ADVERTISEMENT

ಸಮಾಜದ ಆರೋಗ್ಯಕ್ಕೆ ಕಲೆ ಬಳಸಿ: ಮೈಸೂರು ಮಂಜುನಾಥ್‌

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2025, 4:23 IST
Last Updated 31 ಆಗಸ್ಟ್ 2025, 4:23 IST
ಮೈಸೂರಿನ ರಾಜ್ಯ ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಲ್ಲಿ ಶನಿವಾರ ವಿಶೇಷ ಪರೀಕ್ಷೆಗಳಲ್ಲಿ ರ್‍ಯಾಂಕ್‌ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು
ಮೈಸೂರಿನ ರಾಜ್ಯ ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಲ್ಲಿ ಶನಿವಾರ ವಿಶೇಷ ಪರೀಕ್ಷೆಗಳಲ್ಲಿ ರ್‍ಯಾಂಕ್‌ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು   

ಮೈಸೂರು: ‘ಯಾವುದೇ ರಾಷ್ಟ್ರ, ಸಾಮ್ರಾಜ್ಯದ ಸಾಧನೆ ಅಳೆಯುವಲ್ಲಿ ಪ್ರದರ್ಶಕ ಕಲೆಗಳಿಗೆ ಪ್ರಮುಖ ಸ್ಥಾನವಿದೆ. ಇತಿಹಾಸ ನಿರ್ಮಾಣದಲ್ಲಿ ಬಹುದೊಡ್ಡ ಆಧಾರವಿದು’ ಎಂದು ವಯೊಲಿನ್‌ ವಾದಕ ಮೈಸೂರು ಮಂಜುನಾಥ್‌ ಹೇಳಿದರು.

ನಗರದಲ್ಲಿ ಶನಿವಾರ ರಾಜ್ಯ ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಿಂದ ವಿಶೇಷ ಪರೀಕ್ಷೆಗಳಲ್ಲಿ ರ್‍ಯಾಂಕ್‌ ಪಡೆದ ವಿದ್ಯಾರ್ಥಿಗಳಲ್ಲಿ ಪ್ರಮಾಣಪತ್ರ ನೀಡಿ ಮಾತನಾಡಿದರು.

‘ಶಿಕ್ಷಣ, ಆರೋಗ್ಯ, ಕಲೆ, ಸಾಹಿತ್ಯ ಹಾಗೂ ರಂಗಭೂಮಿಯು ದೇಶದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡುತ್ತದೆ. ಎಲ್ಲರೂ ಯೋಧರಾಗಿಯೇ ದೇಶ ರಕ್ಷಿಸಬೇಕಿಲ್ಲ. ತಮ್ಮ ಆಯ್ಕೆಯ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡುವ ಮೂಲಕ ಕೊಡುಗೆ ನೀಡಬಹುದು’ ಎಂದರು.

ADVERTISEMENT

‘ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಒತ್ತಡಗಳ ನಡುವೆಯೂ ಪ್ರದರ್ಶಕ ಕಲೆಗಳಿಗೆ ಸಮಯ ಮೀಸಲಿಟ್ಟಿದ್ದಾರೆ. ಅವರಿಗೆ ಪೋಷಕರ ಸಹಕಾರವೂ ದೊರೆತಿರುವುದು ಸ್ಮರಣಾರ್ಹ. ಕಲೆ ಎಲ್ಲರಿಗೂ ಒಲೆಯುವುದಿಲ್ಲ. ಪ್ರಮಾಣಪತ್ರಗಳನ್ನು ಪಡೆದವರು ನಿರಂತರ ಕಲಿಕೆಯಲ್ಲಿ ತೊಡಗಿಕೊಳ್ಳಬೇಕು. ಸಮಾಜದ ಸ್ವಾಸ್ಥ್ಯಕ್ಕೆ ಸಹಕರಿಸಬೇಕು’ ಎಂದು ಸಲಹೆ ನೀಡಿದರು.

‘ವಿಶ್ವವಿದ್ಯಾಲಯಗಳು ತಮ್ಮ ನಿತ್ಯದ ಕೆಲಸವನ್ನು ಮಾಡುವುದೇ ಕಷ್ಟವಾಗಿದೆ. ಅಂಥ ಸಂದರ್ಭದಲ್ಲೂ ಸಂಗೀತ ವಿವಿಯು ವಿಶೇಷ ಪರೀಕ್ಷೆಗಳ ಮೂಲಕ ಸಾವಿರಾರು ಸಂಖ್ಯೆಯ ವಿದ್ಯಾರ್ಥಿಗಳಲ್ಲಿ ಅರ್ಹರನ್ನು ಗುರುತಿಸಿ ಪ್ರಮಾಣಪತ್ರ ನೀಡುತ್ತಿರುವುದು ಶ್ಲಾಘನೀಯ’ ಎಂದರು.

ವಿಶ್ವವಿದ್ಯಾಲಯ ಕುಲಪತಿ ಪ್ರೊ.ನಾಗೇಶ್ ವಿ.ಬೆಟ್ಟಕೋಟೆ ಮಾತನಾಡಿ, ‘12 ಸಾವಿರ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಿ ಫಲಿತಾಂಶ ನೀಡಲಾಗಿದೆ. ವಿಶ್ವವಿದ್ಯಾಲಯಕ್ಕೆ ಉತ್ತಮ ಹಸಿರು ಕ್ಯಾಂಪಸ್‌ಗಾಗಿ 3ನೇ ರ್‍ಯಾಂಕ್‌, ಔಟ್‌ಲುಕ್‌ ಪತ್ರಿಕೆಯಲ್ಲಿ ರಾಷ್ಟ್ರಮಟ್ಟದಲ್ಲೂ 7ನೇ ಸ್ಥಾನ ಪಡೆದಿದೆ’ ಎಂದು ತಿಳಿಸಿದರು.

‘ರಾಜ್ಯದಲ್ಲಿ 87ಕ್ಕೂ ಅಧಿಕ ಸಂಸ್ಥೆಗಳು ವಿಶ್ವವಿದ್ಯಾಲಯದ ಸಹಕಾರದಲ್ಲಿ ಕಾರ್ಯನಿರ್ವಹಿಸುತ್ತಿವೆ’ ಎಂದರು.

85 ವಿದ್ಯಾರ್ಥಿಗಳು ರ್‍ಯಾಂಕ್‌ ಪಡೆದರು. ವಿಶ್ವವಿದ್ಯಾಲಯ ಹಣಕಾಸು ಅಧಿಕಾರಿ ಕೆ.ಎಸ್‌.ರೇಖಾ, ಮೌಲ್ಯಮಾಪನ ಕುಲಸಚಿವ ಪ್ರೊ.ಎಂ.ಜಿ.ಮಂಜುನಾಥ್‌ ಹಾಜರಿದ್ದರು.

ದೇಶ ಮುಂದುವರೆಯಲು ಶಿಕ್ಷಣ ಆರೋಗ್ಯ ಸಂಸ್ಕೃತಿಗೆ ಆದ್ಯತೆ ಅಗತ್ಯ. ಸಂಗೀತ ವಿಶ್ವವಿದ್ಯಾಲಯವೂ ರಾಷ್ಟ್ರಮಟ್ಟದ ಪ್ರತಿಭೆಗಳ ಅನಾವರಣಕ್ಕೆ ಸಹಕರಿಸುತ್ತಿದೆ
ಪ್ರೊ.ನಾಗೇಶ್ ವಿ.ಬೆಟ್ಟಕೋಟೆ ಕುಲಪತಿ ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.