
ಮೈಸೂರು: ‘ಕಲೆಗಳಲ್ಲಿ ಬೇಧವಿಲ್ಲ. ರಂಗಭೂಮಿಯಂತೂ ಧರ್ಮಾತೀತ, ಜಾತ್ಯತೀತ ಹಾಗೂ ದೇಶಾತೀತ’ ಎಂದು ರಂಗಕರ್ಮಿ ಸಿ.ಬಸವಲಿಂಗಯ್ಯ ಹೇಳಿದರು.
ನಗರದ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಮತ್ತು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆಯಿಂದ ವಿಶ್ವವಿದ್ಯಾಲಯ ಆವರಣದಲ್ಲಿ ಸೋಮವಾರ ನಡೆದ ರಂಗಭೂಮಿ ಮತ್ತು ಪ್ರದರ್ಶಕ ಕಲೆಗಳು ಕುರಿತ 2 ದಿನಗಳ ಅಂತರರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
‘ವಿ ದ ಪೀಪಲ್ ಆಫ್ ಇಂಡಿಯಾ ಎಂಬ ವಾಕ್ಯವೂ ಇದನ್ನೇ ಧ್ವನಿಸುತ್ತದೆ. ರಂಗಭೂಮಿಯಲ್ಲಿ ಪಾತ್ರಗಳನ್ನು ಅಭಿನಯಿಸಲಾಗುತ್ತದೆ. ನಟರೇ ಪಾತ್ರಗಳಾಗುವುದಿಲ್ಲ. ಸಮಾಜವನ್ನು ಒಗ್ಗೂಡಿಸಲು ಪಾತ್ರಗಳು ಪ್ರಯತ್ನಿಸುತ್ತವೆ. ಪ್ರದರ್ಶಕ ಕಲೆಗಳ ಪ್ರಯತ್ನವೂ ಇದೇ ಆಗಿದೆ’ ಎಂದರು.
‘ದೇಶದಲ್ಲಿ ಹಲವು ಭಾಷೆ, ಪ್ರದರ್ಶಕ ಕಲೆಗಳಿವೆ. ನಮ್ಮ ಸಂಸ್ಕೃತಿಯ ಹಿರಿಮೆ ಇವುಗಳ ವಿಶ್ರಣದಲ್ಲಿದೆ. ಎಲ್ಲ ಸಮಯದಲ್ಲೂ ಬೆಳಕನ್ನೇ ಶ್ರೇಷ್ಠವಾಗಿ ಕಾಣಲು ಸಾಧ್ಯವಿಲ್ಲ. ಬೆಳಕು ಸಮಾಜದಲ್ಲಿನ ಅಸಮಾನತೆ ತೋರುತ್ತದೆ. ಕತ್ತಲು ಎಲ್ಲವನ್ನೂ ಒಗ್ಗೂಡಿಸುತ್ತದೆ ಎಂಬ ಚಿಂತನೆಯೂ ಅಗತ್ಯ. ರಂಗಭೂಮಿ ಅಥವಾ ಕಲಾ ಕ್ಷೇತ್ರವು ಇಂಥ ಆಲೋಚನೆ ಪ್ರೇರೇಪಿಸುತ್ತದೆ’ ಎಂದರು.
ಮಧ್ಯಪ್ರದೇಶದ ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತ ಎಸ್.ಧನರಾಜು ಮಾತನಾಡಿ, ‘ಕಲೆ, ಸಾಹಿತ್ಯ ನಮ್ಮನ್ನು ಒಗ್ಗೂಡಿಸುತ್ತದೆ. ಆಧುನಿಕತೆ ಸೃಷ್ಟಿಸುವ ಸಮಸ್ಯೆಗೂ ಇದು ಔಷಧಿ. ದೇಶದ ವೈವಿಧ್ಯತೆ ಉಳಿಸುವುದು, ಇತರರ ವೈವಿಧ್ಯತೆಯನ್ನು ಗೌರವಿಸುವುದು ನಮ್ಮ ಕರ್ತವ್ಯವಾಗಬೇಕು’ ಎಂದು ಹೇಳಿದರು.
ಕುಲಪತಿ ಪ್ರೊ.ನಾಗೇಶ್ ವಿ.ಬೆಟ್ಟಕೋಟೆ ಅಧ್ಯಕ್ಷತೆ ವಹಿಸಿದ್ದರು. ಅಮೆರಿಕದ ಬೇಲರ್ ವಿಶ್ವವಿದ್ಯಾಲಯದ ವಸ್ತ್ರ ವಿನ್ಯಾಸಕಾರ್ತಿ ಪ್ರೊ.ಸಾರಾ ಮೋಷರ್, ವೇದಿಕೆ ಅಧ್ಯಕ್ಷ ರಾಜೇಶ್ ಎಚ್.ತಲಕಾಡು, ಪರೀಕ್ಷಾಂಗ ಕುಲಸಚಿವ ಪ್ರೊ.ಎಂ.ಜಿ.ಮಂಜುನಾಥ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.