ADVERTISEMENT

ಅಕ್ರಮ ಭೂ ವ್ಯವಹಾರ: ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ಮತ್ತೊಂದು ದೂರು

ತನಿಖೆ ನಡೆಸುವಂತೆ ಸ್ನೇಹಮಯಿ ಕೃಷ್ಣ ಒತ್ತಾಯ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2025, 13:35 IST
Last Updated 3 ಫೆಬ್ರುವರಿ 2025, 13:35 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಮೈಸೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುಟುಂಬದವರ ಹೆಸರಿನಲ್ಲಿ ಬೇನಾಮಿಯಾಗಿ ಅಕ್ರಮ ಭೂ ವ್ಯವಹಾರ ಮಾಡಿದ್ದು, ಅವರ ವಿರುದ್ಧ ತನಿಖೆ ಕೈಗೊಳ್ಳಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸೋಮವಾರ ಇಲ್ಲಿನ ಲೋಕಾಯುಕ್ತ ಎಸ್‌.ಪಿ. ಕಚೇರಿಗೆ ದೂರು ಸಲ್ಲಿಸಿದರು.

‘ಮೈಸೂರು ತಾಲ್ಲೂಕಿನ ಆಲನಹಳ್ಳಿ ಗ್ರಾಮದ ಸರ್ವೆ ನಂ 113/4ರಲ್ಲಿ 1 ಎಕರೆ ಭೂಮಿಯನ್ನು ಸಿದ್ದರಾಮಯ್ಯ ಅವರ ಬಾಮೈದ ಬಿ.ಎಂ. ಮಲ್ಲಿಕಾರ್ಜುನ ಸ್ವಾಮಿ ಅವರು 1983ರ ಡಿ.15ರಂದು ಆಲನಹಳ್ಳಿಯ ಹನುಮೇಗೌಡ, ಹನುಮಯ್ಯ, ಕರಿಯಪ್ಪ ಹಾಗೂ ಕೆಂಪಮ್ಮ ಎಂಬುವರಿಂದ ಖರೀದಿಸಿದ್ದರು. 1996ರಲ್ಲಿ ಇದೇ ಜಮೀನನ್ನು ಮುಡಾ ಭೂಸ್ವಾಧೀನಪಡಿಸಿಕೊಂಡು ಅಂತಿಮ ಅಧಿಸೂಚನೆ ಹೊರಡಿಸಿತ್ತು. ಆದರೆ, 2006ರಲ್ಲಿ ಈ ಜಮೀನಿಗೆ ಮಲ್ಲಿಕಾರ್ಜುನ ಸ್ವಾಮಿ ಹೆಸರಿನಲ್ಲಿ ‘ಅನ್ಯಕ್ರಾಂತ’ ಆದೇಶ ಹೊರಡಿಸಲಾಗಿದೆ’ ಎಂದು ದೂರಿನಲ್ಲಿ ವಿವರಿಸಿದ್ದಾರೆ.

‘ಅದೇ ಭೂಮಿಯನ್ನು ಅವರು 2010 ಅ.20ರಂದು ಸಹೋದರಿ, ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ. ಪಾರ್ವತಿ ಅವರಿಗೆ ದಾನಪತ್ರವಾಗಿ ನೋಂದಣಿ ಮಾಡಿದ್ದಾರೆ. 2010ರ ನ.11ರಂದು ಪಾರ್ವತಿ ಅವರು ಪುತ್ರ ಯತೀಂದ್ರಗೆ ದಾನವಾಗಿ ಕೊಟ್ಟಿದ್ದಾರೆ. 2011ರ ಮಾರ್ಚ್‌ 23ರಂದು ಯತೀಂದ್ರ ಬೇರೊಬ್ಬರಿಗೆ ಭೂಮಿಯನ್ನು ಮಾರಾಟ ಮಾಡಿದ್ದಾರೆ. ಆದರೆ, ಈಗಲೂ ಆರ್‌ಟಿಸಿಯಲ್ಲಿ ಮಲ್ಲಿಕಾರ್ಜುನ ಸ್ವಾಮಿ ಹೆಸರಿನಲ್ಲೇ ಇದ್ದು, ಕೃಷಿ ಭೂಮಿ ಎಂದು ಮುಂದುವರಿದಿದೆ’ ಎಂದು ತಿಳಿಸಿದ್ದಾರೆ.

ADVERTISEMENT

‘1996ರಲ್ಲೇ ಅಂತಿಮ ಅಧಿಸೂಚನೆ ಹೊರಡಿಸಿದ್ದರೂ ಯಾವ ಕಾರಣದಿಂದ ಈ ಜಮೀನನ್ನು ಭೂಸ್ವಾಧೀನದಿಂದ ಕೈಬಿಡಲಾಯಿತು, ಇದಕ್ಕೆ ಪ್ರಭಾವ ಬೀರಿದ್ದು ಯಾರು? ಕೆಸರೆ ಗ್ರಾಮದ ಜಮೀನಿನ ದಾನಪತ್ರದ ಕುರಿತು ಹೇಳುವಾಗ ಈ ವಿಚಾರವನ್ನು ಮುಚ್ಚಿಟ್ಟಿದ್ದು ಏಕೆ? ಮಲ್ಲಿಕಾರ್ಜುನ ಸ್ವಾಮಿ ಅವರು ಈವರೆಗೆ ಈ ರೀತಿ ಎಷ್ಟು ಜಮೀನನ್ನು ಖರೀದಿಸಿ ಪಾರ್ವತಿ ಅವರ ಹೆಸರಿಗೆ ವರ್ಗಾಯಿಸಿದ್ದಾರೆ ಎಂಬ ಅಂಶಗಳ ಕುರಿತು ತನಿಖೆ ಕೈಗೊಳ್ಳಬೇಕು’ ಎಂದು ದೂರಿನಲ್ಲಿ ಕೋರಿದ್ದಾರೆ.

ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಸ್ನೇಹಮಯಿ ಕೃಷ್ಣ, ‘ಪಾರ್ವತಿ ಅವರಿಗೆ ಅವರ ತವರು ಮನೆಯಿಂದ ದಾನವಾಗಿ ಜಮೀನು ನೀಡಬೇಕಿದ್ದರೆ ಈಗಿನ ಕಾನೂನಿನ ಪ್ರಕಾರ ‘ವಿಭಾಗ ಪತ್ರ’ದ ರೂಪದಲ್ಲಿ ಕೊಡಬೇಕಿತ್ತು ಅಥವಾ ಒಂದೇ ದಾನಪತ್ರದಲ್ಲಿ ಎಲ್ಲವನ್ನೂ ಉಲ್ಲೇಖಿಸಬೇಕಿತ್ತು. ಆದರೆ, ಕೇವಲ ಮಲ್ಲಿಕಾರ್ಜುನ ಸ್ವಾಮಿ ಹೆಸರಿನಲ್ಲಿ ಖರೀದಿ ಆಗಿರುವ ಆಸ್ತಿಗಳನ್ನು ಪಾರ್ವತಿ ಹೆಸರಿಗೆ ವರ್ಗಾವಣೆ ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸಿದ್ದರಾಮಯ್ಯ ಅವರು ಪ್ರಭಾವ ಬಳಸಿಕೊಂಡು ಅಕ್ರಮ ಭೂವ್ಯವಹಾರ ನಡೆಸಿದ್ದಾರೆ’ ಎಂದು ಆರೋಪಿಸಿದರು.

‘ಸರ್ಕಾರಿ ಜಮೀನು ಒತ್ತುವರಿ; ಕ್ರಿಮಿನಲ್ ಪ್ರಕರಣ ದಾಖಲಿಸಿ’

ಹುಬ್ಬಳ್ಳಿ: ‘ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಕೇತಗಾನಹಳ್ಳಿ ಬಳಿ ಸರ್ಕಾರಿ ಜಮೀನು ಒತ್ತುವರಿ ಮಾಡಿದ ಆರೋಪ ಎದುರಿಸುತ್ತಿರುವ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ, ಅವರ ಸಂಬಂಧಿಕರು ಮತ್ತು ಅದರಲ್ಲಿ ಶಾಮೀಲಾಗಿರುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು’ ಎಂದು ಸಮಾಜ ಪರಿವರ್ತನ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಆಗ್ರಹಿಸಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಪ್ರಕರಣದ ತನಿಖೆಗೆ ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿರುವುದು ಸ್ವಾಗತಾರ್ಹ. ಇದನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಲು ತಂಡಕ್ಕೆ ಅಗತ್ಯ ದಾಖಲೆ, ಸಹಕಾರ ನೀಡಲಾಗುವುದು’ ಎಂದು ಹೇಳಿದರು.

‘ಪ್ರಕರಣದ ಕುರಿತು ತನಿಖೆ ನಡೆಸಿ, ವರದಿ ನೀಡಲು ಸರ್ಕಾರ ಮೂರು ತಿಂಗಳ ಕಾಲಾವಕಾಶ ಕೋರಿತ್ತು. ಆದರೆ, ನ್ಯಾಯಾಲಯ ತ್ವರಿತವಾಗಿ ತನಿಖೆ ಪೂರ್ಣಗೊಳಿಸಿ
ವರದಿ ನೀಡುವಂತೆ ಸೂಚಿಸಿದೆ. ಇದು ನಮ್ಮ ಹತ್ತು ವರ್ಷಗಳ ಹೋರಾಟದ ಫಲ’ ಎಂದರು.

‘ಪ್ರಭಾವಿಗಳು ಈ ಪ್ರಕರಣದಲ್ಲಿ ಇದ್ದು, ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ. ಶೀಘ್ರ ತನಿಖೆ ಮುಗಿಸಿ ಒತ್ತುವರಿಯಾಗಿರುವ ಜಮೀನನ್ನು ಸರ್ಕಾರ ವಾಪಸ್ ತನ್ನ ಸುಪರ್ದಿಗೆ ಪಡೆಯಬೇಕು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.