ADVERTISEMENT

2100ಕ್ಕೂ ಹೆಚ್ಚು ಸಲಹೆ: ಶಾಸಕ ರಾಮದಾಸ್‌

ನ.15ರವರೆಗೂ ಸಲಹೆ ನೀಡಲು ಅವಕಾಶ: 60 ದಿನದಲ್ಲಿ ಆಯ್ಕೆ ಪ್ರಕ್ರಿಯೆ ಪೂರ್ಣ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2020, 6:00 IST
Last Updated 12 ನವೆಂಬರ್ 2020, 6:00 IST
ರಾಮದಾಸ್‌
ರಾಮದಾಸ್‌   

ಮೈಸೂರು: ‘ಪ್ರಧಾನಿ ಮೋದಿ ಜನ್ಮದಿನದಂದು (ಸೆ.17) ಆರಂಭಿಸಿದ ಅಭಿವೃದ್ಧಿಯ ಹಬ್ಬಕ್ಕೆ (ನಮೋ ದಿವಸ್‌ ನಮಸ್ಕಾರ–ಫೆಸ್ಟಿವಲ್ ಆಫ್ ಡೆವಲಪ್‌ಮೆಂಟ್ಸ್‌) ಎಲ್ಲೆಡೆಯಿಂದ ವ್ಯಾಪಕ ಸ್ಪಂದನೆ ದೊರಕುತ್ತಿದೆ’ ಎಂದು ಶಾಸಕ ಎಸ್‌.ಎ.ರಾಮದಾಸ್‌ ತಿಳಿಸಿದರು.

‘ಮೋದಿ ಪ್ರಧಾನಿಯಾದ ಬಳಿಕ ಜಾರಿಗೊಳಿಸಿದ ಕೇಂದ್ರದ 197 ಯೋಜನೆಗಳ ಅನುಷ್ಠಾನದಲ್ಲಾಗುತ್ತಿರುವ ವಿಳಂಬ ತಪ್ಪಿಸಲು, ಸಲಹೆ ನೀಡುವಂತೆ ಜನ ಸಮೂಹಕ್ಕೆ ಮನವಿ ಮಾಡಿಕೊಳ್ಳಲಾಗಿತ್ತು. ವಿವಿಧ ಮಾಧ್ಯಮದ ಮೂಲಕ ಇದೂವರೆಗೂ 70 ಲಕ್ಷ ಜನರನ್ನು ಈ ಸಂದೇಶ ತಲುಪಿದ್ದು, 2100ಕ್ಕೂ ಹೆಚ್ಚು ಜನರು ತಮ್ಮ ಅತ್ಯಮೂಲ್ಯ ಸಲಹೆ ನೀಡಿದ್ದಾರೆ’ ಎಂದು ಬುಧವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಅತ್ಯುತ್ತಮ ಸಲಹೆ ನೀಡಿದ 10 ಜನರಿಗೆ ನಗದು ಬಹುಮಾನ ನೀಡಲಾಗುವುದು. ಇದಕ್ಕಾಗಿ 10 ಜನ ತಜ್ಞರನ್ನೊಳಗೊಂಡ ಸಮಿತಿಯೊಂದನ್ನು ಈಗಾಗಲೇ ರಚಿಸಲಾಗಿದೆ. ಈ ಸಮಿತಿ ಎಲ್ಲರ ಸಲಹೆಗಳನ್ನು ಪರಿಶೀಲಿಸಿ, ವಿಜೇತರನ್ನು ಆಯ್ಕೆ ಮಾಡಲಿದೆ. ಬಹುಮಾನದ ಮೊತ್ತ ₹ 2.75 ಲಕ್ಷವಿದೆ. ಮೊದಲ ಅತ್ಯುತ್ತಮ ಸಲಹೆ ನೀಡಿದ ವ್ಯಕ್ತಿಗೆ ₹ 50 ಸಾವಿರ ನಗದು ಬಹುಮಾನ ಕೊಡುವ ಜೊತೆಯಲ್ಲೇ; ಪ್ರಧಾನಿ ಮೋದಿ ಭೇಟಿಯ ಅವಕಾಶವನ್ನು ಮಾಡಲಾಗುವುದು’ ಎಂದು ಅವರು ಮಾಹಿತಿ ನೀಡಿದರು.

ADVERTISEMENT

‘ಇದೇ ಸಂದರ್ಭ ಪ್ರಧಾನಿ ಅವರಿಗೆ ಜನ ಸಾಮಾನ್ಯರು ನೀಡಿದ ಅತ್ಯಮೂಲ್ಯ ಸಲಹೆಗಳ ಕ್ರೋಡಿಕೃತ ಹೊತ್ತಿಗೆಯೊಂದನ್ನು ನೀಡಿ, ಯೋಜನೆಗಳ ಅನುಷ್ಠಾನಕ್ಕಿರುವ ಅಡೆ–ತಡೆ ನಿವಾರಿಸಲು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿಕೊಳ್ಳಲಾಗುವುದು. ಈ ನಿಟ್ಟಿನಲ್ಲಿ ಈಗಾಗಲೇ 20 ರಾಜ್ಯಗಳ ಮುಖ್ಯಮಂತ್ರಿ ಜೊತೆಗೂ ಮಾತನಾಡಲಾಗಿದೆ. ಒಳ್ಳೆಯ ಸ್ಪಂದನೆ ಸಿಕ್ಕಿದೆ. ಪ್ರಧಾನಮಂತ್ರಿ ಕಚೇರಿಯೂ ಸಹ ಈ ಯೋಜನೆ ಬಗ್ಗೆ ಮಾಹಿತಿ ಪಡೆದಿದೆ. ಈ ಎಲ್ಲ ಪ್ರಕ್ರಿಯೆ 60 ದಿನದಲ್ಲಿ ಪೂರ್ಣಗೊಳ್ಳಲಿವೆ’ ಎಂದು ರಾಮದಾಸ್‌ ತಿಳಿಸಿದರು.

‘ಜನ ಸಮೂಹ ನೀಡಿದ ಸಲಹೆಗಳನ್ನು ಸ್ವೀಕರಿಸಲಾಗುವುದು. ಆಯ್ಕೆಯಾದ ಅತ್ಯುತ್ತಮ ಸಲಹೆಗಳನ್ನು ಮೈಸೂರಿನಲ್ಲಿ ಪೈಲಟ್ ಪ್ರಾಜೆಕ್ಟ್‌ ಆಗಿ ಕಾರ್ಯರೂಪಕ್ಕೆ ತರಲು ಸಿದ್ಧತೆ ಮಾಡಿಕೊಂಡಿದ್ದೇವೆ. ಇದು ಯಾವೊಂದು ವಿಧಾನಸಭಾ ಕ್ಷೇತ್ರಕ್ಕೆ ಸೀಮಿತವಾದ ಕಾರ್ಯಕ್ರಮವಲ್ಲ. ರಾಷ್ಟ್ರ ವ್ಯಾಪ್ತಿಯ ಕಾರ್ಯಕ್ರಮ’ ಎಂದು ಅವರು ಹೇಳಿದರು.

‘ಆರೋಗ್ಯ ಭಾರತ್, ಪ್ರಧಾನಮಂತ್ರಿ ಮಾತೃ ಸನ್ಮಾನ, ಪಿಎಂ ಪೋಷಣ್ ಕಾರ್ಯಕ್ರಮ, ಸ್ಕಿಲ್‌ ಡೆವಲಪ್‌ಮೆಂಟ್‌ ತರಬೇತಿ, ರೋಜಗಾರ್ ಯೋಜನೆ, ಮಣ್ಣು ಆರೋಗ್ಯ ಕಾರ್ಡ್‌, ಪಿಎಂ ಮುದ್ರಾ ಯೋಜನೆ, ನಲ್ಮ್‌ ಯೋಜನೆ, ಪ್ರಧಾನಮಂತ್ರಿ ಆವಾಸ್‌ ಯೋಜನೆ ಸೇರಿದಂತೆ ಇನ್ನಿತರೆ ಯೋಜನೆಗಳಲ್ಲಿನ ಲೋಪ–ದೋಷಗಳನ್ನು ಸರಿಪಡಿಸುವಂತೆ ಜನಸಮೂಹ ಸಲಹೆ ನೀಡುತ್ತಿದೆ’ ಎಂದು ಶಾಸಕರು ಮಾಹಿತಿ ನೀಡಿದರು.

ಪುನರ್ಜನ್ಮ ಸಿಕ್ಕಿದೆ: ಲಾಬಿ ಮಾಡಲ್ಲ
‘ಸಚಿವ ಸ್ಥಾನದ ಆಕಾಂಕ್ಷಿ ನಾನಲ್ಲ. ಅದಕ್ಕಾಗಿ ಲಾಬಿಯನ್ನೂ ಮಾಡಲ್ಲ. ಕ್ಷೇತ್ರದ ಜನರು ಪುನರ್ಜನ್ಮ ನೀಡಿದ್ದಾರೆ. ಅವರ ಋಣ ತೀರಿಸುವ ಕೆಲಸ ಮಾಡುವೆ’ ಎಂದು ಶಾಸಕ ಎಸ್‌.ಎ.ರಾಮದಾಸ್‌ ಸಚಿವ ಸ್ಥಾನದ ಆಕಾಂಕ್ಷಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದರು.

‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜಕೀಯವಾಗಿ ತಂದೆ ಸ್ಥಾನದಲ್ಲಿ ನಿಂತು ನಮ್ಮನ್ನು ಮಕ್ಕಳಂತೆ ಬೆಳೆಸಿದ್ದಾರೆ. ಅವಕಾಶ ಕೊಡುವುದು ಪಕ್ಷ, ಮುಖ್ಯಮಂತ್ರಿಗೆ ಸೇರಿದ ಅಧಿಕಾರ. ಈ ಅವಧಿ ಪೂರ್ಣ ಬಿ.ಎಸ್.ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.