ಪಿರಿಯಾಪಟ್ಟಣ: ಅಂಬೇಡ್ಕರ್ ಜೀವನದ ಬಗ್ಗೆ ಬಾಲ್ಯದಲ್ಲಿಯೇ ಮಕ್ಕಳಿಗೆ ಅಧ್ಯಯನ ಮಾಡಿಸಿದಾಗ ಮಾತ್ರ ಅಂಬೇಡ್ಕರ್ ಚಿಂತನೆ ಪ್ರತಿಯೊಬ್ಬರಿಗೂ ತಲುಪಲು ಸಾಧ್ಯ ಎಂದು ಮಲ್ಕುಂಡಿ ಮಹದೇವ್ ಸ್ವಾಮಿ ಹೇಳಿದರು.
ತಾಲ್ಲೂಕು ಎಸ್.ಸಿ., ಎಸ್.ಟಿ. ನೌಕರರ ಸಂಘ ಹಾಗೂ ಸಮ ಸಮಾಜ ನಿರ್ಮಾಣ ವೇದಿಕೆ ಪಟ್ಟಣದಲ್ಲಿ ಭಾನುವಾರ ಏರ್ಪಡಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆ ಹಾಗೂ ಒಂದು ದಿನದ ಕಾರ್ಯಾಗಾರದಲ್ಲಿ ‘ದಮ್ಮ ದೀಪೋತ್ಸವ ಮನೆ ಮನೆಗೆ ಬುದ್ಧ ಒಂದು ಅನುಭವ’ ಎಂಬ ವಿಷಯ ಮಂಡಿಸಿದರು.
ಅಂಬೇಡ್ಕರ್ ಅವರನ್ನು ಭಾಷಣಗಳಿಗೆ ಸೀಮಿತ ಮಾಡುತ್ತಿದ್ದೇವೆ. ಅವರ ಸಿದ್ಧಾಂತ ಯಾರಿಗೂ ತಲುಪುವುದಿಲ್ಲ, ಅಂಬೇಡ್ಕರ್ ಅವರ ಜೀವನವನ್ನು ಪ್ರತಿಯೊಬ್ಬರೂ ಅಧ್ಯಯನ ಮಾಡಿದಾಗ ಮಾತ್ರ ಸಿದ್ಧಾಂತಗಳು ನಮಗೆ ಅರ್ಥವಾಗುತ್ತದೆ ಎಂದರು. ಅಂಬೇಡ್ಕರ್ ಮಹಿಳೆಯರ ಹಕ್ಕಿಗಾಗಿ, ಶೋಷಿತರ ಸಮಾನತೆಗಾಗಿ ತನ್ನ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಹೋರಾಟವನ್ನು ರೂಪಿಸಿದವರು ಎಂದರು.
ಯುವ ಪೀಳಿಗೆ ಇಂದು ದುಷ್ಚಟಗಳಿಂದ ದೂರವಿದ್ದು ಉನ್ನತ ವಿದ್ಯಾಭ್ಯಾಸವನ್ನು ಹೊಂದುವುದರ ಜತೆಗೆ ಇತರರಿಗೆ ಜಾಗೃತಿ ಮೂಡಿಸಬೇಕಾಗಿದೆ. ಬುದ್ಧ, ಬಸವಣ್ಣ ಮತ್ತು ಅಂಬೇಡ್ಕರ್ ಅವರ ಚಿಂತನೆಗಳು ಸಮಾಜಕ್ಕೆ ಅನಿವಾರ್ಯವಾಗಿದೆ. ಸರ್ಕಾರಿ ನೌಕರರು ಸಾಕಷ್ಟು ಆರ್ಥಿಕ ಸದೃಢತೆ ಹೊಂದಿದ್ದು ಇತರರಿಗೆ ಸಹಾಯಕವಾಗಿ ನಿಲ್ಲಬೇಕು. ಬಡವರ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಮತ್ತು ಜೀವನದ ಅಭಿವೃದ್ಧಿ ಹೊಂದಲು ಆರ್ಥಿಕ ಸಹಾಯವನ್ನು ಮಾಡಬೇಕು ಇದು ಅಂಬೇಡ್ಕರ್ ಕನಸಾಗಿತ್ತು ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಖಜಾಂಚಿ ಶಿವರುದ್ರಯ್ಯ ಮಾತನಾಡಿ, ಅಂಬೇಡ್ಕರ್ ರಚಿಸಿದ ಸಂವಿಧಾನದಡಿ ಪ್ರತಿಯೊಬ್ಬರೂ ಹಕ್ಕು ಮತ್ತು ಸ್ವಾತಂತ್ರ ಪಡೆದಿದ್ದೇವೆ. ಸರ್ಕಾರಿ ನೌಕರರಿಗೆ ಅಂಬೇಡ್ಕರ್ ಅವರ ಋಣ ಬಹಳವಿದೆ, ಅಂಬೇಡ್ಕರ್ ತತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದರು.
ಸರ್ಕಾರಿ ನೌಕರರ ಸಂಘದ ರಾಜ್ಯಪರಿಷತ್ ಸದಸ್ಯ ಎಂ.ಡಿ. ದೇವರಾಜ್ ಮಾತನಾಡಿದರು. ಅಂಬೇಡ್ಕರ್ ಚಿಂತನೆ ಮತ್ತು ಸಾಮಾಜಿಕ ನ್ಯಾಯ ಮತ್ತು ಶೋಷಿತ ಸಮುದಾಯಗಳು ಸಾಮಾಜಿಕ ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು ಪಡೆಯುವ ಬಗ್ಗೆ ಕುರಿತು ವಿಚಾರಗೋಷ್ಠಿಯನ್ನು ನಡೆಸಲಾಯಿತು.
ಎಸಿ ಎಸ್‌ಟಿ ನೌಕರರ ಸಂಘದ ಅಧ್ಯಕ್ಷ ಅಣ್ಣಯ್ಯ, ಜೆ.ಸೋಮಣ್ಣ, ಪುಟ್ಟರಾಜು, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಟಿ.ಈರಯ್ಯ, ಎಸ್. ರಾಮು, ಮಹಾದೇವಮ್ಮ, ರವಿಚಂದ್ರ, ಸುರೇಶ ಕುಮಾರ್, ಇಕ್ಬಾಲ್ ಷರೀಫ್, ಸೋಮಶೇಖರ್ ಆವರ್ತಿ, ಧನರಾಜ್, ವೆಂಕಟೇಶ್ ಉಪ್ಪಾರ್, ರಾಜಣ್ಣ, ಭೈರಯ್ಯ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.