ADVERTISEMENT

ಪ್ರವಾಹಪೀಡಿತ ಗ್ರಾಮಗಳ ಶಾಶ್ವತ ಸ್ಥಳಾಂತರವಿಲ್ಲ: ಮುಖ್ಯಮಂತ್ರಿ ಬೊಮ್ಮಾಯಿ

ಎತ್ತರದ ಪ್ರದೇಶದಲ್ಲಿ ಪುನರ್ವಸತಿಗೆ ಕ್ರಮ: ಸಮೀಕ್ಷೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2022, 12:57 IST
Last Updated 6 ಜುಲೈ 2022, 12:57 IST
ಸಿಎಂ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ   

ಮೈಸೂರು: ‘ಪ್ರವಾಹಪೀಡಿತ ಗ್ರಾಮಗಳ ಶಾಶ್ವತ ಸ್ಥಳಾಂತರದ ಪ್ರಸ್ತಾವವಿಲ್ಲ. ಸಂತ್ರಸ್ತರಿಗೆ ಸಮೀಪದ ಎತ್ತರದ ಪ್ರದೇಶಗಳಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಬುಧವಾರ ಮಾತನಾಡಿದ ಅವರು, ‘ಉತ್ತರ ಕರ್ನಾಟಕದಲ್ಲಿ 2009ರಲ್ಲಿ ಪ್ರವಾಹ ಉಂಟಾದಾಗ ಬಿ.ಎಸ್. ಯಡಿಯೂರಪ್ಪ ಸರ್ಕಾರದಲ್ಲಿ 60 ಹಳ್ಳಿಗಳನ್ನು ಸ್ಥಳಾಂತರಿಸಲಾಗಿತ್ತು. ಮನೆಗಳನ್ನೂ ಕಟ್ಟಿಕೊಡಲಾಗಿತ್ತು. ಆದರೆ, ಪ್ರವಾಹ ಇಳಿಯುತ್ತಿದ್ದಂತೆಯೇ ಜನರು ಮತ್ತೆ ತಮ್ಮ ಊರುಗಳಿಗೇ ಮರಳಿದರು. ಹೀಗಾಗಿ, ರಾಜ್ಯದಾದ್ಯಂತ ಪ್ರವಾಹಬಾಧಿತ ಸ್ಥಳಗಳನ್ನು ಗುರುತಿಸಿ ಸುತ್ತಮುತ್ತಲಿನ ಎತ್ತರದ ಜಾಗದಲ್ಲಿ ಪುನರ್ವಸತಿ ಕೇಂದ್ರ ಸ್ಥಾಪಿಸಿ, ಕೂಡಲೇ ಸ್ಥಳಾಂತರಕ್ಕೆ ಕ್ರಮ ವಹಿಸಲಾಗುತ್ತದೆ. ಇದಕ್ಕಾಗಿ ಸಮಗ್ರ ಸಮೀಕ್ಷೆ ನಡೆಸುವಂತೆ ಸೂಚಿಸಿದ್ದೇನೆ’ ಎಂದು ಹೇಳಿದರು.

‘ಮುಂಗಾರು ಚುರುಕುಗೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ. ಕಳೆದ ಬಾರಿ ಎಲ್ಲೆಲ್ಲಿ ಭೂಕುಸಿತ ಉಂಟಾಗಿತ್ತೋ ಆ ಸ್ಥಳಗಳಲ್ಲಿ ಜನರ ಸ್ಥಳಾಂತರಕ್ಕೆ ತಿಳಿಸಿದ್ದೇನೆ. ಸಂಪರ್ಕ ಕಡಿತಗೊಳ್ಳದಂತೆ ನೋಡಿಕೊಳ್ಳಲು ಸೂಚಿಸಿದ್ದೇನೆ. ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ. ತುರ್ತು ಬಳಕೆಗಾಗಿ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ತಲಾ ₹ 10 ಕೋಟಿ ಹಣವಿದೆ. ಅದನ್ನು ಬಳಸುವಂತೆ ಸೂಚಿಸಲಾಗಿದೆ. ಅವಶ್ಯವಿದ್ದಲ್ಲಿ ಹೆಚ್ಚಿನ ಹಣ ಬಿಡುಗಡೆ ಮಾಡಲಾಗುವುದು’ ಎಂದರು.

ADVERTISEMENT

ಕಡಲ್ಕೊರೆತ ತಡೆಗೆ ಕ್ರಮ: ‘ಉತ್ತರಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಲ್ಲಿ ಜಾಸ್ತಿ ಮಳೆಯಾಗಿದೆ. ಕಡಲ್ಕೊರೆತ ಜಾಸ್ತಿಯಾಗಿದೆ. ಮನೆಗಳು ಹಾನಿಯಾಗಿದ್ದರೆ ಸಂತ್ರಸ್ತರ ವಾಸ್ತವ್ಯಕ್ಕೆ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಕಡಲ್ಕೊರೆತ ತಡೆಯಲು ಶಾಶ್ವತ ಪರಿಹಾರಕ್ಕಾಗಿ ಹೊಸ ತಂತ್ರಜ್ಞಾನ ಬಳಕೆಗೆ ಕೆಲವರು ಮುಂದೆ ಬಂದಿದ್ದಾರೆ. ಪ್ರಾಯೋಗಿಕವಾಗಿ ಅದನ್ನು ಬಳಸಲಾಗುವುದು’ ಎಂದು ಹೇಳಿದರು.

‘ಮೈಸೂರಿನ‌ ಎನ್‌ಡಿಆರ್‌ಎಫ್ ತಂಡವನ್ನು ಕೊಡಗಿಗೆ ನಿಯೋಜಿಸಲಾಗಿದೆ’ ಎಂದರು.

‘ಬೆಂಗಳೂರಿನಲ್ಲಿ ಮಳೆ ನೀರು ನಿರ್ವಹಣೆಗೆ ಕ್ರಮ ವಹಿಸಲಾಗಿದೆ. ಅಲ್ಲಿ ಕೆರೆ ಅಂಗಳದಲ್ಲಿ ಮತ್ತು ಕೆರೆಯ ಮೇಲೆಯೇ ಮನೆ ಕಟ್ಟಿದ್ದಾರೆ. ನೀರು ಸರಾಗವಾಗಿ ಹರಿದು ಹೋಗುವಂತಾಗಲು ರಾಜಕಾಲುವೆ ದುರಸ್ತಿಗೆ ₹ 1,600 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ರಾಜಕಾಲುವೆ ಸರಿಪಡಿಸಿದರೆ ಬಹುತೇಕ ಸಮಸ್ಯೆಗಳು ಬಗೆಹರಿಯುತ್ತವೆ’ ಎಂದು ಪ್ರತಿಕ್ರಿಯಿಸಿದರು.

‘ಶಾಲಾ ಮಕ್ಕಳಿಗೆ ಶೂ, ಸಾಕ್ಸ್‌ ಮತ್ತು ಸೈಕಲ್‌ ಅನ್ನು ಈ ವರ್ಷವೇ ನೀಡಲಾಗುವುದು. ಸ್ವಲ್ಪ ವಿಳಂಬವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.