ADVERTISEMENT

ಮೈಸೂರು | ಪಾದಚಾರಿ ಓಡಾಟಕ್ಕೆ ಆದ್ಯತೆ ಅಗತ್ಯ: ಸಿಟಿ ರೈಸಿಂಗ್‌ ಅಭಿಯಾನ ಕಾರ್ಯಾಗಾರ

ಗ್ರೀನ್‌ಪೀಸ್‌ ಇಂಡಿಯಾ, ಎಂಎಸ್‌ಎ ಸಹಯೋಗದಲ್ಲಿ ಸಿಟಿ ರೈಸಿಂಗ್‌ ಅಭಿಯಾನ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 3:03 IST
Last Updated 22 ಜನವರಿ 2026, 3:03 IST
ಮೈಸೂರಿನ ಆಯಿಷ್‌ ಆವರಣದಲ್ಲಿ ಗ್ರೀನ್‌ಪೀಸ್‌ ಇಂಡಿಯಾ ಸಂಸ್ಥೆ, ಎಂಎಸ್‌ಎ ಸಹಯೋಗದಲ್ಲಿ ಬುಧವಾರ ನಡೆದ ಸಿಟಿ ರೈಸಿಂಗ್‌ ಅಭಿಯಾನ ಕಾರ್ಯಾಗಾರದಲ್ಲಿ ಎಂಎಸ್‌ಎ ವಿದ್ಯಾರ್ಥಿನಿಯು ರಸ್ತೆ ನಕ್ಷೆ ತೋರಿಸಿ ವಿವರಿಸಿದರು
ಮೈಸೂರಿನ ಆಯಿಷ್‌ ಆವರಣದಲ್ಲಿ ಗ್ರೀನ್‌ಪೀಸ್‌ ಇಂಡಿಯಾ ಸಂಸ್ಥೆ, ಎಂಎಸ್‌ಎ ಸಹಯೋಗದಲ್ಲಿ ಬುಧವಾರ ನಡೆದ ಸಿಟಿ ರೈಸಿಂಗ್‌ ಅಭಿಯಾನ ಕಾರ್ಯಾಗಾರದಲ್ಲಿ ಎಂಎಸ್‌ಎ ವಿದ್ಯಾರ್ಥಿನಿಯು ರಸ್ತೆ ನಕ್ಷೆ ತೋರಿಸಿ ವಿವರಿಸಿದರು   

ಮೈಸೂರು: ನಗರ ನಿರ್ಮಾಣದಲ್ಲಿ ಜನರೇ ಮೊದಲ ಆದ್ಯತೆ ಎನ್ನುವ ಅಭಿಪ್ರಾಯ ಇಲ್ಲಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ (ಆಯಿಷ್‌) ಆವರಣದಲ್ಲಿ ಬುಧವಾರ ನಡೆದ ಸಿಟಿ ರೈಸಿಂಗ್‌ ಅಭಿಯಾನ ಕಾರ್ಯಾಗಾರದಲ್ಲಿ ಕೇಳಿಬಂತು.

ಗ್ರೀನ್‌ಪೀಸ್‌ ಇಂಡಿಯಾ ಸಂಸ್ಥೆಯು ಮೈಸೂರು ಸ್ಕೂಲ್‌ ಆಫ್‌ ಆರ್ಕಿಟೆಕ್ಚರ್‌ (ಎಂಎಸ್‌ಎ) ಸಹಯೋಗದೊಂದಿಗೆ ನಡೆಸಿದ ಕಾರ್ಯಾಗಾರದಲ್ಲಿ ಪಾಲ್ಗೊಂಡ ವಿವಿಧ ಕ್ಷೇತ್ರದ ಪ್ರಮುಖರು, ‘ನಗರದ ರಸ್ತೆ, ಜಂಕ್ಷನ್‌ಗಳಲ್ಲಿ ವಾಹನಗಳ ಸಂಚಾರಕ್ಕೆ ನೀಡುವಷ್ಟೇ ಪ್ರಾಮುಖ್ಯತೆ ಪಾದಚಾರಿಗಳ ಓಡಾಟಕ್ಕೂ ದೊರೆಯಬೇಕು’ ಎಂದು ಒತ್ತಾಯಿಸಿದರು.

ಮುಖ್ಯವಾಗಿ, ಬೋಗಾದಿ ರಸ್ತೆ ಜಂಕ್ಷನ್ ಅನ್ನು ಪಾದಚಾರಿ ಸುರಕ್ಷಿತವಾಗಿ ರೂಪಿಸುವುದು ಹೇಗೆ ಎಂದು ಚರ್ಚಿಸಲಾಯಿತು. ಎಂಎಸ್‌ಎ ಸಂಸ್ಥೆಯ ಡೀನ್ ಚಂಪಾ ಮಾತನಾಡಿ, ‘ಈ ರಸ್ತೆಯು ಆಯಿಷ್‌, ಪ್ರಾದೇಶಿಕ ಶಿಕ್ಷಣ ಸಂಸ್ಥೆ ಮತ್ತು ಜೆಎಸ್‌ಎಸ್‌ ಕಾಲೇಜಿನಂತಹ ಪ್ರಮುಖ ಶಿಕ್ಷಣ ಸಂಸ್ಥೆಗಳನ್ನು ಸಂಪರ್ಕಿಸುತ್ತದೆ. ಪ್ರಸ್ತುತ ಈ ಮಾರ್ಗವು ಅಸುರಕ್ಷಿತವಾಗಿದೆ. ಈ ಜಂಕ್ಷನ್‌ನಲ್ಲಿ ಅಂಗವಿಕಲ ಮಕ್ಕಳ ಓಡಾಟಕ್ಕೆ ಪೂರಕ ವಾತಾವರಣ ಇರಬೇಕು’ ಎಂದರು.

ADVERTISEMENT

‘ನಮ್ಮ ಸಂಸ್ಥೆಯ ವಾಸ್ತುಶಿಲ್ಪ ವಿದ್ಯಾರ್ಥಿಗಳು ಇಲ್ಲಿ ಸಂಚರಿಸುವ ಪಾದಚಾರಿಗಳು, ಅಂಗವಿಕಲರು, ಅವರ ಆರೈಕೆ ಮಾಡುವವರೊಂದಿಗೆ ಸಂವಾದ ನಡೆಸಿದ್ದು, ಇಲ್ಲಿನ ರಸ್ತೆ ನಿರ್ಮಾಣ ಸಮಸ್ಯೆಗಳನ್ನು ಗುರುತಿಸಿದ್ದಾರೆ. ಇದು ಉತ್ತಮ ಸಂಚಾರ ವ್ಯವಸ್ಥೆ ನಿರ್ಮಾಣಕ್ಕೆ ಅಗತ್ಯ ಮಾಹಿತಿ ನೀಡುತ್ತದೆ. ಜ.28ರಂದು ಜಂಕ್ಷನ್‌ನಲ್ಲಿಯೇ ಜನರ ಅಭಿಪ್ರಾಯ ದಾಖಲಿಸುವ ಕಾರ್ಯಕ್ರಮ ಮಾಡಲಾಗುವುದು. ಸಂಬಂಧಿಸಿದ ಸರ್ಕಾರಿ ಸಂಸ್ಥೆಗಳಿಗೂ ಅಂತಿಮ ವಿನ್ಯಾಸ ಯೋಜನೆಯನ್ನು ವಿವರಿಸಲಾಗುವುದು’ ಎಂದರು.

ವಿದ್ಯಾರ್ಥಿಗಳಾದ ವಂದನಾ, ವರ್ಷಿತಾ ತಾವು ನಡೆಸಿದ ಸಮೀಕ್ಷೆ ಬಗ್ಗೆ ಮಾಹಿತಿ ನೀಡಿದರು.

ನಗರ ಸಾರ್ವಜನಿಕ ಸ್ಥಳಗಳ ತಜ್ಞ ದೀಪಕ್ ಶ್ರೀನಿವಾಸನ್, ‘ಗ್ರೀನ್‌ಪೀಸ್ ಆಯೋಜಿಸುತ್ತಿರುವ ಇಮ್ಯಾಜಿನೇರಿಯಂ(ಕಾಲ್ಪನಿಕ ನಿರ್ಮಾಣ) ಕಾರ್ಯಕ್ರಮವು ಮೈಸೂರಿನ ಜನರು ತಮ್ಮ ನಗರವನ್ನು ತಾವು ನೋಡಬಯಸುವ ರೀತಿಯಲ್ಲಿ, ಎಲ್ಲರನ್ನೂ ಒಳಗೊಳ್ಳುವ, ಎಲ್ಲರಿಗೂ ದೊರಕಬಲ್ಲ ರೀತಿಯಲ್ಲಿ ಮರು ಕಲ್ಪಿಸಿಕೊಳ್ಳಲು ಸಹಾಯ ಮಾಡುತ್ತದೆ’ ಎಂದರು.

ಅಂಗವಿಕಲ ಮಗುವಿನ ತಾಯಿ ಪುಷ್ಪಾ ಮಾತನಾಡಿ, ‘ಇಲ್ಲಿನ ಪಾದಚಾರಿ ಮಾರ್ಗಗಳು ತುಂಬಾ ಕಿರಿದಾಗಿದ್ದು, ಮಧ್ಯದಲ್ಲಿ ಆಗಾಗ ರಸ್ತೆಯನ್ನು ಬಳಸಬೇಕಾಗುತ್ತದೆ. ಇದರಿಂದಾಗಿ ಅಪಘಾತದ ಅಪಾಯ ಸದಾ ಇರುತ್ತದೆ. ಇದು ಸೂಕ್ಷ್ಮ ಪ್ರದೇಶವಾಗಿದ್ದು, ಕಟ್ಟುನಿಟ್ಟಿನ ವೇಗಮಿತಿ ನಿಗದಿಪಡಿಸಬೇಕು’ ಎಂದು ಒತ್ತಾಯಿಸಿದರು.