ಹನಗೋಡು: ನಾಗರಹೊಳೆ ರಾಷ್ಟ್ರೀಯ ಉದ್ಯಾನ ವನದಂಚಿನ ಗ್ರಾಮ ನೇರಳಕುಪ್ಪೆಯಲ್ಲಿ ವನ್ಯಜೀವಿ ಹಾವಳಿ, ಬೆಳೆ ನಾಶ, ಕುಡಿಯುವ ನೀರು, ಆರೋಗ್ಯ ಸಮಸ್ಯೆ, ಸ್ಮಶಾನದ ಕೊರತೆ ಸೇರಿದಂತೆ ಅನೇಕ ಸಮಸ್ಯೆಗಳು ಗ್ರಾಮಸ್ಥರನ್ನು ಕಾಡುತ್ತಿವೆ.
ಗ್ರಾಮದಲ್ಲಿ ಶನಿವಾರ (ಜ.21 ರಂದು) ಹಮ್ಮಿಕೊಂಡಿರುವ ಜಿಲ್ಲಾಧಿಕಾರಿ ವಾಸ್ತವ್ಯ ಕಾರ್ಯಕ್ರಮ ದಲ್ಲಿ ಈ ಸಮಸ್ಯೆಗಳಿಗೆ ಪರಿಹಾರ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಗ್ರಾಮಸ್ಥರು ಇದ್ದಾರೆ.
ಗ್ರಾಮ ಪಂಚಾಯಿತಿ ಕೇಂದ್ರವಾಗಿ ರುವ ನೇರಳಕುಪ್ಪೆಯು ಜಿಲ್ಲಾ ಕೇಂದ್ರದಿಂದ 75 ಕಿ.ಮೀ, ತಾಲ್ಲೂಕು ಕೇಂದ್ರದಿಂದ 25 ಕಿ.ಮೀ ದೂರವಿದೆ. ಆದಿವಾಸಿಗಳೇ ಹೆಚ್ಚಿರುವ ಈ ಗ್ರಾಮದಲ್ಲಿ 1,162 ಜನಸಂಖ್ಯೆ ಇದೆ. ಈ ಪೈಕಿ ಪರಿಶಿಷ್ಟ ಪಂಗಡದ 642, ಪರಿಶಿಷ್ಟ ಜಾತಿಯ 33, ಇತರೆ 427 ಜನರಿದ್ದಾರೆ. ಗ್ರಾ.ಪಂ ವ್ಯಾಪ್ತಿಯಲ್ಲಿ 11 ಗ್ರಾಮಗಳು ಬರಲಿದ್ದು, ಬಹುತೇಕ ಗ್ರಾಮಗಳು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಂಚಿಗೆ ಸೇರಿವೆ.
ಈ ಗ್ರಾಮಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ರೈತರು ಬೆಳೆಗಳು ರಕ್ಷಿಸಿಕೊಳ್ಳಲು ಪರದಾಡುವಂತಾಗಿದೆ. ನಾಗರಹೊಳೆ ಕಾಡಂಚಿನಲ್ಲಿ ರೈಲ್ವೆ ಬ್ಯಾರಿಕೇಡ್ ನಿರ್ಮಿಸಿದ್ದರೂ ಆನೆ ಸೇರಿದಂತೆ ವಿವಿಧ ಪ್ರಾಣಿಗಳು ನುಸುಳಿ ಬಂದು ಬೆಳೆಗಳನ್ನು ನಾಶ ಮಾಡುತ್ತಿವೆ.
ಮಾನವ– ವನ್ಯಜೀವಿ ಸಂಘರ್ಷ: ಈ ಭಾಗದಲ್ಲಿ ಮಾನವ– ವನ್ಯಜೀವಿ ಸಂಘರ್ಷ ಹೆಚ್ಚಾಗಿದೆ. ಕಳೆದ ಎರಡು ವರ್ಷಗಳಲ್ಲಿ ಇಬ್ಬರನ್ನು ಹುಲಿ ಕೊಂದಿದೆ. ಅನೇಕ ಸಾಕು ಪ್ರಾಣಿಗಳು ಜೀವ ಕಳೆದುಕೊಂಡಿವೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮ ಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿದ್ದರೂ ಆರಂಭ ವಾಗಿಲ್ಲ. ಹೀಗಾಗಿ, ಘಟಕಗಳು ಪಾಳು ಬಿದ್ದಿದ್ದು, ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ.
ಆಶ್ರಯ ಮನೆಯಲ್ಲಿ ಅಂಗನವಾಡಿ: ನೇರಳಕುಪ್ಪೆ ಬಿ ಹಾಡಿಯಲ್ಲಿ ಆಶ್ರಯ ಯೋಜನೆ ಯಡಿ ನಿರ್ಮಿಸಿದ ಮನೆಯಲ್ಲೇ ಅಂಗನವಾಡಿ ಕೇಂದ್ರ ನಡೆಯುತ್ತಿದ್ದು, ಆದಿವಾಸಿ ಮಕ್ಕಳು ದಿನನಿತ್ಯ ಪಾಠ ಕಲಿಯುತ್ತಿದ್ದಾರೆ.
ಸ್ಮಶಾನ ಕೊರತೆ: ನೇರಳಕುಪ್ಪೆ ಎ ಮತ್ತು ಬಿ ಹಾಡಿಗಳಲ್ಲಿ ಗಿರಿಜನರೇ ಹೆಚ್ಚಿದ್ದು, ಕೆಲಸ ಅರಸಿ ಕೊಡಗಿಗೆ ಹೋಗುತ್ತಿದ್ದಾರೆ. ಅನೇಕರಿಗೆ ಸ್ವಂತ ಭೂಮಿ ಇಲ್ಲ. ಕೂಲಿ ಕೆಲಸವನ್ನೇ ನಂಬಿ ಜೀವಿಸುತ್ತಿದ್ದಾರೆ. ಜತೆಗೆ, ಅಂತ್ಯಸಂಸ್ಕಾರಕ್ಕಾಗಿ ಸ್ಮಶಾನ ಇಲ್ಲದೆ ಸಮಸ್ಯೆ ಉಂಟಾಗಿದೆ.
‘ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಿ’
‘ನೇರಳಕುಪ್ಪೆ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದರೂ ವೈದ್ಯರು ಬೆಳಗಿನ ಸಮಯದಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾತ್ರಿ ವೇಳೆಯಲ್ಲಿ ಯಾರಿಗಾದರೂ ಆರೋಗ್ಯ ಸಮಸ್ಯೆ ಉಂಟಾದರೆ ದೂರದ ಹನಗೋಡು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಬೇಕು. ರಾತ್ರಿ ವೇಳೆ ಕಾಡು ಪ್ರಾಣಿಗಳ ಭೀತಿ ನಡುವೆ ಆರೋಗ್ಯ ಕೇಂದ್ರಕ್ಕೆ ಹೋಗುವಂತಾಗಿದೆ. ಈ ಕೇಂದ್ರವನ್ನು ಮೇಲ್ದರ್ಜೆಗೇರಿಸಿ 24 ಗಂಟೆಯೂ ವೈದ್ಯರು ಇರುವಂತೆ ಮಾಡಬೇಕು. ಹೆರಿಗೆ ಸೇರಿದಂತೆ ಇತರೆ ಆರೋಗ್ಯ ಸೇವೆ ಒದಗಿಸಬೇಕು’ ಎಂದು ಜಿಲ್ಲಾ ಎಸ್‌ಸಿ, ಎಸ್‌ಟಿ ಹಿತರಕ್ಷಣಾ ಸಮಿತಿ ಮಾಜಿ ಸದಸ್ಯ ನೇರಳಕುಪ್ಪೆ ಮಹದೇವ್ ಆಗ್ರಹಿಸಿದರು.
***
ಗ್ರಾಮದಲ್ಲಿ ಸ್ಮಶಾನ ಇಲ್ಲದಿರುವುದು ಗಮನಕ್ಕೆ ಬಂದಿದೆ. ಸ್ಮಶಾನಕ್ಕೆ ಜಾಗ ಗುರುತಿಸಿದ್ದು, ಅಗತ್ಯ ಕ್ರಮ ಕೈಗೊಳ್ಳಲಾಗುವುದು.
–ದೇವರಾಜ್, ಪಿಡಿಒ, ನೇರಳಕುಪ್ಪೆ
***
ಕಾಡು ಪ್ರಾಣಿಗಳ ಹಾವಳಿಗೆ ಶಾಶ್ವತ ಪರಿಹಾರ ರೂಪಿಸಬೇಕು. ಬೆಳೆ ಹಾಗೂ ಜೀವ ಹಾನಿ ತಪ್ಪಿಸಲು ಅರಣ್ಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.
–ಸಂಜೀವ್, ನೇರಳಕುಪ್ಪೆ ಗ್ರಾಮಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.