ಮೈಸೂರು: ‘ಪಿ.ಬೋರೇಗೌಡ ಅವರ ಕೃತಿಯಲ್ಲಿನ ಬರಹ ವ್ಯಕ್ತಿ ಜೀವನದ ನೆನಪಲ್ಲ. ಇವು ಆಡಳಿತ, ಆರೋಗ್ಯ ಮತ್ತು ಕೃಷಿ ಕ್ಷೇತ್ರಗಳಿಗೆ ದಾರಿ ತೋರಿಸುವ ದಾಖಲೆಗಳು’ ಎಂದು ಎಚ್‌ಸಿಜಿ ಆಸ್ಪತ್ರೆಗಳ ಸಮೂಹದ ಅಧ್ಯಕ್ಷ ಅಜಯ್ ಕುಮಾರ್ ಹೇಳಿದರು.
ನಗರದ ಕಲಾಮಂದಿರದಲ್ಲಿ ಶನಿವಾರ ‘ಮಾಣಿಕ್ಯ ಫಾರ್ಮ್ ವತಿಯಿಂದ ನಡೆದ ನಿವೃತ್ತ ವಿಶೇಷ ಕಾರ್ಯದರ್ಶಿ ಪಿ.ಬೋರೇಗೌಡ ಅವರ ‘ಗ್ರೌಂಡ್ ಗವರ್ನೆನ್ಸ್’, ‘ಗ್ರೌಂಡ್ ಗವರ್ನೆನ್ಸ್–ವಾಲ್ಯೂಮ್ 2’ ಹಾಗೂ ‘ಶೂನ್ಯದಿಂದ ಶಿಖರದೆಡೆಗೆ’ (ಆತ್ಮಕಥೆ) ‘ಮಾಣಿಕ್ಯ ಫಾರ್ಮ್’ ಹಾಗೂ ‘ಮಾಣಿಕ್ಯ ಫಾರ್ಮ್ ಹಣ್ಣುಗಳ ತೋಟ’ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಿ.ಬೋರೇಗೌಡ ಸಮಾಜಕ್ಕೆ ಮಾದರಿ ವ್ಯಕ್ತಿ. ಅವರ ಜೀವನಯಾನ, ಆಡಳಿತಾನುಭವ ಮತ್ತು ಕೃಷಿ, ಆರೋಗ್ಯ ಕ್ಷೇತ್ರಗಳಲ್ಲಿ ಮಾಡಿದ ಮಹತ್ವದ ಸಾಧನೆ ಒಳಗೊಂಡ ಪ್ರಮುಖ ಕೃತಿಗಳು ಬಿಡುಗಡೆಗೊಂಡಿರುವುದು ವಿಶೇಷ. ಇವು ಕೇವಲ ಕೃತಿಗಳಾಗಿ ಉಳಿಯಬಾರದು. ಪ್ರತಿಯೊಬ್ಬರೂ ಓದಬೇಕು ಎಂದರು.
‘ಗ್ರೌಂಡ್ ಗವರ್ನೆನ್ಸ್’ ಕೃತಿ ಬಡವರನ್ನು ಕಠಿಣ ವೈದ್ಯಕೀಯ ವೆಚ್ಚದಿಂದ ಹೇಗೆ ರಕ್ಷಿಸುತ್ತದೆ, ಆರೋಗ್ಯ ಸೇವೆ ಅಗತ್ಯವಿರುವವರಿಗೆ ಹೇಗೆ ಪರಿವರ್ತಿಸಿತು ಎಂಬುದರ ಕಥೆಯನ್ನು ಹೇಳುತ್ತದೆ’ ಎಂದು ತಿಳಿಸಿದರು.
‘ಶೂನ್ಯದಿಂದ ಶಿಖರದೆಡೆಗೆ’ ಪರಿಷ್ಕೃತ ಕೃತಿ ಬಿಡುಗೊಡೆಗೊಳಿಸಿದ ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ.ಮುನಿಗೋಪಾಲರಾಜು, ‘ಹಳ್ಳಿಯ ಸರಳ ಆರಂಭದಿಂದ ರಾಜ್ಯದ ಆಡಳಿತದ ಶಿಖರದವರೆಗಿನ ಪಯಣವನ್ನು ಲೇಖಕರು ಕೃತಿಯಲ್ಲಿ ಚಿತ್ರಿಸಿದ್ದಾರೆ’ ಎಂದರು.
‘ಆಡಳಿತ ಸೇವೆಯಲ್ಲಿ ಅನುಷ್ಠಾನಗೊಳಿಸಿದ ಸುಧಾರಣಾ ಕ್ರಮ, ಆರೋಗ್ಯ ಕ್ಷೇತ್ರ, ನಿವೃತ್ತಿಯ ನಂತರ ಕೃಷಿ ಕ್ಷೇತ್ರದಲ್ಲಿನ ಪ್ರಯೋಗ ಹಾಗೂ ಸಾರ್ವಜನಿಕ ಸೇವೆಯಲ್ಲಿ ಎದುರಿಸಿದ ಸಂಕಷ್ಟ, ಸವಾಲು, ಸಾಧನೆ ಕುರಿತು ಉಲ್ಲೇಖಿಸಿದ್ದಾರೆ. ಸಮಾಜದೊಂದಿಗೆ ಬೆಸೆದ ನಂಟು ದಾಖಲಿಸಿರುವುದು ವಿಶೇಷ’ ಎಂದು ವಿಶ್ಲೇಷಿಸಿದರು.
‘ಬೋರೇಗೌಡ ಅವರು ದೂರದರ್ಶಿತ್ವದ ವ್ಯಕ್ತಿ. ಅನೇಕ ಅಭಿವೃದ್ಧಿ ಕಾರ್ಯವನ್ನು ತಮ್ಮ ಆಡಳಿತ ಅವಧಿಯಲ್ಲಿ ಮಾಡಿದ್ದಾರೆ. ಮೈಸೂರು ದಸರಾದ ದೀಪಾಲಂಕಾರದ ರೂವಾರಿಯೂ ಆಗಿದ್ದಾರೆ’ ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಮಾಣಿಕ್ಯ ಫಾರ್ಮ್‌ನ ‘ಮಾಣಿಕ್ಯ ಗ್ರೀನ್ ಪಾತ್‌ವೇಸ್’ ಕನ್ಸಲ್ಟೆನ್ಸಿ ಗೈಡ್ ಹಾಗೂ ಲಕ್ಷ್ಮಣ ಫಲದ ನ್ಯೂಟ್ರಿಷಿಯನ್ ಪೌಡರ್ ಪರಿಚಯಿಸಲಾಯಿತು.
ನಿವೃತ್ತ ಕುಲಪತಿ ಎನ್.ಎಸ್.ರಾಮೇಗೌಡ ಅಧ್ಯಕ್ಷತೆ ವಹಿಸಿದ್ದರು. ಆದಿಚುಂಚನಗಿರಿ ವಿ.ವಿಯ ಎಂ.ಎ.ಶೇಖರ್, ಆರ್ಗಾನಿಕ್ ರೈತ ಸ್ವಾಮಿ ಆನಂದ್, ತೋಟಗಾರಿಕೆ ವಿ.ವಿಯ ಜನಾರ್ದನ್ ಮಾತನಾಡಿದರು. ಸೇಂಟ್ ಫಿಲೋಮಿನಾ ಕಾಲೇಜು ನಿವೃತ್ತ ಪ್ರಾಂಶುಪಾಲ ಪ್ರೊ.ಎಂ.ಕೃಷ್ಣೇಗೌಡ, ಜೆಎಸ್‌ಎಸ್ ಆಯುರ್ವೇದ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಬಿ.ಗುರುಬಸವರಾಜ, ಆರಿಫ್ ಹುಸೇನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.