ADVERTISEMENT

ಸೌಜನ್ಯ ಪ್ರಕರಣ | ದೂರು ಮರು ದಾಖಲಿಸಿ ತನಿಖೆ ನಡೆಸಿ: ಒಡನಾಡಿ ‌

​ಪ್ರಜಾವಾಣಿ ವಾರ್ತೆ
Published 26 ಜುಲೈ 2023, 17:03 IST
Last Updated 26 ಜುಲೈ 2023, 17:03 IST
ಸೌಜನ್ಯ
ಸೌಜನ್ಯ   

ಮೈಸೂರು: ‘2012ರಲ್ಲಿ ನಡೆದ, ಮಂಗಳೂರಿನ ಬಾಲಕಿ ಸೌಜನ್ಯ ಅಪಹರಣ, ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣವನ್ನು ಪೋಷಕರ ದೂರಿನ ಅನ್ವಯ ಮರು ದಾಖಲಿಸಿಕೊಂಡು, ನಿವೃತ್ತ ನ್ಯಾಯಾಧೀಶರ ನಿರ್ದೇಶನದಲ್ಲಿ ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸಬೇಕು’ ಎಂದು ಕೋರಿ ಇಲ್ಲಿನ ಒಡನಾಡಿ ಸೇವಾ ಸಂಸ್ಥೆಯು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರಿಗೆ ಬುಧವಾರ ಪತ್ರ ಬರೆದಿದೆ.

‘ಬಾಲಕಿಯ ಪೋಷಕರು ಹಾಗೂ ಧರ್ಮಸ್ಥಳದ ನಾಗರಿಕರು ಕೆಲವು ವ್ಯಕ್ತಿಗಳ ಮೇಲೆ ಅನುಮಾನ ವ್ಯಕ್ತಪಡಿಸಿದ್ದರೂ ಅತ್ಯಾಚಾರವಾದ ಸ್ಥಳದಲ್ಲಿ ಒಂದೆರಡು ದ್ವಿಚಕ್ರವಾಹನಗಳು ಅನುಮಾನಾಸ್ಪದವಾಗಿ ನಿಂತಿದ್ದವು ಎಂದು ಹೇಳಿದ್ದರೂ ಆ ದೂರುಗಳನ್ನು ಪರಿಗಣಿಸಿಲ್ಲ. ತನಿಖೆ ನಡೆದ ನಂತರವೂ, ಸೌಜನ್ಯ ಸಾವಿಗೆ ಕಾರಣಕರ್ತರು ಯಾರು ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ಇದಕ್ಕೆ ಸಿಬಿಐ ಇನ್ನೂ ಉತ್ತರ ನೀಡಿಲ್ಲ’ ಎಂದು ಸಂಸ್ಥೆಯ ನಿರ್ದೇಶಕ ಸ್ಟ್ಯಾನ್ಲಿ ಹೇಳಿದ್ದಾರೆ.

‘ಸರಿಯಾದ ತನಿಖೆ ನಡೆಸದೇ ಸಾಕ್ಷಿ ನಾಶಗೊಳಿಸಿ, ಕರ್ತವ್ಯ ಲೋಪ ಎಸಗಿರುವ ತನಿಖಾಧಿಕಾರಿಗಳು, ವೈದ್ಯಾಧಿಕಾರಿಗಳು ಹಾಗೂ ಸಂಬಂಧಿಸಿದ ಸಿಬ್ಬಂದಿ ವಿರುದ್ಧ ದೂರು ದಾಖಲಿಸಬೇಕು. ಪೊಲೀಸರು ಹಾಗೂ ನಾಗರಿಕರು ಮೊದಲಿನಿಂದಲೂ ಅನುಮಾನಿಸುತ್ತಿದ್ದ ಹಾಗೂ ಪೊಲೀಸರಲ್ಲಿ ಪ್ರಸ್ತಾಪಿಸಿದ್ದ ವ್ಯಕ್ತಿಗಳ ವಿರುದ್ಧವೂ ದೂರು ದಾಖಲಿಸಬೇಕು. ಬಾಲಕಿಯ ಪೋಷಕರಿಗೆ ನ್ಯಾಯಾಲಯದ ನಿರ್ದೇಶನದಂತೆ ಸಲ್ಲಬೇಕಾದ ಪರಿಹಾರವನ್ನು ತ್ವರಿತವಾಗಿ ಕೊಡಿಸಬೇಕು. ವಿನಾಕಾರಣ ಆರೋಪಿ ಎನಿಸಿಕೊಂಡು ದೈಹಿಕ ಹಾಗೂ ಮಾನಸಿಕ ಕ್ಷೋಭೆಗೆ ಒಳಗಾಗಿ 6 ವರ್ಷ ಜೈಲು ಶಿಕ್ಷೆ ಅನುಭವಿಸಿದ ಸಂತೋಷ್‌ ರಾವ್‌ ಅವರಿಗೂ ಪರಿಹಾರ ನೀಡಿ ಘನತೆಯ ಜೀವನವನ್ನು ಮರಳಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.