ಪಿರಿಯಾಪಟ್ಟಣ: ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸಿದರೆ ದಂಡ ಮತ್ತು ಜೈಲುಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಎಂ. ಆರ್.ಯೋಗೇಶ್ ತಿಳಿಸಿದರು.
ಪಟ್ಟಣದ ಬಾಲಕಿಯರ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದಲ್ಲಿ ಸೋಮವಾರ ನಡೆದ ಮಕ್ಕಳ ಹಕ್ಕುಗಳ ಬಗ್ಗೆ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ರೋಟರಿ ಸಂಸ್ಥೆ ಆಶ್ರಯದಲ್ಲಿ ಆಯೋಜಿಸಲಾಗಿತ್ತು.
‘6 ರಿಂದ 14 ವರ್ಷದಲ್ಲಿ ಕಡ್ಡಾಯ ಶಿಕ್ಷಣ ಕಲ್ಪಿಸಬೇಕು, ಬಾಲ್ಯವಿವಾಹ, ಲೈಂಗಿಕ ಕಿರುಕುಳ, ಶೋಷಣೆಗೆ ಒಳಪಡಿಸುವುದು, ಆರ್ಥಿಕ ಉದ್ದೇಶಗಳಿಗಾಗಿ ಬಾಲಕರನ್ನು ದುಡಿಸಿಕೊಳ್ಳವುದು, ಅಕ್ರಮ ಮಕ್ಕಳ ಸಾಗಣೆ ಕಾನೂನು ವಿರೋಧಿ ಕೃತ್ಯವಾಗಿದ್ದು , ರಕ್ಷಣೆ ಪಡೆಯುವ ಹಕ್ಕು ಮಕ್ಕಳಿಗಿದೆ’ ಎಂದು ತಿಳಿಸಿದರು.
ಸರ್ಕಾರಿ ಸಹಾಯಕ ಅಭಿಯೋಜಕ ಶ್ರೀನಾಥ್ ಆರ್.ಕೆ. ಮಾತನಾಡಿ, ಖಾಸಗಿ ಕಂಪನಿ, ಸಂಸ್ಥೆಗಳಲ್ಲಿ ಮಕ್ಕಳನ್ನು ಕೆಲಸಕ್ಕೆ ನೇಮಕ ಮಾಡಿದವರನ್ನು ಶಿಕ್ಷೆಗೆ ಗುರಿಪಡಿಸಲಾಗುತ್ತದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಧನಪಾಲ್ ಮಾತನಾಡಿ, ಮಕ್ಕಳ ಸಾಂವಿಧಾನಿಕ ಹಕ್ಕುಗಳು ತಾರತಮ್ಯವಿಲ್ಲದೆ ಸಿಗುವಂತಾಗಬೇಕು,ಉತ್ತಮ ಆರೋಗ್ಯ , ಶಿಕ್ಷಣ ದೊರೆಯಬೇಕು ಎಂದರು.
ರೋಟರಿ ಅಧ್ಯಕ್ಷ ಎಂ.ಎಂ. ರಾಜೇಗೌಡ ಮಾತನಾಡಿದರು. ಉಪ ಪ್ರಾಂಶುಪಾಲ ಮಹದೇವ್, ಬರೋಡ ಬ್ಯಾಂಕ್‌ನ ವ್ಯವಸ್ಥಾಪಕ ಪ್ರಶಾಂತ್, ಪ್ರಮುಖರಾದ ಬಿ. ವಿ. ಜವರೇಗೌಡ, ಅಂಬಲಾರೆ ಬಸವೇಗೌಡ, ರೋಟರಿ ಸದಸ್ಯರಾದ ಬಿ.ಎಸ್.ಹರೀಶ್ ಗೌಡ, ಪ್ರಕಾಶ್, ಶಿಕ್ಷಕರಾದ ಶಿವಣ್ಣ, ಕುಮಾರ್, ಪುಷ್ಪ, ವಿನಯ್ ಶೇಖರ್, ಪ್ರಕಾಶ್, ಮಹದೇವ್ , ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.