿದ್ದು, ಕಳೆದ 15 ದಿನದ ಅಂತರದಲ್ಲಿ ಇಬ್ಬರು ರೈತರ ಮೇಲೆ ಹುಲಿಗಳು ದಾಳಿ ಮಾಡಿವೆ. ಅದರಲ್ಲಿ ಬರಡನಪುರದ ಮಹದೇವು ಕಣ್ಣು ಕಳೆದುಕೊಂಡು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿದ್ದರೆ, ಬೆಣ್ಣೆಗೆರೆಯ ರೈತ ರಾಜಶೇಖರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 3 ವರ್ಷದ ಹೆಣ್ಣು ಹುಲಿ ಹಾಗೂ ಹಲ್ಲು ಉದುರಿದ್ದ 12 ವರ್ಷದ ಹೆಣ್ಣು ಹುಲಿಯನ್ನು ಸಾಕಾನೆಗಳನ್ನು ಬಳಸಿ ಶಿವಪುರಮುಂಟಿ ಹಾಗೂ ಹೆಡಿಯಾಲ ಗ್ರಾಮಗಳಲ್ಲಿ ಸೆರೆ ಹಿಡಿಯಲಾಗಿದೆ. ಈಗ ಮತ್ತೆ ಹುಲಿ ಸೆರೆ ಕಾರ್ಯಾಚರಣೆ ಆರಂಭವಾಗಿದೆ. 

ಪರಿಗಣಿಸಿಲ್ಲ: ‘ವನ್ಯಜೀವಿಧಾಮವನ್ನು ‘ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ’ದ ‘ಕೋರ್‌– ಕ್ರಿಟಿಕಲ್ ಆವಾಸಸ್ಥಾನ’ವೆಂದು ಘೋಷಿಸಲು ಕ್ರಮವಹಿಸುವಂತೆ ಎನ್‌ಟಿಸಿಎಗೆ ಎರಡು ವರ್ಷದ ಹಿಂದೆಯೇ ಮನವಿ ಮಾಡಲಾಗಿತ್ತು. ಸ್ಥಳ ಪರಿಶೀಲಿಸಿದ್ದ ಪ್ರಾಧಿಕಾರದ ಸಹಾಯಕ ಐಜಿಎಫ್‌ ಹರಿಣಿ ವೇಣುಗೋಪಾಲ್‌ ತಂಡವು ವರದಿ ನೀಡಿತ್ತು. ಕೋರ್ ಕ್ರಿಟಿಕಲ್‌ ಪ್ರದೇಶವೆಂದು ಘೋಷಿಸಲು ಶಿಫಾರಸು ಮಾಡಿತ್ತು. ಅದನ್ನು ಸರ್ಕಾರ ಇನ್ನೂ ಪರಿಗಣಿಸಿಲ್ಲ’ ಎನ್ನುತ್ತಾರೆ ಪರಿಸರ ಹೋರಾಟಗಾರ ಗಿರಿಧರ ಕುಲಕರ್ಣಿ. 

‘ನುಗುವಿನಲ್ಲಿ ಸಫಾರಿ ಮಾಡಬೇಕೆಂಬ ಪ್ರಸ್ತಾವವೂ ಇತ್ತು. 2020ರಲ್ಲಿ ಆರಂಭಿಸಲು ಸಿದ್ಧತೆಯೂ ನಡೆದಿತ್ತು. ಆರಂಭಕ್ಕೆ ಮೂರು ದಿನ ಇರುವಾಗ ರದ್ದಾಗಿತ್ತು. ಕೋರ್‌– ಕ್ರಿಟಿಕಲ್‌ ಪ್ರದೇಶವೆಂದು ಘೋಷಿಸಿದರೆ ಸಫಾರಿ ಸೇರಿದಂತೆ ಯಾವೊಂದು ಪ್ರವಾಸೋದ್ಯಮ ಚಟುವಟಿಕೆ ಮಾಡಲು ಸಾಕಷ್ಟು ಕಾನೂನು ಕಟ್ಟಳೆಗಳಿರುತ್ತವೆ’ ಎಂದರು.     

‘ಜಲಾಶಯದಲ್ಲಿ ಮೀನುಗಾರಿಕೆ ಮಾಡಲು ಜನರಿಗೆ ಪಾರಂಪರಿಕ ಹಕ್ಕುಗಳನ್ನು ಅರಣ್ಯ ಇಲಾಖೆಯು ವಾಪಸ್‌ ಪಡೆಯಬೇಕಿದೆ. ಬೇಲದಕುಪ್ಪೆ ಮಹದೇಶ್ವರ ದೇಗುಲವನ್ನು ಮುಜರಾಯಿ ಇಲಾಖೆಗೆ ಹಸ್ತಾಂತರ ಮಾಡಿರುವುದೇ ಅರಣ್ಯ, ವನ್ಯಜೀವಿ ಸಂರಕ್ಷಣಾ ಕಾನೂನು, ಎನ್‌ಟಿಸಿಎ ನಿಯಮಗಳಿಗೆ ವಿರುದ್ಧವಾಗಿದೆ. ಇದೀಗ ಅದಕ್ಕೆ ಪ್ರವಾಸಿ ತಾಣ ಮಾನ್ಯತೆ ಸಿಕ್ಕಿರುವುದು ಸಂಘರ್ಷಕ್ಕೆ ಕಾರಣವಾಗುತ್ತದೆ’ ಎಂದು ಹೇಳಿದರು. 

‘ಮೊದಲು ವನ್ಯಜೀವಿಗಳಿಗೆ ಸಂರಕ್ಷಣೆ ನೀಡುವ ಉಪಕ್ರಮಗಳನ್ನು ಕೈಗೊಂಡ ನಂತರವೇ ಪ್ರವಾಸೋದ್ಯಮಕ್ಕೆ ಬೇಕಾದ ಸೌಕರ್ಯ ಹೆಚ್ಚಿಸಬೇಕು. ಆದರೆ, ರಾಜ್ಯದಲ್ಲಿ ಅದಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.  

ಮಾನವ– ವನ್ಯಜೀವಿ ಸಂಘರ್ಷಕ್ಕೆ ತಡೆ ಬೀಳಬೇಕೆಂದರೆ ನುಗು ವನ್ಯಜೀವಿಧಾಮವನ್ನು ಸರ್ಕಾರವು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕೋರ್‌–ಕ್ರಿಟಿಕಲ್ ಹುಲಿ ಆವಾಸಸ್ಥಾನವೆಂದು ಘೋಷಿಸಬೇಕು
ಗಿರಿಧರ ಕುಲಕರ್ಣಿ ಪರಿಸರ ಹೋರಾಟಗಾರ
ನುಗು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.