ADVERTISEMENT

ಪಹಲ್ಗಾಮ್ ದಾಳಿಗೆ ಖಂಡನೆ: ಸೈನಿಕರ ಗೌರವಿಸಿ ತಿರಂಗಾ ಯಾತ್ರೆ

​ಪ್ರಜಾವಾಣಿ ವಾರ್ತೆ
Published 29 ಮೇ 2025, 14:25 IST
Last Updated 29 ಮೇ 2025, 14:25 IST
ಎಚ್.ಡಿ.ಕೋಟೆ ಪಟ್ಟಣದಲ್ಲಿ ಗುರುವಾರ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು, ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ತಿರಂಗಾ ಯಾತ್ರೆಯನ್ನು ಆಚರಿಸಿದರು
ಎಚ್.ಡಿ.ಕೋಟೆ ಪಟ್ಟಣದಲ್ಲಿ ಗುರುವಾರ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು, ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ತಿರಂಗಾ ಯಾತ್ರೆಯನ್ನು ಆಚರಿಸಿದರು   

ಎಚ್.ಡಿ.ಕೋಟೆ: ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಭಾರತೀಯರ ಹತ್ಯೆಗೈದ ಭಯೋತ್ಪಾದಕರ ಅಡಗುತಾಣಗಳನ್ನು ನಾಶಪಡಿಸಿ, ಪರಾಕ್ರಮ ಮೆರೆದ ಸೈನಿಕರಿಗೆ ಗೌರವ ಸಲ್ಲಿಸಲು ತಾಲ್ಲೂಕಿನ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು, ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಪಕ್ಷಾತೀತವಾಗಿ ಗುರುವಾರ ತಿರಂಗಾ ಯಾತ್ರೆಯನ್ನು ಆಚರಿಸಿದರು.

ಬಿಜೆಪಿ ತಾಲ್ಲೂಕು ಅಧ್ಯಕ್ಷ ಶಂಭೆಗೌಡ ಮಾತನಾಡಿ, ‘ಪ್ರವಾಸಿಗರನ್ನು ಧರ್ಮ ಕೇಳಿ ಗುಂಡಿಕ್ಕಿ ಬಲಿ ತೆಗೆದುಕೊಂಡಿದ್ದ ಉಗ್ರಗಾಮಿಗಳ ಕೃತ್ಯವನ್ನು ಇಡೀ ದೇಶದ ಜನರು ಖಂಡಿಸಿದ್ದರು, ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದ್ದ ಪಾಕಿಸ್ತಾನದ ಕೃತ್ಯವನ್ನು ನಮ್ಮ ಸೈನಿಕರು ಆಪರೇಷನ್ ಸಿಂಧೂರದ ಮೂಲಕ ಭಯೋತ್ಪಾದಕ ಕೇಂದ್ರಗಳನ್ನು ನಾಶ ಪಡಿಸಿ ಖಂಡಿಸಿದ್ದರು’ ಎಂದರು.

‘ಸೈನಿಕರಿಗೆ ಧೈರ್ಯ ತುಂಬುವ ನಿಟ್ಟಿನಲ್ಲಿ ದೇಶದಲ್ಲಿ ತಿರಂಗ ಯಾತ್ರೆಯನ್ನು ನಡೆಸಲಾಗುತ್ತಿದೆ. ದೇಶದ ಪ್ರಧಾನಮಂತ್ರಿಯು ಸೂಕ್ತ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಉತ್ತರವನ್ನು ನೀಡಿದ್ದಾರೆ’ ಎಂದು ಶ್ಲಾಘಿಸಿದರು.

ADVERTISEMENT

ಪಡುವಲು ವಿರಕ್ತ ಮಠದ ಮಹದೇವಸ್ವಾಮೀಜಿ ಮಾತನಾಡಿ, ‘ಪ್ರತಿ ಗ್ರಾಮ, ಮನೆಗಳಲ್ಲಿ ದೇಶಾಭಿಮಾನವನ್ನು ಬೆಳೆಸುವಲ್ಲಿ ನಾವು ಮುಂದಾಗಬೇಕು, 26 ಭಾರತೀಯರನ್ನು ಭಯೋತ್ಪಾದಕರು ಹತ್ಯೆ ಮಾಡಿರುವುದು ನೋವಿನ ಸಂಗತಿ ಇದಕ್ಕೆ ದೇಶದ ಮೂರು ಸಶಸ್ತ್ರ ಪಡೆಗಳು ದಿಟ್ಟ ಪ್ರತ್ಯುತ್ತರ ನೀಡಿದ್ದಾರೆ’ ಎಂದರು.

‘ಭಾರತೀಯ ಸೈನಿಕರೊಂದಿಗೆ 145 ಕೋಟಿ ಜನರು ಇದ್ದೇವೆ ಎಂಬ ಸಂದೇಶವನ್ನು ಯಾತ್ರೆ ಮೂಲಕ ತಿಳಿಸುತ್ತಿದ್ದೇವೆ’ ಎಂದರು.

ಮೆರವಣಿಗೆ: ಪಟ್ಟಣದ ಗದ್ದಿಗೆ ವೃತ್ತದಿಂದ ರಾಷ್ಟ್ರಧ್ವಜಗಳನ್ನು ಹಿಡಿದು ಭಾರತ್ ಮಾತಾ ಕಿ ಜೈ, ಜೈ ಜವಾನ್ ಜೈ ಕಿಸಾನ್ ಎಂದು ಘೋಷಣೆ ಕೂಗುತ್ತಾ ಪಟ್ಟಣದ ಮುಖ್ಯ ರಸ್ತೆ ಮೂಲಕ ಮೆರವಣಿಗೆ ಹೊರಟು ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗ ಇರುವ ವೀರಯೋಧ ಮಹೇಶ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ನಂತರ ತಾಲ್ಲೂಕು ಆಡಳಿತ ಸೌಧ ತಲುಪಿತು.

ಜೆಡಿಎಸ್ ಅಧ್ಯಕ್ಷ ರಾಜೇಂದ್ರ, ಟಿಎಪಿಸಿಎಂಎಸ್ ಅಧ್ಯಕ್ಷ ಬಸವರಾಜಪ್ಪ, ವೀರಶೈವ ಸಮಾಜದ ತಾಲ್ಲೂಕು ಅಧ್ಯಕ್ಷ ರುದ್ರಪ್ಪ, ಸಿ.ಕೆ.ಗಿರೀಶ್, ಗುರುಸ್ವಾಮಿ, ಸರಗೂರು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಾಧಿಕಾ, ದೊಡ್ಡನಾಯಕ, ಸಿ.ವಿ.ನಾಗರಾಜು, ಎಚ್.ಸಿ.ಲಕ್ಷ್ಮಣ್, ವೆಂಕಟಸ್ವಾಮಿ, ಕನ್ನಡ ಪ್ರಮೋದ್, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಪಳನಿ ಸ್ವಾಮಿ, ಮಾರುತಿ, ಗೋಪಾಲಸ್ವಾಮಿ, ವಿನಯ್, ಸೋಮೇಶ್, ರಾಜು, ಪ್ರಶಾಂತ್, ಬಸವರಾಜು ಚಂದ್ರಮೌಳಿ, ವಿವೇಕ್, ನಾರಾಯಣಗೌಡ, ಜಯಂತ್, ಶ್ರೀಕಾಂತ್, ಗಿರಿಜಾ, ಸುನಂದ, ನಟರಾಜು, ಗಣಪತಿ, ಟಿ.ವೆಂಕಟೇಶ್, ಪೃತ್ವಿ, ಪ್ರಶಾಂತ್, ಗೋವಿಂದ ರಾಜು, ಜವರಯ್ಯ, ಸಿದಗದಯ್ಯ, ಸಂತೋಷ್, ಸುಧಕರ್, ಮಾದೇವಪ್ಪ, ಬಿ.ಟಿ.ನರಸಿಂಹಮೂರ್ತಿ, ಅಕ್ರಮ್ ಪಾಷ, ಚಂದ್ರಶೇಖರ್, ಮಹೇಶ್, ಶಿವರಾಜಪ್ಪ, ಜವರೆಗೌಡ, ರಘು, ರಂಗಪ್ಪ ಇದ್ದರು.

ಸೈನಿಕರ ಕಲ್ಯಾಣ ನಿಧಿಗೆ ₹1 ಲಕ್ಷ ದೇಣಿಗೆಯನ್ನು ನೀಡುತ್ತಿದ್ದೇನೆ ಸಾರ್ವಜನಿಕರೂ ದೇಣಿಗೆ ನೀಡಿ ದೇಶ ರಕ್ಷಣೆಗೆ ಬಲ ತುಂಬಬೇಕು
-ಕೆ.ಎಂ. ಕೃಷ್ಣ ನಾಯಕ ಪ್ರಧಾನ ಕಾರ್ಯದರ್ಶಿ ಬಿಜೆಪಿ ರಾಜ್ಯ ಎಸ್‌ಟಿ ಮೋರ್ಚಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.