ಪಿರಿಯಾಪಟ್ಟಣ: ‘ರಾಗಿ ಖರೀದಿ ಕೇಂದ್ರದಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ರಾಗಿ ಬೆಳೆದ ರೈತರ ಖಾತೆಗೆ ಸರಿಯಾಗಿ ಹಣ ಜಮಾವಾಗುವಂತೆ ಕ್ರಮವಹಿಸಿ’ ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಪ್ರಗತಿಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
‘ರಾಗಿ ಖರೀದಿ ವ್ಯವಹಾರದಲ್ಲಿ ನಿಜವಾದ ರೈತರಿಗೆ ಈ ಸವಲತ್ತು ಸಿಗಬೇಕು. ಆದರೆ ಮಧ್ಯವರ್ತಿಗಳ ಹಾವಳಿಯಿಂದ ವ್ಯಾಪಾರಸ್ಥರಿಗೆ ಬೆಂಬಲ ಬೆಲೆಯ ಹಣ ದೊರಕುತ್ತಿದೆ. ಇದಕ್ಕೆ ಕಡಿವಾಣ ಹಾಕಿ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರವಿ ಅವರಿಗೆ ಸೂಚಿಸಿದರು. ಕೃಷಿ ಇಲಾಖೆಯ ಜೆಡಿ ಉತ್ತರಿಸಿ, ‘ರೈತರು ಮಧ್ಯವರ್ತಿಗಳಿಗೆ ತಮ್ಮ ಖಾತೆಗಳ ವಿವರ ಮತ್ತು ಆಧಾರ್ ಕಾರ್ಡ್ ನೀಡಬಾರದು. ಹಾಗಾದಾಗ ರೈತರಿಗೆ ನೇರವಾಗಿ ಹಣ ತಲುಪುತ್ತದೆ . ರೈತರ ಸಹಕಾರ ಮುಖ್ಯ’ ಎಂದು ಸಮಜಾಯಿಶಿ ನೀಡಿದರು.
ಪುರುಷರಿಗೆ ಸೀಟು ಮೀಸಲು: ಕೆಎಸ್ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯ ಪ್ರಯಾಣಿಸುವುದರಿಂದ ಪುರುಷರಿಗೆ ಬಸ್‌ಗಳಲ್ಲಿ ಸೀಟು ಸಿಗದೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಪುರುಷರಿಗೆ ಕನಿಷ್ಠ ಶೇ 60ರಷ್ಟು ಸೀಟುಗಳನ್ನು ಮೀಸಲಿರಿಸಿ ಎಂದು ಪುರುಷ ಪ್ರಯಾಣಿಕರು ಮನವಿ ಮಾಡಿಕೊಂಡಿದ್ದು , ಇದರ ಬಗ್ಗೆ ಚರ್ಚಿಸಿ 60: 40 ರ ಅನುಪಾತದಲ್ಲಿ ಆಸನದ ವ್ಯವಸ್ಥೆ ಮಾಡಿ ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ಬಳಿ ಮಾತನಾಡುತ್ತೇನೆ’ ಎಂದು ಕೆಎಸ್‌ಆರ್‌ಟಿಸಿ ವಿಭಾಗಿಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ ಅವರಿಗೆ ಸೂಚಿಸಿದರು.
ಸಮನ್ವಯ ಅಗತ್ಯ: ತಾಲ್ಲೂಕಿನ ಹಾಡಿಗಳಿಗೆ ವಿದ್ಯುತ್ ಸಂಪರ್ಕ ನೀಡುವ ಸಂಬಂದ 21 ಹಾಡಿಗಳಲ್ಲಿ ಕೆಲಸ ಆರಂಭಿಸಿದ್ದು, ಕೆಲವೆಡೆಗಳಲ್ಲಿ ಅರಣ್ಯ ಇಲಾಖೆ ತೊಂದರೆ ನೀಡುತ್ತಿದೆ. ಇದು ಸರಿಯಲ್ಲ ಹಾಡಿಜನರಿಗೆ ಸೌಕರ್ಯ ಕಲ್ಪಿಸುವ ಸರ್ಕಾರದ ನಡೆಗೆ ಸಹಕಾರಿಯಾಗಿ ವರ್ತಿಸಬೇಕು, ಗಿರಿಜನರಿಗೆ ಸೌಲಭ್ಯ ಒದಗಿಸಲು ಇಲಾಖೆಗಳು ಸಮನ್ವಯದಲ್ಲಿ ಕೆಲಸ ಮಾಡಬೇಕು’ ಎಂದು ಸೂಚಿಸಿದರು.
‘ನಾಗರಹೊಳೆ ಬಫರ್ ಜೋನ್‌ನಲ್ಲಿ ಬರುವ ಗ್ರಾಮಗಳು ಮತ್ತು ಒತ್ತುವರಿಯಾಗಿರುವ ಪ್ರದೇಶಗಳಲ್ಲಿ ಕರಡಿ ಬೊಕ್ಕೆ ಗ್ರಾಮದಲ್ಲಿ ಅನಧಿಕೃತ ಮನೆಗಳಿಗೆ ಅವುಗಳಿಗೆ ಸೌಲಭ್ಯ ಕಲ್ಪಿಸಲು ಅರಣ್ಯ ಇಲಾಖೆಯ ಕಾಯ್ದೆ ಪ್ರಕಾರ ಕಾನೂನಿನಲ್ಲಿ ಅವಕಾಶವಿಲ್ಲ ’ಎಂದು ಡಿಸಿಎಫ್ ಎಂ. ಡಿ.ಫಯಾಜುದೀನ್ ಸಭೆಗೆ ತಿಳಿಸಿದರು. ಇದು ಒತ್ತುವರಿ ಪ್ರದೇಶ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು. ಜಿಲ್ಲಾಧಿಕಾರಿ ಲಕ್ಷ್ಮಿಕಾಂತರೆಡ್ಡಿ ಮಾತನಾಡಿ, ಈಗಾಗಲೇ ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ನಡೆದು ಕ್ರಮವಹಿಸಿದೆ. ಕರಡಿಬೊಕ್ಕೆ ಹಾಡಿಯ ಬಗ್ಗೆ ಸಭೆ ಕರೆದು ಸಮಸ್ಯೆಯನ್ನು ಸ್ಥಳೀಯರೊಂದಿಗೆ ಚರ್ಚಿಸಿ ತೀರ್ಮಾನಿಸಬೇಕು ಎಂದು ಸಚಿವರು ಉಪ ವಿಭಾಗಾಧಿಕಾರಿ ವಿಜಯ್‌ಕುಮಾರ್ ಅವರಿಗೆ ತಿಳಿಸಿದರು.
ಇಇಗೆ ತರಾಟೆ: ಮಾಲಂಗಿ ಗೋಮಾಳದಲ್ಲಿ ಸೇತುವೆ ಕುಸಿದು 2 ವರ್ಷ ಕಳೆದಿದ್ದರೂ ಅದರ ಕಾಮಗಾರಿ ಆಗಿಲ್ಲ. ನೀವು ಬಂದು ವರ್ಷ ಕಳೆದರು ತಾಲ್ಲೂಕಿನ ಕೆಲಸಗಳ ಕಡೆ ಗಮನಕೊಡುತ್ತಿಲ್ಲ’ ಎಂದು ಲೊಕೋಪಯೋಗಿ ಇಇ ಮುತ್ತುರಾಜ್ ಅವರನ್ನು ಸಚಿವರು ತರಾಟೆಗೆ ತೆಗೆದುಕೊಂಡರು. ಎಲ್ಲಾ ಇಲಾಖೆ ಅಧಿಕಾರಿಗಳು ಬಂದು ಏನು ಕೆಲಸ ಆಗಬೇಕು ಎನ್ನುತ್ತಿದ್ದಾರೆ ನೀವು ಮಾತ್ರ ನಿರ್ಲಕ್ಷ್ಯ ವಹಿಸುತ್ತಿದ್ದೀರಾ. ಕೆಲಸ ತ್ವರಿತಗೊಳಿಸಲು ಸೂಚಿಸಿದರು. ಪಿರಿಯಾಪಟ್ಟಣ ಮಸಣೀಕಮ್ಮ ದೇವಾಲಯದ ₹ 9 ಕೋಟಿ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಎಇಇ ವೆಂಕಟೇಶ್ ಸಭೆಗೆ ಮಾಹಿತಿ ನೀಡಿದರು.
700 ಮಂದಿಗೆ ನಿವೇಶನ: ತಾಲ್ಲೂಕಿನಲ್ಲಿ 700 ಮಂದಿ ನಿವೇಶನ ರಹಿತರಿಗೆ ನಿವೇಶನ ನೀಡಲು ಗ್ರಾಮ ಠಾಣ ಜಾಗಗಳ ಒತ್ತುವರಿ ತೆರವು ಮಾಡಲಾಗುತ್ತಿದೆ. ಎಂದು ಇಒ ಸುನೀಲ್ ಕುಮಾರ್ ಸಭೆಗೆ ಮಾಹಿತಿ ನೀಡಿದರು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಚಂದ್ರಶೇಖರ್ ಮಾತನಾಡಿ, ಪರಿಶಿಷ್ಟ ಜಾತಿಯ ಜನರ ಕಾಲೊನಿ ಅಭಿವೃದ್ಧಿಗೆ ಡಿಜಿಕೊಪ್ಪಲು, ತಿಮಕಾಪುರ, ಮತ್ತು ಕೊತ್ತವಳ್ಳಿ ಕೊಪ್ಪಲು ಗ್ರಾಮಗಳಿಗೆ ಹಣ ಮಂಜೂರು ಆಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯಿತಿಯಿಂದ 108 ದೇವಾಲಯಗಳ ಅಭಿವೃದ್ಧಿ ಕೆಲಸ ನಡೆಯುತ್ತಿದ್ದು ಶೇ 55ರಷ್ಟು ಕೆಲಸಗಳು ಮುಗಿದಿವೆ. ವಿವೇಕ ಶಾಲೆಯ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ ಎಂದು ಜಿಲ್ಲಾ ಪಂಚಾಯಿತಿ ಎಇಇ ಮಂಜುನಾಥ್ ಸಭೆಗೆ ತಿಳಿಸಿದರು. ಅಬಕಾರಿ ನಿರೀಕ್ಷಕ ವೆಂಕಟೇಶ್ ಮಳೆ ಜಾಸ್ತಿ ಇರುವುದರಿಂದ ಮದ್ಯಮಾರಾಟ ನಿರೀಕ್ಷಿತ ಗುರಿ ತಲುಪಿಲ್ಲ ಎಂದು ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯುಕೇಶ್‌ಕುಮಾರ್, ಉಪ ಕಾರ್ಯದರ್ಶಿ ಭೀಮಪ್ಪ, ಉಪವಿಭಾಗಾಧಿಕಾರಿ ವಿಜಯ್‌ಕುಮಾರ್, ಅಧಿಕಾರೇತರ ನಾಮನಿದೇಶಿತ ಸದಸ್ಯರಾದದ ನಿತಿನ್‌ವೆಂಕಟೇಶ್, ಲಕ್ಷ್ಮಿ ನಾರಾಯಣ್, ಶೇಖರ್, ಮಹದೇವ್, ಶಫೀಅಹಮದ್, ನಿರೂಪ, ತಹಶೀಲ್ದಾರ್ ನಿಸರ್ಗಪ್ರಿಯ, ಇಒ ಸುನೀಲ್‌ಕುಮಾರ್, ಅಧಿಕಾರಿಗಳು ಹಾಜರಿದ್ದರು.
‘ಗಿರಿಜನರಿಗೆ ಸೌಲಭ್ಯ ಒದಗಿಸಲು ಇಲಾಖೆಗಳು ಸಮನ್ವಯ ಸಾಧಿಸಿ’ ‘ಮಳೆ ಜಾಸ್ತಿ ; ಮದ್ಯಮಾರಾಟ ನಿರೀಕ್ಷಿತ ಗುರಿ ತಲುಪಿಲ್ಲ’ ‘ರೈತರು ಖಾತೆ, ಆಧಾರ್ ಕಾರ್ಡ್ ಮಧ್ಯವರ್ತಿಗಳಿಗೆ ನೀಡದಿರಿ’
‘ಶಿಕ್ಷಕರಲ್ಲಿ ಜ್ಞಾನ ತಂತ್ರಜ್ಞಾನ ವೃದ್ಧಿ ಇಲ್ಲ’
‘ಶಿಕ್ಷಕರು ನಿರಂತರ ಅಧ್ಯಯನ ನಡೆಸಿ ಆಧುನಿಕ ತಂತ್ರಜ್ಞಾನ ಬಳಸಿ ಬೋಧನೆ ಮಾಡದ ಕಾರಣ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕುಸಿತ ಕಾಣುತ್ತಿದ್ದು ; ಇದು ಇನ್ನೂ ಹೆಚ್ಚಲಿದೆ’ ಎಂದು ಸಚಿವ ಕೆ.ವೆಂಕಟೇಶ್ ಅಸಮಾಧಾನ ವ್ಯಕ್ತಪಡಿಸಿದರು. ‘ತಾಲ್ಲೂಕಿನ ಸರ್ಕಾರಿ ಶಾಲೆಗಳಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ 1600 ವಿದ್ಯಾರ್ಥಿಗಳು ಕಡಿಮೆ ದಾಖಲಾಗಿದ್ದಾರೆ’ ಎಂದು ಬಿಇಒ ರವಿಪ್ರಸನ್ನ ಸಭೆಗೆ ಮಾಹಿತಿ ನೀಡಿದರು. ‘ಇದಕ್ಕೆ ಕಾರಣವೇನು’ ಎಂದು ಸಚಿವರು ಪ್ರಶ್ನೆ ಮಾಡಿದರು. ಮಾಹಿತಿ ನೀಡಿದ ಬಿಇಒ ಪೋಷಕರ ಖಾಸಗಿ ವ್ಯಾಮೋಹ ಪೋಷಕರು ನಗರ ಪ್ರದೇಶಕ್ಕೆ ಗುಳೆ ಹೋಗುತ್ತಿರುವುದು ಸೇರಿದಂತೆ ಕೆಲವು ಕಾರಣ ತಿಳಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಚಿವರು ‘ನಿಮ್ಮ ಶಿಕ್ಷಕರು ಗುಣಮಟ್ಟದ ಪಾಠ ಮಾಡುತ್ತಿಲ್ಲ ಇದೇ ಪ್ರಮುಖ ಕಾರಣ. ಇಂಗ್ಲಿಷ್ ಕಲಿಸಬೇಡಿ ಎಂದು ಯಾರೂ ಹೇಳಿಲ್ಲ. ಇಂಗ್ಲಿಷ್ ಕಲಿಸಿದರೆ ಖಂಡಿತ ಮಕ್ಕಳು ನಿಮ್ಮಲ್ಲಿಯೇ ಉಳಿಯುತ್ತಾರೆ’ ಎಂದರು.
ವೇಗ ಹೆಚ್ಚಿಸಿ: ಡಿಸಿ
‘ಕೆಲವು ಸಮಸ್ಯೆಗಳು ಪುನರಾವರ್ತನೆಯಾಗುತ್ತಿದೆ. ಇಂಥ ಬಾಕಿ ಕಾಮಗಾರಿಗಳು ಮತ್ತು ಯೋಜನೆಗಳನ್ನು ಇಲಾಖೆ ಅಧಿಖಾರಿಗಳು ಶೀಘ್ರದಲ್ಲಿ ಮುಗಿಸಬೇಕು. ಮುಂದಿನ ಕೆಡಿಪಿ ಸಭೆಯಲ್ಲಿ ಪುನರಾವರ್ತನೆ ಆಗದಂತೆ ಕ್ರಮವಹಿಸಬೇಕು’ ಎಂದು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ ಸಭೆಗೆ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.