ADVERTISEMENT

ಡಿಜಿಟಲ್ ಗ್ರಂಥಾಲಯಕ್ಕೆ ಚಾಲನೆ

ಮೈಸೂರು ನಗರ ಕೇಂದ್ರ ಗ್ರಂಥಾಲಯದ ನೂತನ ಕಟ್ಟಡ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2020, 9:27 IST
Last Updated 18 ಸೆಪ್ಟೆಂಬರ್ 2020, 9:27 IST
ಮೈಸೂರಿನ ನಜರಬಾದ್‌ನಲ್ಲಿರುವ ಪೀಪಲ್ಸ್ ಪಾರ್ಕ್‌ನಲ್ಲಿ ₹ 5.34 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ಗ್ರಂಥಾಲಯದ ಹೊಸ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿದ ಸಚಿವದ್ವಯರಾದ ಎಸ್.ಟಿ.ಸೋಮಶೇಖರ್, ಎಸ್.ಸುರೇಶ್‌ಕುಮಾರ್ ಪುಸ್ತಕಗಳನ್ನು ನೋಡಿದರು. ಶಾಸಕ ಬಿ.ಹರ್ಷವರ್ಧನ್, ಜಿಲ್ಲಾಧಿಕಾರಿ ಬಿ.ಶರತ್, ಶಾಸಕ ಎಲ್.ನಾಗೇಂದ್ರ, ಮೇಯರ್ ತಸ್ನಿಂ ಮತ್ತಿತರರಿದ್ದಾರೆ
ಮೈಸೂರಿನ ನಜರಬಾದ್‌ನಲ್ಲಿರುವ ಪೀಪಲ್ಸ್ ಪಾರ್ಕ್‌ನಲ್ಲಿ ₹ 5.34 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ಗ್ರಂಥಾಲಯದ ಹೊಸ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿದ ಸಚಿವದ್ವಯರಾದ ಎಸ್.ಟಿ.ಸೋಮಶೇಖರ್, ಎಸ್.ಸುರೇಶ್‌ಕುಮಾರ್ ಪುಸ್ತಕಗಳನ್ನು ನೋಡಿದರು. ಶಾಸಕ ಬಿ.ಹರ್ಷವರ್ಧನ್, ಜಿಲ್ಲಾಧಿಕಾರಿ ಬಿ.ಶರತ್, ಶಾಸಕ ಎಲ್.ನಾಗೇಂದ್ರ, ಮೇಯರ್ ತಸ್ನಿಂ ಮತ್ತಿತರರಿದ್ದಾರೆ   

ಮೈಸೂರು: ನಗರದ ನಜರಬಾದ್‌ನ ಪೀಪಲ್ಸ್ ಪಾರ್ಕ್‌ನಲ್ಲಿ ₹ 5.34 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ಮೈಸೂರು ನಗರ ಕೇಂದ್ರ ಗ್ರಂಥಾಲಯದ ಹೊಸ ಕಟ್ಟಡವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ಶುಕ್ರವಾರ ಉದ್ಘಾಟಿಸಿದರು.

ಸಚಿವದ್ವಯರಿಬ್ಬರು ಗ್ರಂಥಾಲಯದ ಒಳ ಭಾಗದಲ್ಲಿನ ಎಲ್ಲ ಶಾಖೆಗೂ ಭೇಟಿ ನೀಡಿ, ಪರಿಶೀಲಿಸಿದರು. ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಆಯಾ ವಿಭಾಗದಲ್ಲಿನ ಪುಸ್ತಕ ವೀಕ್ಷಿಸಿದರು. ಡಿಜಿಟಲ್ ಗ್ರಂಥಾಲಯಕ್ಕೂ ಚಾಲನೆ ನೀಡಿದರು.

ಶಾಸಕರಾದ ಎಸ್‌.ಎ.ರಾಮದಾಸ್, ಎಲ್.ನಾಗೇಂದ್ರ, ಬಿ.ಹರ್ಷವರ್ಧನ್‌, ಜಿ.ಟಿ.ದೇವೇಗೌಡ, ಮೇಯರ್ ತಸ್ನಿಂ, ಉಪಮೇಯರ್ ಸಿ.ಶ್ರೀಧರ್, ಜಿಲ್ಲಾಧಿಕಾರಿ ಬಿ.ಶರತ್, ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಸಚಿವದ್ವಯರಿಗೆ ಸಾಥ್ ನೀಡಿದರು.

ADVERTISEMENT

ಗ್ರಂಥಾಲಯದ ಒಳಭಾಗದಲ್ಲೇ ಸಚಿವರಿಗೆ ಚಹಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ಸಂದರ್ಭವೇ ಶಾಸಕ ಜಿ.ಟಿ.ದೇವೇಗೌಡ ತಮ್ಮ ಕ್ಷೇತ್ರದಲ್ಲಿನ ಶಾಲಾ ಸಮಸ್ಯೆಗಳು, ನೂತನ ಯೋಜನೆಗಳ ಬಗ್ಗೆ ಶಿಕ್ಷಣ ಸಚಿವ ಸುರೇಶ್‌ಕುಮಾರ್ ಅವರ ಗಮನ ಸೆಳೆದರು.

ಕಟ್ಟಡ ನಿರ್ಮಾಣದ ಹೊಣೆ ಹೊತ್ತುಕೊಂಡಿದ್ದ ಕೆಆರ್‌ಐಡಿಎಲ್‌ನ ಅಧಿಕಾರಿಗಳು ಸಚಿವರು, ಶಾಸಕರನ್ನು ಗೌರವಿಸಿ, ಸತ್ಕರಿಸಿದರು.

ಗ್ರಂಥಾಲಯ ಕುರಿತಂತೆ: 1819.7 ಚದರ ಮೀಟರ್ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿರುವ ನೂತನ ಗ್ರಂಥಾಲಯದಲ್ಲಿ ಅತ್ಯಾಧುನಿಕ ಸೌಲಭ್ಯಗಳು ಲಭ್ಯವಿವೆ.

ನೆಲ ಮಹಡಿಯಲ್ಲಿ ಬ್ರೈಲ್ ಹಾಗೂ ಅಂಗವಿಕಲರು, ಅಂಧ ಓದುಗರ ವಿಭಾಗವೂ ಇರುವುದು ವಿಶೇಷ.

ಮಹಿಳಾ ಓದುಗರ ವಿಭಾಗ, ಗಣಕಯಂತ್ರ ಹಾಗೂ ಡಿಜಿಟಲ್‌ ಲೈಬ್ರರಿ ವಿಭಾಗ, ಪುಸ್ತಕ ದಾಸ್ತಾನು ವಿಭಾಗ, ದಿನ ಪತ್ರಿಕೆ ಹಾಗೂ ನಿಯತ ಕಾಲಿಕೆ ವಿಭಾಗ, ಹಿರಿಯ ನಾಗರಿಕರ ವಿಭಾಗ, ಮಕ್ಕಳ ವಿಭಾಗ, ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ವಿಭಾಗ, ಪರಾಮರ್ಶನ ವಿಭಾಗ, ದಾಸ್ತಾನು ಕೊಠಡಿ, ಹಳೆ ದಿನಪತ್ರಿಕೆಗಳ ಕೊಠಡಿಯೂ ಪ್ರತ್ಯೇಕವಾಗಿದೆ.

ಪಾರಂಪರಿಕ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಕಟ್ಟಡದ ಮೊದಲ ಮಹಡಿಯಲ್ಲಿ ಆಡಳಿತ ಶಾಖೆಯ ವಿಭಾಗಗಳಿವೆ. ಕಟ್ಟಡ ಮಳೆಕೊಯ್ಲು ಪದ್ಧತಿ ಅಳವಡಿಸಿಕೊಂಡಿದೆ. ಈ ಗ್ರಂಥಾಲಯದಲ್ಲಿ 36 ಸಾವಿರ ಪುಸ್ತಕಗಳಿವೆ. 31 ಪ್ರಮುಖ ದಿನ ಪತ್ರಿಕೆಗಳು, 51 ನಿಯತಕಾಲಿಕೆಗಳು ಇಲ್ಲಿ ಸಿಗಲಿವೆ ಎಂದು ನಗರ ಕೇಂದ್ರ ಗ್ರಂಥಾಲಯ ನಿರ್ದೇಶಕ ಬಿ.ಮಂಜುನಾಥ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.