
ಮೈಸೂರು: ‘ಒನಕೆ ಓಬವ್ವ ನಾಡಿನ ಮಹಿಳೆಯರ ಸ್ಫೂರ್ತಿಯಾಗಿದ್ದು, ಸಮಯ ಪ್ರಜ್ಞೆ ಹಾಗೂ ಕರ್ತವ್ಯ ನಿಷ್ಠೆ ಅನುಕರಣೀಯವಾಗಿದೆ’ ಎಂದು ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಹೇಳಿದರು.
ನಗರದ ಕಿರುರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಮಂಗಳವಾರ ಆಯೋಜಿಸಿದ್ದ ವೀರವನಿತೆ ಒನಕೆ ಓಬವ್ವ ಜಯಂತಿಯಲ್ಲಿ ಮಾತನಾಡಿದರು.
‘ಕಿತ್ತೂರು ಚೆನ್ನಮ್ಮ, ರಾಣಿ ಅಬ್ಬಕ್ಕರ ಸಾಲಿನಲ್ಲಿ ಓಬವ್ವ ಅವರನ್ನೂ ಸ್ಮರಿಸಲಾಗುತ್ತದೆ. ರಾಣಿಯಷ್ಟೇ ಅಲ್ಲ ಸಾಮಾನ್ಯ ಮಹಿಳೆಯೂ ನಾಡಿನ ರಕ್ಷಣೆಗೆ ನಿಲ್ಲಬಲ್ಲಳು ಎಂಬುದಕ್ಕೆ ಉದಾಹರಣೆಯಾಗಿದ್ದಾರೆ’ ಎಂದರು.
‘ಅವರ ಆತ್ಮಸ್ಥೈರ್ಯ, ದೇಶಭಕ್ತಿಯ ಬೆಳಕು ನಮ್ಮಲ್ಲಿಯೂ ಸದಾ ಬೆಳಗಬೇಕಿದೆ. ತ್ಯಾಗ, ಬಲಿದಾನವನ್ನು ಸ್ಫೂರ್ತಿಯಾಗಿ ತೆಗೆದುಕೊಳ್ಳಬೇಕಿದೆ. ಇಂದು ಎಲ್ಲ ರಂಗದಲ್ಲೂ ಮಹಿಳೆಯರು ಸಾಧನೆ ಮಾಡುತ್ತಿದ್ದು, ಸಮಾಜಕ್ಕೆ ಮಾದರಿ ಆಗಬೇಕು. ಓಬವ್ವರಂತೆಯೇ ಪ್ರತಿಯೊಬ್ಬರೂ ಸಮಾಜದಲ್ಲಿ ಒಳ್ಳೆಯ ಗುರುತುಗಳನ್ನು ಬಿಟ್ಟು ಹೋಗಬೇಕು’ ಎಂದು ಹೇಳಿದರು.
‘ಹೈದರಾಲಿಯ ಮೈಸೂರು ಸೈನ್ಯವು ಚಿತ್ರದುರ್ಗದ ಕೋಟೆಯನ್ನು ಮುತ್ತಿದಾಗ ತಾಯಿನಾಡಿನ ರಕ್ಷಣೆಗೆ ನಿಂತರು. ಯಾವುದೇ ಸಂದರ್ಭದಲ್ಲೂ ಧೃತಿಗೆಡದೇ ಧೈರ್ಯ ಪ್ರದರ್ಶಿಸಬೇಕು ಎಂಬ ಶೌರ್ಯವನ್ನು ಅವರು ತೋರಿದ್ದರು’ ಎಂದು ಸ್ಮರಿಸಿದರು.
ಎಸ್‌ಡಿಎಂ ಮಹಿಳಾ ಕಾಲೇಜಿನ ಪ್ರಾಧ್ಯಾಪಕ ಪ್ರೊ.ವಿನೋದಾ ಮಾತನಾಡಿ, ‘ಚಿತ್ರದುರ್ಗದ ಕೋಟೆ ಉಳಿಸಿದ ಓಬವ್ವ ಅವರ ಸಮಯಪ್ರಜ್ಞೆಯು ಪ್ರೇರಣಾದಾಯಕ. ಎದುರಾಗುವ ಸವಾಲುಗಳನ್ನು ಮೆಟ್ಟಿ ನಿಲ್ಲುವ ಬಗೆಯನ್ನು ಅವರು ತೋರಿಸಿಕೊಟ್ಟರು. ದುರ್ಗೆಯ ಜ್ಯೋತಿಯಂತೆ ಇಂದಿಗೂ ಪ್ರಜ್ವಲಿಸುತ್ತಿದ್ದಾರೆ’ ಎಂದು ಬಣ್ಣಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್, ಕನ್ನಡ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್, ಹೋರಾಟಗಾರ ಸುಶಂಕರ್ ಪಾಲ್ಗೊಂಡಿದ್ದರು.
‘ಓಬವ್ವ ಅವರ ಧೈರ್ಯ ಸಾಹಸಗಳು ನಾಡಿನ ಹೆಣ್ಣು ಮಕ್ಕಳಿಗೆ ಸ್ಫೂರ್ತಿಯಾಗಬೇಕು’ ಎಂದು ಬಿಜೆಪಿ ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ರೇಣುಕಾ ರಾಜ್ ಹೇಳಿದರು.
ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನದಲ್ಲಿ ಪ್ರಜ್ಞಾವಂತ ನಾಗರಿಕ ವೇದಿಕೆ ಆಯೋಜಿಸಿದ್ದ ಜಯಂತಿಯನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿದ ಅವರು ‘ಹೈದರಾಲಿ ಸೈನಿಕರು ಚಿತ್ರದುರ್ಗ ಕೋಟೆಯನ್ನು ಮುತ್ತಿದಾಗ ಒನಕೆಯನ್ನೇ ಆಯುಧವಾಗಿ ಬಳಸಿ ಕೋಟೆ ರಕ್ಷಿಸಿದ ಮಹಾಮಾತೆ’ ಎಂದರು.
ಪ್ರಮೀಳಾ ಭರತ್ ಮಾತನಾಡಿ ‘ನಮ್ಮ ಓಬವ್ವ ಸೇರಿದಂತೆ ಮಹಿಳೆಯರ ಚರಿತ್ರೆಗಳನ್ನು ನಾಡಿನಾಚೆಗೂ ಪಸರಿಸುವ ಕೆಲಸ ಮಾಡಬೇಕಿದೆ’ ಎಂದು ಹೇಳಿದರು.
ಕೆಪಿಸಿಸಿ ಸದಸ್ಯ ನಜರ್‌ಬಾದ್ ನಟರಾಜ್ ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್ ಪ್ರಜ್ಞಾವಂತ ನಾಗರಿಕ ವೇದಿಕೆ ಅಧ್ಯಕ್ಷ ಕಡಕೊಳ ಜಗದೀಶ್ ಶ್ರುತಿ ಅಪೂರ್ವ ಸುರೇಶ್ ಎಸ್.ಎನ್.ರಾಜೇಶ್ ಚರಣ್ ದಿನೇಶ್ ಸದಾಶಿವ್ ಸುಚೇಂದ್ರ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.