ಮೈಸೂರು: ಜಂಬೂ ಸವಾರಿಯನ್ನು ಕಣ್ತುಂಬಿಕೊಳ್ಳಲು ಗುರುವಾರ ಬೆಳಿಗ್ಗೆಯೇ ಬಂದು ರಸ್ತೆಯ ಇಕ್ಕೆಲಗಳಲ್ಲಿ ಕುಳಿತಿದ್ದ ಜನರು ‘ಅಭಿಮನ್ಯು’ ಹೊತ್ತು ತಂದ ಅಂಬಾರಿ ಹಾಗೂ ಚಾಮುಂಡೇಶ್ವರಿ ತಾಯಿಯ ವಿಗ್ರಹ ಕಂಡು ಹರ್ಷೋದ್ಗಾರ ತೆಗೆದರು.
‘ಚಾಮುಂಡೇಶ್ವರಿ ತಾಯಿಗೆ ಜಯವಾಗಲಿ’ ಎಂಬ ಘೋಷಣೆ ಮೆರವಣಿಗೆ ಮಾರ್ಗದುದ್ದಕ್ಕೂ ಮಾರ್ದನಿಸಿತು.
ಬಲರಾಮ ದ್ವಾರದಿಂದ ಆರಂಭವಾಗಿ ಬನ್ನಿಮಂಟಪದವರೆಗೆ ಜಂಬೂಸವಾರಿ ಸಾಗುವ ಮಾರ್ಗದ ಇಕ್ಕೆಲಗಳಲ್ಲಿ ಬುಧವಾರದಿಂದಲೇ ಜಾಗ ಕಾಯ್ದಿರಿಸಿ, ಗುರುವಾರ ಮುಂಜಾನೆಯಿಂದಲೇ ಜನ ತಂಡೋಪ ತಂಡವಾಗಿ ಬಂದು ಸೇರಿದ್ದರು.
ಜನರಿಗೆ ಹಾಗೂ ಸ್ವಯಂ ಸೇವಕರಿಗೆ ವಾಸವಿ ಯುವ ಸಂಘ, ವಾಸವಿ ಸೇವಾ ದಳ, ವಿದ್ಯುತ್ ಗುತ್ತಿಗೆದಾರ ಸಂಘದ ಸದಸ್ಯರು ನೀರು, ಚಾಕೋಲೆಟ್, ಸೌತೆಕಾಯಿ, ಮಜ್ಜಿಗೆ ನೀರು ವಿತರಿಸಿದರು.
ನಿಶಾನೆ ಆನೆ ಧನಂಜಯ ಅರಮನೆ ಆವರಣದಿಂದ ಹೊರಗೆ ಹೆಜ್ಜೆಯಿಡುತ್ತಿದ್ದಂತೆ ಸುರಿದ ಮಳೆ ತಂಪೆರೆಯಿತು. ಮಳೆಯನ್ನೂ ಲೆಕ್ಕಿಸದೆ ಸಾಗುತ್ತಿದ್ದ ಆನೆಗಳನ್ನು ನೋಡಿ ಜನರ ಉತ್ಸಾಹ ಇಮ್ಮಡಿಯಾಯಿತು.
ಮುಗಿಲು ಮುಟ್ಟಿದ ಕೂಗು: ನಿಶಾನೆ ಆನೆಯ ತಂಡದಲ್ಲಿ ಬಂದ ಧನಂಜಯ, ಏಕಲವ್ಯ, ಕಂಜನ್, ಭೀಮ ಆನೆಯನ್ನು ಕಂಡೊಡನೆ ಜನರ ಕೂಗು ಮುಗಿಲು ಮುಟ್ಟಿತು. ಮಕ್ಕಳು ‘ಭೀಮಾ... ಭೀಮಾ’ ಎಂದು ಕೂಗಿದರು. ಕರೆಗೆ ಓಗೊಡುತ್ತಿದ್ದ ಅವು ಸೊಂಡಿಲೆತ್ತಿ ನಮಸ್ಕರಿಸುತ್ತಿದ್ದವು. ಅದನ್ನು ಕಂಡ ಜನ ಕೇಕೆ, ಶಿಳ್ಳೆ ಹಾಕಿ ಸಂಭ್ರಮಿಸಿದರು. ಅಂಬಾರಿ ಆನೆಯಾಗಿದ್ದ ಅರ್ಜುನನ್ನು ನೆನೆದು ಭಾವುಕರಾದರು.
ಸ್ತಬ್ಧ ಚಿತ್ರಗಳು ಮುಗಿದು, ಅಂಬಾರಿ ಆನೆ ರಾಜ ಗಾಂಭಿರ್ಯದಿಂದ ಹೆಜ್ಜೆಯಿಡುವುದನ್ನು ಕಂಡೊಡನೆ ಅದನ್ನು ವೀಕ್ಷಿಸಲು ಜನರು ತಳ್ಳಾಟ ನಡೆಸಿದರು. ಈ ನಡುವೆ ಮುಂಭಾಗದಲ್ಲಿದ್ದ ಎಳೆಯ ಮಕ್ಕಳು ಬ್ಯಾರಿಕೇಡ್ ನಡುವೆ ಸಿಲುಕಿ ಚೀರಾಡಿದರು. ಬಳಿಕ ಕೆಲವು ಮಹಿಳೆಯರು ಹಾಗೂ ಮಕ್ಕಳನ್ನು ರಸ್ತೆಯ ಬದಿ ಕೂರಿಸಲಾಯಿತು. ಅಮ್ಮನಿಂದ ತಪ್ಪಿಸಿಕೊಂಡ ಮಕ್ಕಳನ್ನು ಪೊಲೀಸ್ ಸಿಬ್ಬಂದಿ ಸಂತೈಸುತ್ತಿದ್ದ ದೃಶ್ಯ ಭಾವನಾತ್ಮಕವಾಗಿತ್ತು.
ರಸ್ತೆಗೆ ಜನ ದಾಟದಂತೆ ಎರಡೂ ಬದಿಗಳಲ್ಲಿ ಬ್ಯಾರಿಕೇಡ್ ಹಾಕಲಾಗಿತ್ತಾದರೂ, ಸ್ತಬ್ಧಚಿತ್ರ, ಅಂಬಾರಿ ಆಗಮಿಸುವ ವೇಳೆ ಕೆ.ಆರ್. ವೃತ್ತ, ನಗರ ಬಸ್ ನಿಲ್ದಾಣ, ಆಯುರ್ವೇದ ವೃತ್ತ, ಚಿಕ್ಕ ಗಡಿಯಾರದ ಬಳಿ ತಳ್ಳಾಟ ನಡೆದು, ಬ್ಯಾರಿಕೇಡ್ ಮುರಿದು ಮಂದೆ ಬರಲು ಯತ್ನಿಸಿದರು. ಅವರನ್ನು ನಿಯಂತ್ರಿಸಲು ಕೆಲವೆಡೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ತಳ್ಳಾಟದಿಂದ 50ಕ್ಕೂ ಹೆಚ್ಚು ಮಹಿಳೆಯರು ಉಸಿರಾಟ ತೊಂದರೆ ಅನುಭವಿಸಿದರು. ಅವರನ್ನು ಆಂಬುಲೆನ್ಸ್‌ಗಳಲ್ಲಿ ಕರೆದೊಯ್ಯಲಾಯಿತು.
ಕಾಣದ ವಿದೇಶಿಗರು: ಕೆಲವು ಸಂಘಟನೆಗಳು ಆಯುರ್ವೇದ ವೃತ್ತದಲ್ಲಿ ದಸರಾ ವೀಕ್ಷಿಸಲು ಬರುವ ವಿದೇಶಿಗರಿಗೆ ಜಂಬೂ ಸವಾರಿ ವೀಕ್ಷಣೆಗೆ ವ್ಯವಸ್ಥೆ ಮಾಡುತ್ತಿದ್ದವು. ಆದರೆ ಈ ಬಾರಿ ಆ ವ್ಯವಸ್ಥೆ ಇರಲಿಲ್ಲ. ಕಾರಣವೇನೆಂದು ತಿಳಿದುಬಂದಿಲ್ಲ.
ಭದ್ರತೆ: ಪೊಲೀಸ್ ಭದ್ರತೆಯ ಜೊತೆಗೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ 6 ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಹಾಗೂ 150 ಸಿಬ್ಬಂದಿಯನ್ನು ಮೆರವಣಿಗೆಯಲ್ಲಿ ನಿಯೋಜಿಸಲಾಗಿತ್ತು. 15ಕ್ಕೂ ಹೆಚ್ಚು ಜಲ ವಾಹನ, 10 ಕ್ಷಿಪ್ರ ಸ್ಪಂದನ ವಾಹನ ಸೇರಿ ವಿವಿಧ ಸೇವೆಯ 30 ತುರ್ತು ಸೇವಾ ವಾಹನ ಕಾರ್ಯನಿರ್ವಹಣೆ ಮಾಡಿದ್ದವು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮೂರು ಕಡೆಗಳಲ್ಲಿ ಜನರಿಗೆ ಮೈಕ್ ಮೂಲಕ ಮಾಹಿತಿ ನೀಡಲಾಯಿತು. ಸ್ಕೌಟ್ಸ್ ಮತ್ತು ಗೈಡ್ಸ್, ಎನ್‌ಸಿಸಿ ವಿದ್ಯಾರ್ಥಿಗಳೂ ಸ್ವಯಂ ಸೇವಕರಾಗಿ ಭಾಗವಹಿಸಿದ್ದರು.
- ಪೊಲೀಸರಿಂದ ಕಟ್ಟೆಚ್ಚರ: ಕಟ್ಟಡದಲ್ಲಿ ಕಾಣದ ಜನ ಜಂಬೂ ಸವಾರಿ ಮಾರ್ಗದ ಹಳೆಯ ಕಟ್ಟಡ ಹಾಗೂ ಮರದಲ್ಲಿ ಈ ಬಾರಿ ಜನರು ಕಾಣಿಸಲಿಲ್ಲ. ಪೊಲೀಸ್ ಸಿಬ್ಬಂದಿಯ ನಿರಂತರ ಶ್ರಮ ಇದಕ್ಕೆ ಕಾರಣವಾಯಿತು. ಕೋಟೆ ಆಂಜನೇಯ ದೇವಾಲಯದ ಮುಂಭಾಗ ಕೆ.ಆರ್ ವೃತ್ತ ಆಯುರ್ವೇದ ವೃತ್ತದ ಬಳಿ ಜನ ಕಟ್ಟಡ ಏರುತ್ತಿದ್ದರು. ಅದನ್ನು ತಡೆಯಲು ಮರಗಳಿಗೆ ಮುಳ್ಳಿನ ತಂತಿ ಅಳವಡಿಸಲಾಗಿತ್ತು. ಸಯ್ಯಾಜಿ ರಾವ್ ರಸ್ತೆಯ ಸಬ್‌ವೇ ಮುಚ್ಚಲಾಗಿತ್ತು. ಶಿಥಿಲ ಕಟ್ಟಡಗಳ ಪ್ರವೇಶ ಬಾಗಿಲಿಗೆ ಬ್ಯಾರಿಕೇಡ್ ಇಟ್ಟು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು. ಇದರಿಂದ ದೇವರಾಜ ಅರಸು ರಸ್ತೆಯ ಎತ್ತರಡ ಕಟ್ಟಡಗಳಿಗೆ ಜನ ಹತ್ತಿದರು. ಪೊಲೀಸ್ ಭದ್ರತೆ ನಡುವೆಯೂ ಅಂಬಾರಿ ಆಗಮಿಸುವಾಗ ಹಲವರು ಶಿಥಿಲ ಕಟ್ಟಡ ಏರಿದರು.
ಜಾತಿ ಧರ್ಮ ಮೀರಿದ ದಸರಾ:’ ಇದು ನಮ್ಮೂರ ನಾಡಹಬ್ಬ ಬೆಳಿಗ್ಗಿನಿಂದಲೇ ಅಂಬಾರಿ ನೋಡಲು ಕಾಯುತ್ತಿದ್ದೇವೆ.. ದಸರಾ ಜಂಬೂ ಸವಾರಿ ವೀಕ್ಷಿಸಲು ಕಾಯುತ್ತಿದ್ದ ಆಸಿಯಾ ಬಾನು ಅವಸರದಲ್ಲೇ ಮಾತನಾಡಿದ್ದು ಹೀಗೆ.. ‘ದಸರಾ ನೋಡಲೆಂದು ಬೇರೆ ಊರಿನವರನ್ನೂ ಆಮಂತ್ರಿಸಿದ್ದೇವೆ. ಆನೆಗಳು ಸ್ತಬ್ದ ಚಿತ್ರಗಳನ್ನು ನೋಡಲು ಸಂತೋಷವಾಗುತ್ತದೆ. ಅದಕ್ಕಾಗಿಯೇ ಪ್ರತೀ ವರ್ಷ ಬರುತ್ತೇನೆ’ ಎಂದು ಸಂತಸ ಹಂಚಿಕೊಂಡರು. ‘ದಸರಾ ಜಾತಿ ಧರ್ಮದ ಮೀರಿದ ಹಬ್ಬ. ಹಿಂದೆ ನಮ್ಮ ತಾಯಿ ಕರೆದುಕೊಂಡು ಬಂದು ಈ ಸಂಭ್ರಮ ತೋರಿಸುತ್ತಿದ್ದರು. ಈಗ ನನ್ನ ಮಕ್ಕಳನ್ನು ಕರೆದುಕೊಂಡು ಬಂದಿದ್ದೇನೆ. ಬುಧವಾರ ರಾತ್ರಿಯೇ ಜಾಗ ಕಾಯ್ದಿರಿಸಿ ಬೆಳಿಗ್ಗಿ ಬಂದಿದ್ದೇನೆ’ ಎಂದು ಆಲಿಯಾ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.