ADVERTISEMENT

ಮೀಸಲು ಅರಣ್ಯ ಘೋಷಣೆಗೆ ವಿರೋಧ: ಗರಿಗುಡ್ಡ ಕಾವಲು ರೈತರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 31 ಜುಲೈ 2025, 5:15 IST
Last Updated 31 ಜುಲೈ 2025, 5:15 IST
ಪಿರಿಯಾಪಟ್ಟಣ ತಾಲ್ಲೂಕಿನ ಗರಿಗುಡ್ಡ ಕಾವಲು ಗ್ರಾಮದ ಸರ್ವೆ ನಂಬರ್ 94ರ ಜಮೀನನ್ನು ಅರಣ್ಯ ಇಲಾಖೆ ಮೀಸಲು ಅರಣ್ಯವೆಂದು ಘೋಷಿಸಿರುವುದನ್ನು ವಿರೋಧಿಸಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಕಾರ್ಯಕರ್ತರು ಹಾಗೂ ರಾಜನ ಬಿಲಗುಲಿ ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್ ನಿಸರ್ಗ ಪ್ರಿಯ ಅವರಿಗೆ ಮನವಿ ಸಲ್ಲಿಸಿದರು
ಪಿರಿಯಾಪಟ್ಟಣ ತಾಲ್ಲೂಕಿನ ಗರಿಗುಡ್ಡ ಕಾವಲು ಗ್ರಾಮದ ಸರ್ವೆ ನಂಬರ್ 94ರ ಜಮೀನನ್ನು ಅರಣ್ಯ ಇಲಾಖೆ ಮೀಸಲು ಅರಣ್ಯವೆಂದು ಘೋಷಿಸಿರುವುದನ್ನು ವಿರೋಧಿಸಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಕಾರ್ಯಕರ್ತರು ಹಾಗೂ ರಾಜನ ಬಿಲಗುಲಿ ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್ ನಿಸರ್ಗ ಪ್ರಿಯ ಅವರಿಗೆ ಮನವಿ ಸಲ್ಲಿಸಿದರು   

ಪಿರಿಯಾಪಟ್ಟಣ: ತಾಲ್ಲೂಕಿನ ಗರಿಗುಡ್ಡ ಕಾವಲು ಗ್ರಾಮದ ಸರ್ವೆ ನಂಬರ್ 94ರ ಜಮೀನನ್ನು ಅರಣ್ಯ ಇಲಾಖೆಯು ಮೀಸಲು ಅರಣ್ಯ ಎಂದು ಘೋಷಿಸಿರುವುದನ್ನು ವಿರೋಧಿಸಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಕಾರ್ಯಕರ್ತರು ಹಾಗೂ ರಾಜನ ಬಿಲಗುಲಿ ಗ್ರಾಮಸ್ಥರು ತಾಲ್ಲೂಕು ಕಚೇರಿ ಮುಂಭಾಗ ಬುಧವಾರ ಪ್ರತಿಭಟನೆ ನಡೆಸಿದರು.

ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಜಿಲ್ಲಾಧ್ಯಕ್ಷ ಕಾಂತರಾಜ್ ಮಾತನಾಡಿ, ‘ಈ ಜಮೀನಿನಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸಮುದಾಯಕ್ಕೆ ಸೇರಿದ ರೈತರು ಸುಮಾರು 70 ವರ್ಷಗಳಿಂದ ವ್ಯವಸಾಯ ಮಾಡಿಕೊಂಡು ಬರುತ್ತಿದ್ದಾರೆ. ಈ ಜಮೀನುಗಳಿಗೆ ಸರ್ಕಾರವು ಈಗಾಗಲೇ ಸಾಗುವಳಿ ನೀಡಿದೆ. ಅಂದಾಜು 300 ಕುಟುಂಬಗಳು ಜೀವನ ನಿರ್ವಹಿಸುತ್ತಿವೆ’ ಎಂದರು.

‘ಇದರ ಆಧಾರದ ಮೇಲೆ ಎಲ್ಲ ರೈತರು ಬ್ಯಾಂಕುಗಳಲ್ಲಿ ಸಾಲ ಪಡೆದು ಜೀವನ ನಡೆಸುತ್ತಿದ್ದಾರೆ. ಆದರೆ ಇತ್ತೀಚೆಗೆ ಅರಣ್ಯ ಇಲಾಖೆಯವರು ಗರಿಗುಡ್ಡ ಕಾವಲು ಗ್ರಾಮವನ್ನು ಮೀಸಲು ಅರಣ್ಯ ಪ್ರದೇಶವೆಂದು ಘೋಷಣೆ ಮಾಡಿ ಎಲ್ಲ ರೈತರಿಗೆ ನೋಟಿಸ್ ನೀಡಿ ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದು ಸರ್ಕಾರವು ಈ ಆದೇಶವನ್ನು ಹಿಂಪಡೆದು ರೈತರಿಗೆ ಅನುಕೂಲ ಮಾಡಿಕೊಡಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಸಿದರು.

ADVERTISEMENT

ತಹಶೀಲ್ದಾರ್ ನಿಸರ್ಗ ಪ್ರಿಯ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಶಂಕರ್, ಗ್ರಾಮ ಪಂಚಾಯತಿ ಉಪಾಧ್ಯಕ್ಷ ಜಗದೀಶ್ ನಾಯಕ, ಗ್ರಾಮಸ್ಥರಾದ ಶಿವಣ್ಣ, ಮಹದೇವ್, ಕರಿಯಯ್ಯ, ತಮ್ಮಯ್ಯ ನಾಯಕ, ರಾಜು ಶೆಟ್ಟಿ, ಚೆನ್ನಯ್ಯ ಹಾಗೂ ಗ್ರಾಮಸ್ಥರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.