ADVERTISEMENT

ಮುಂದುವರಿದ ಕಾರ್ಯಾಚರಣೆ: 282 ಮಂದಿ ವಶ

ಕೆ.ಆರ್‌ ಠಾಣಾ ವ್ಯಾಪ್ತಿಯ ಸುಣ್ಣದ ಕೇರಿಯಲ್ಲಿ ಜನ ಸಂಪರ್ಕ ಸಭೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 5:06 IST
Last Updated 14 ಅಕ್ಟೋಬರ್ 2025, 5:06 IST
ಮೈಸೂರು ಪೊಲೀಸ್ ರೌಡಿ ಪ್ರತಿಬಂಧಕ‌ ದಳವು ಭಾನುವಾರ ರಾತ್ರಿಯೂ ವಿಶೇಷ ಕಾರ್ಯಾಚರಣೆ ನಡೆಸಿತು
ಮೈಸೂರು ಪೊಲೀಸ್ ರೌಡಿ ಪ್ರತಿಬಂಧಕ‌ ದಳವು ಭಾನುವಾರ ರಾತ್ರಿಯೂ ವಿಶೇಷ ಕಾರ್ಯಾಚರಣೆ ನಡೆಸಿತು   

ಮೈಸೂರು: ಪೊಲೀಸ್ ರೌಡಿ ಪ್ರತಿಬಂಧಕ‌ ದಳವು ಭಾನುವಾರ ರಾತ್ರಿಯೂ ವಿಶೇಷ ಕಾರ್ಯಾಚರಣೆ ಮುಂದುವರಿಸಿದ್ದು, ಶಂಕಿತ ರೌಡಿಗಳು ಮತ್ತು ಸಾರ್ವಜನಿಕರಿಗೆ ತೊಂದರೆ ನೀಡುವ ವ್ಯಕ್ತಿಗಳನ್ನು ಗುರುತಿಸಿ ಪ್ರಕರಣ ದಾಖಲಿಸಿದೆ.

ಕಾರ್ಯಾಚರಣೆಯಲ್ಲಿ 282 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. 269 ಮಂದಿ ವಿರುದ್ಧ ಕೋಟ್ಪಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. 455 ಮಂದಿ ವಿರುದ್ಧ ಪೆಟ್ಟಿ ಕೇಸ್ ಹಾಗೂ ಕೆಪಿ ಕಾಯ್ದೆಯಡಿ ಪ್ರಕರಣಗಳು ದಾಖಲಿಸಲಾಗಿದೆ. ಅಪರಾಧ ಕೃತ್ಯಗಳಲ್ಲಿ ಭಾಗಿ ಹಿನ್ನೆಲೆಯಲ್ಲಿ ಪ್ರಭು ಅಲಿಯಾಸ್‌ ದೈವ ಎಂಬಾತನನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಲಷ್ಕರ್ ಪೊಲೀಸ್ ಠಾಣೆಯಲ್ಲಿ ರೌಡಿಗಳ ಪರೇಡ್ ನಡೆಸಿ, ಡಿಸಿಪಿ ಆರ್.ಎನ್. ಬಿಂದು ಮಣಿ ಅವರು ಸಮಾಜಘಾತುಕ ಚಟುವಟಿಕೆಗಳಲ್ಲಿ ತೊಡಗದಂತೆ ಎಚ್ಚರಿಕೆ ನೀಡಿದ್ದಾರೆ.

ADVERTISEMENT

64 ತ್ರಿಪಲ್ ರೈಡಿಂಗ್, 120 ಹೆಲ್ಮೆಟ್ ಇಲ್ಲದೆ ಪ್ರಯಾಣ, ದೋಷಯುಕ್ತ ನಂಬರ್‌ ಪ್ಲೇಟ್, ವೀಲಿಂಗ್ ಪ್ರಕರಣ ದಾಖಲಿಸಿ, ಒಟ್ಟು 14 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

ಜನಸಂಪರ್ಕ ಸಭೆ: ನಗರದ ಕೆ.ಆರ್. ಠಾಣೆಯ ಪೊಲೀಸರು ಭಾನುವಾರ ಸುಣ್ಣದಕೇರಿಯಲ್ಲಿ ಜನ ಸಂಪರ್ಕ ಸಭೆ ನಡೆಸಿದ್ದು, 50ಕ್ಕೂ ಹೆಚ್ಚಿನ ಸಾರ್ವಜನಿಕರು ಸಭೆಯಲ್ಲಿ ಪಾಲ್ಗೊಂಡರು. ತಮ್ಮ ಕೇರಿಯಲ್ಲಿನ ಸಮಸ್ಯೆಗಳ ಬಗ್ಗೆ ತಿಳಿಸಿದರು. ವಾಹನಗಳ ಅಡ್ಡಾದಿಡ್ಡಿ ಓಡಾಟ, ಪಾರ್ಕಿಂಗ್ ಸಮಸ್ಯೆ ಹಾಗೂ ಸಾರ್ವಜನಿಕರ ಸ್ಥಳದಲ್ಲಿ ತೊಂದರೆ ಕುರಿತು ಚರ್ಚಿಸಿದರು.

ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಡಿಸಿಪಿಗಳಾದ ಆರ್.ಎನ್. ಬಿಂದು ಮಣಿ, ಕೆ.ಎಸ್. ಸುಂದರ್ ರಾಜ್ ಅವರ ಮಾರ್ಗದರ್ಶನದಲ್ಲಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.