ಮೈಸೂರು: ಕೇಂದ್ರ ಸರ್ಕಾರ ಅಂಗೀಕರಿಸಿರುವ ‘ವಕ್ಫ್ ತಿದ್ದುಪಡಿ ಕಾಯ್ದೆ –2025’ ಖಂಡಿಸಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಇಲ್ಲಿನ ತಿಲಕ್‌ನಗರದ ಈದ್ಗಾ ಮೈದಾನದಲ್ಲಿ ಶನಿವಾರ ಬೃಹತ್ ಪ್ರತಿಭಟನಾ ಸಭೆ ನಡೆಯಿತು. ಮುಸ್ಲಿಂ ಸಮುದಾಯದ ಸಾವಿರಾರು ಮಂದಿ ಭಾಗವಹಿಸಿ, ಕೇಂದ್ರ ಸರ್ಕಾರದ ವಿರುದ್ಧ ಒಕ್ಕೊರಲಿನಿಂದ ಆಕ್ರೋಶ ವ್ಯಕ್ತಪಡಿಸಿದರು.
ಮೈದಾನದಲ್ಲಿ ಸೇರಿದ್ದ ಇಪ್ಪತ್ತು ಸಾವಿರಕ್ಕೂ ಅಧಿಕ ಪ್ರತಿಭಟನಕಾರರು ತ್ರಿವರ್ಣ ಧ್ವಜ ಹಿಡಿದು, ಜೈ ಭೀಮ್ ಘೋಷಣೆ ಕೂಗುತ್ತಾ ‘ನಾವು ಸಂವಿಧಾನವನ್ನು ರಕ್ಷಿಸುತ್ತೇವೆ, ಭ್ರಾತೃತ್ವವನ್ನು ಬೆಳೆಸುತ್ತೇವೆ’ ಎಂಬ ಸಂದೇಶವನ್ನು ಸಾರಿದರು. ಸಾವಿರಾರು ಮಹಿಳೆಯರು–ಮಕ್ಕಳು ಕೂಡ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಕೆಲವರು ತಲೆಗೆ, ಕೆಲವರು ತೋಳಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು, ‘ವಕ್ಫ್ ಅಲ್ಲಾಹುಗೆ ಸೇರಿದ್ದು, ಅದರ ಮಾರ್ಪಾಡು ಸ್ವೀಕಾರಾರ್ಹವಲ್ಲ’, ‘ಕರಾಳ ಕಾನೂನು ವಾಪಸ್ ಪಡೆಯಿರಿ’, ‘ಭಯೋತ್ಪಾದನೆ ಇಸ್ಲಾಮಿಕ್ ಆಚರಣೆಯಲ್ಲ’, ‘ಪಹಲ್ಗಾಮ್ ಭಯೋತ್ಪಾದಕ ಹತ್ಯಾಕಾಂಡ ಖಂಡಿಸುತ್ತೇವೆ’, ‘ಸಂವಿಧಾನವನ್ನು ರಕ್ಷಿಸಿ’ ಇತ್ಯಾದಿ ಘೋಷಣಾ ಫಲಕ ಪ್ರದರ್ಶಿಸಿದರು. ವ್ಯಕ್ತಿಯೊಬ್ಬರೂ ಆಮ್ಲಜನಕ ಸಿಲಿಂಡರ್ ಸಹಿತ ಆಸ್ಪತ್ರೆಯಿಂದ ನೇರವಾಗಿ ಪ್ರತಿಭಟನಾ ಸ್ಥಳಕ್ಕೆ ಬಂದಿದ್ದು ಗಮನಸೆಳೆಯಿತು.
ಮೊಳಗಿದ ಘೋಷಣೆ: ಜಾಗೃತ ಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ಎಚ್.ವಿ.ವಾಸು, ‘ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧದ ಹೋರಾಟ ನನ್ನ ಪ್ರಕಾರ 2ನೇ ಸ್ವಾತಂತ್ರ್ಯ ಸಂಗ್ರಾಮ’ ಎನ್ನುತ್ತಿದ್ದಂತೆ ಪಾಲ್ಗೊಂಡಿದ್ದವರ ಚಪ್ಪಾಳೆಗಳು ಮುಗಿಲು ಮುಟ್ಟಿದವು. ಸಂವಿಧಾನದ ಪೀಠಿಕೆ ಓದಿ ಪ್ರಮಾಣವಚನ ಸ್ವೀಕರಿಸಿದರು. ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟವರಿಗೆ ಮೌನ ಪ್ರಾರ್ಥನೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.
ಸಮುದಾಯದ ಮುಖಂಡ ಅಕ್ಬರ್ ಆಲಿ ಉಡುಪಿ ಮಾತನಾಡಿ, ‘ವಕ್ಫ್ ದಾನ ಮಾಡಬೇಕಿದ್ದರೆ ಅದು ಪವಿತ್ರ ಸಂಪತ್ತಾಗಿರಬೇಕು. ಹರಾಮ್ ಆಗಿ ಬಂದಿದ್ದನ್ನು ಸ್ವೀಕರಿಸಲಾಗುವುದಿಲ್ಲ. ಹೀಗಾಗಿ ವಕ್ಫ್ ಸಂಪತ್ತು ಪವಿತ್ರವಾಗಿದ್ದು, ಯಾವುದೇ ಲೋಪದೋಷವಿಲ್ಲ. ವಕ್ಫ್ ಆಸ್ತಿಯ ದುರಪಯೋಗ ಹಿಂದಿನಿಂದಲೂ ನಡೆಯುತ್ತಾ ಬಂದಿದೆ. ಸರ್ಕಾರ, ಖಾಸಗಿ ವ್ಯಕ್ತಿಗಳು, ಮುಸ್ಲಿಂ ನಾಯಕರು ಒತ್ತುವರಿ ಮಾಡಿರುವ ಭೂಮಿಯನ್ನು ವಾಪಸ್ ಪಡೆಯುವ ಕೆಲಸವಾಗಬೇಕು’ ಎಂದು ಆಗ್ರಹಿಸಿದರು.
‘ಅಲ್ಲಾಹು ತನಗಾಗಿ ಏನನ್ನೂ ಕೇಳುವುದಿಲ್ಲ, ಆತ ಜನರಿಗೆ ನೀಡುತ್ತಾನೆ ಎಂಬ ನಂಬಿಕೆ ನಮ್ಮದು. ವಕ್ಫ್ ಸಂಪತ್ತನ್ನು ಸಮುದಾಯದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಮಾಡಲು ಬಳಸಲಾಗುತ್ತದೆ. ಆದರೆ ಕೇಂದ್ರ ಸರ್ಕಾರ ಇವುಗಳನ್ನು ತಿಳಿಸದೆ ಜನರ ಮುಂದೆ ಸುಳ್ಳು ಹೇಳಿ, ವಕ್ಫ್ ಕಾಯ್ದೆಗೆ ತಿದ್ದುಪಡಿ ಮಾಡಿ ಮುಸ್ಲಿಮರನ್ನು ಹಗಲು ದರೋಡೆ ಮಾಡಲು ಹೊರಟಿದೆ. ಇದು ಸಂವಿಧಾನದ ವಿರುದ್ಧದ ಸರ್ಕಾರದ ಯುದ್ಧ ಘೋಷಣೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕರಾದ ತನ್ವೀರ್ ಸೇಠ್, ಕೆ.ಹರೀಶ್ ಗೌಡ, ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ದಲಿತ ಸಂಘರ್ಷ ಸಮಿತಿ ಮುಖಂಡ ಬೆಟ್ಟಯ್ಯ ಕೋಟೆ, ಮೌಲಾನ ಉಸ್ಮಾನ್ ಷರೀಫ್, ಮಪ್ತಿ ತಾಜುದ್ದೀನ್, ಹಾಫೀಸ್ ಹರ್ಷದ್, ಜಹೀರ್, ಶಾ ಒಲಿವುಳ್ಳ, ಜಫಾವುಲ್ಲಾ, ಅಕ್ಬರ್ ಅಲಿ, ಅಯೂಬ್ ಅನ್ಸಾರಿ, ಫಾರೂಕ್ ನಷ್ಟರ್, ಸರ್ವೋದಯ ಪಕ್ಷದ ಮುಖಂಡ ಉಗ್ರ ನರಸಿಂಹೇಗೌಡ, ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಮುಖಂಡ ಶೌಕತ್ ಆಲಿ ಭಾಗವಹಿಸಿದ್ದರು.
ಶ್ರೇಣಿಕೃತ ಸಮಾಜ ಒಪ್ಪಿಕೊಂಡಿರುವವರು ದೇಶದ ಆತ್ಮಕ್ಕೆ ಪೆಟ್ಟು ಕೊಡುತ್ತಿದ್ದಾರೆ. ಸಂಕುಚಿತ ಮನೋಭಾವದಲ್ಲಿ ಆಡಳಿತ ನಡೆಸುತ್ತಿರುವವರ ವಿರುದ್ಧ ಹೋರಾಟ ಅನಿವಾರ್ಯ.–ಬಡಗಲಪುರ ನಾಗೇಂದ್ರ, ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ
ವಕ್ಫ್ ಆಸ್ತಿ ವಿಚಾರ ಮುಂದಿಟ್ಟುಕೊಂಡು ಹಿಂದೂ- ಮುಸ್ಲಿಮರ ನಡುವೆ ಸಂಘರ್ಷ ಜೀವಂತವಾಗಿಡುವ ಹುನ್ನಾರವನ್ನು ಕೇಂದ್ರ ಸರ್ಕಾರ ನಡೆಸಿದೆ.–ಸುಹೇಲ್ ಅಹಮದ್, ಸಾಮಾಜಿಕ ಕಾರ್ಯಕರ್ತ
‘ಸಂವಿಧಾನದ ಉಳಿವಿಗೆ ಪ್ರಥಮ ಹೆಜ್ಜೆ’
‘ವಕ್ಫ್‌ಗಿಂತ ಹೆಚ್ಚಿನ ಭೂಮಿ ಕ್ರಿಶ್ಚಿಯನ್ ಹಾಗೂ ಹಿಂದೂ ಸಮುದಾಯದ ಧಾರ್ಮಿಕ ಸಂಸ್ಥೆಗಳಲ್ಲಿವೆ. ನಿಧಾನಕ್ಕೆ ಅವುಗಳನ್ನೂ ಕಸಿದು ತಮ್ಮ ಮಿತ್ರರಿಗೆ ಒದಗಿಸಲು ಮೋದಿ ಸರ್ಕಾರ ಷಡ್ಯಂತ್ರ ನಡೆಸಿದೆ’ ಎಂದು ಅಕ್ಬರ್ ಆಲಿ ಉಡುಪಿ ದೂರಿದರು. ‘ದೇಶದ ಕಾನೂನಿನಲ್ಲಿ ವಕ್ಫ್ ಭೂಮಿ ಒಪ್ಪಿಕೊಳ್ಳಲಾಗಿದೆ. ಹಿಂದೂ ದೇವಾಲಯ ಅಥವಾ ಧಾರ್ಮಿಕ ದತ್ತಿ ಇಲಾಖೆಗೆ ಹಿಂದೂಗಳನ್ನೇ ನೇಮಿಸಬೇಕು ಎಂದು ನಿಯಮವಿದೆ. ಅದನ್ನು ನಾವೂ ಸ್ವಾಗತಿಸುತ್ತೇವೆ. ಆದರೆ ನಮ್ಮ ವಕ್ಫ್ ಬೋರ್ಡ್‌ನಲ್ಲಿ ಮುಸ್ಲಿಮೇತರ ಸೇರ್ಪಡೆ ಯಾಕೆ? ಸಂವಿಧಾನ ಪ್ರಕಾರವಾಗಿ ಸಿಗಬೇಕಾದ ನ್ಯಾಯದ ಬಗ್ಗೆ ಕೇಳುತ್ತಿದ್ದೇವೆ. ಈ ಕಾಯ್ದೆ ಕೇಂದ್ರದ ಕಪಿಮುಷ್ಠಿಯಲ್ಲಿರುತ್ತದೆ. ಅದರ ಅನತಿಯಂತೆ ವಕ್ಫ್ ಬೋರ್ಡನ್ನು ಬೇಕಾದವರಿಗೆ ಕೊಡುವ ಅವಕಾಶವಿದೆ. ಇದರ ವಿರುದ್ಧ ಸಂವಿಧಾನ ಉಳಿವಿನ ಪ್ರಥಮ ಹೆಜ್ಜೆ ಇದಾಗಿದೆ’ ಎಂದು ತಿಳಿಸಿದರು.
ಪೊಲೀಸ್ ಬಂದೋಬಸ್ತ್: ಪ್ರತಿಭಟನಾ ಸ್ಥಳದ ಸುತ್ತಲೂ ನಗರ ಪೊಲೀಸ್ ಇಲಾಖೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನೀಯೋಜಿಸಿತ್ತು. ಸಂಚಾರ ದಟ್ಟನೆ ತಡೆಗಟ್ಟಲು ಮೈದಾನದ ಸುತ್ತಲಿನ ರಸ್ತೆಗಳಿಗೆ ಬ್ಯಾರಿಕೇಡ್ ಅಳವಡಿಸಲಾಗಿತ್ತು. ನಿತ್ಯ ಓಡಾಡುವ ಸಾರ್ವಜನಿಕರನ್ನು ತಡೆದಾಗ ಪೊಲೀಸರು ಹಾಗೂ ಸಾರ್ವಜನಿಕರ ನಡುವೆ ಮಾತಿನ ಚಕಮಕಿ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.