ADVERTISEMENT

ಸಂಚಾರ ವ್ಯವಸ್ಥೆ ಸುಧಾರಣೆಗೆ ‘ಸಿಎಸ್‌ಆರ್‌’ ಸಹಕಾರ

ಉದ್ಯಮಿಗಳ ಜತೆ ಸಭೆ, ಮಾತುಕತೆ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2020, 13:58 IST
Last Updated 8 ಜನವರಿ 2020, 13:58 IST
ಸಿ.ಬಿ.ರಿಷ್ಯಂತ್
ಸಿ.ಬಿ.ರಿಷ್ಯಂತ್   

ಮೈಸೂರು: ಜಿಲ್ಲೆಯ ನಗರ/ಪಟ್ಟಣದಲ್ಲಿ ಸಂಚಾರ ವ್ಯವಸ್ಥೆ ಸುಧಾರಣೆಗಾಗಿ ಉದ್ಯಮಿಗಳ ಸಹಕಾರ ಪಡೆಯಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ತಿಳಿಸಿದರು.

‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ಹೆರಾಲ್ಡ್‌’ ಆಯೋಜಿಸಿದ್ದ ‘ಫೋನ್‌ ಇನ್‌‘ನಲ್ಲಿ ಬೆಟ್ಟದಪುರದ ರಾಜೇಶ್‌ ನಾಯಕ, ಪಿರಿಯಾಪಟ್ಟಣದ ಹರ್ಷ, ತುಂಬಸೋಗೆಯ ಸತ್ಯ, ಕೆ.ಆರ್‌.ನಗರದ ಪ್ರಕಾಶ್‌, ಶರತ್‌ಕುಮಾರ್‌, ನಂಜನಗೂಡಿನ ಸುರೇಶ್‌ ಅವರ ಸಂಚಾರ ಸಮಸ್ಯೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ‘ಸಂಚಾರ ವ್ಯವಸ್ಥೆ ಸುಧಾರಣೆಗಾಗಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂದು ಹೇಳಿದರು.

‘ನಂಜನಗೂಡಿನಲ್ಲಿ ಗುರುವಾರ ಉದ್ಯಮಿಗಳ ಸಭೆ ಕರೆಯಲಾಗಿದೆ. ಸಂಚಾರ ವ್ಯವಸ್ಥೆ ಸುಧಾರಣೆ ನಿಟ್ಟಿನಲ್ಲಿ ಮೊದಲ ಹೆಜ್ಜೆಯಿದು. ಈ ಸಭೆಯಲ್ಲಿ ಸಿಎಸ್‌ಆರ್‌ ದೇಣಿಗೆಯ ಸಹಕಾರ ಕೋರುತ್ತೇವೆ. ಉದ್ಯಮಿಗಳಿಂದ ಸಹಕಾರ ಪಡೆದು, ಸುಗಮ ಸಂಚಾರ ವ್ಯವಸ್ಥೆಗಾಗಿ ಯೋಜನೆ ರೂಪಿಸಿಕೊಳ್ಳುತ್ತೇವೆ. ನೀವು ಸಭೆಗೆ ಬನ್ನಿ. ವೈಯಕ್ತಿಕವಾಗಿ ಭೇಟಿಯಾಗಿ ಎಲ್ಲೆಲ್ಲಿ ಸಂಚಾರದ ಸಮಸ್ಯೆಯಿದೆ ಎಂಬುದನ್ನು ತಿಳಿಸಿಕೊಡಿ’ ಎಂದು ರಿಷ್ಯಂತ್ ಕೋರಿದರು.

ADVERTISEMENT

ವರುಣಾದ ಪ್ರಶಾಂತ್, ಹುಣಸೂರಿನ ನಾಗರಾಜು ಅವರ ಕಳ್ಳತನಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ, ಇ–ಬೀಟ್‌ ವ್ಯವಸ್ಥೆಯ ‘ಸುಭಾಹು’ ಪರಿಚಯಿಸುವುದಾಗಿ ಹೇಳಿದರು.

ನಂಜನಗೂಡಿನ ಹಿಮ್ಮಾವು ಗ್ರಾಮದ ಹೆಸರು ಬಹಿರಂಗಪಡಿಸಲಿಚ್ಚಿಸದ ನಾಗರಿಕರೊಬ್ಬರು, ತಿ.ನರಸೀಪುರದ ಸೋಮಣ್ಣ ಮರಳು ದಂಧೆ ಬಗ್ಗೆ ಪ್ರಶ್ನಿಸಿದರು. ವರುಣಾದ ನಾಗರಿಕರು ಶಾಲಾ ಆವರಣದಲ್ಲೇ ಅಕ್ರಮ ಚಟುವಟಿಕೆ ನಡೆಯುತ್ತಿವೆ. ಪೊಲೀಸರು ಭಾಗಿಯಾಗುತ್ತಿದ್ದಾರೆ ಎಂದು ಮಾಹಿತಿ ನೀಡಿದರು. ಮೇಟಗಳ್ಳಿಯ ಫುಟ್‌ಪಾತ್ ಸಮಸ್ಯೆಯನ್ನು ಸ್ಥಳೀಯರೊಬ್ಬರು ಪೊಲೀಸ್ ವರಿಷ್ಠಾಧಿಕಾರಿ ಗಮನಕ್ಕೆ ತಂದರು.

ಮರಳು ದಂಧೆಗೆ ಕಡಿವಾಣ ಹಾಕಲು ನೂತನ ಕಾರ್ಯತಂತ್ರ ಅಳವಡಿಸಿಕೊಂಡಿದ್ದೇವೆ. ದಂಧೆಕೋರರ ಜತೆ ಕೈ ಜೋಡಿಸಿದ್ದರು ಎನ್ನಲಾದ ತಿ.ನರಸೀಪುರ ತಾಲ್ಲೂಕಿನ ವಿವಿಧ ಪೊಲೀಸ್ ಠಾಣೆಗಳ ಆರು ಸಿಬ್ಬಂದಿಯನ್ನು ಅಮಾನತುಗೊಳಿಸಿ, ಬೇರೆ ಠಾಣೆಗಳಿಗೆ ನಿಯೋಜಿಸಿದ್ದೇವೆ. ವರುಣಾ ಶಾಲಾ ಸಮಸ್ಯೆ ಬಗ್ಗೆ ಸ್ಥಳೀಯ ಪೊಲೀಸರಿಗೆ ಸೂಚಿಸುವೆ. ಫುಟ್‌ಪಾತ್ ಸಮಸ್ಯೆಯನ್ನು ಸ್ಥಳೀಯ ಆಡಳಿತ ಸಂಸ್ಥೆ ಜತೆ ಚರ್ಚಿಸಿ ಪರಿಹಾರ ಒದಗಿಸುವ ಯತ್ನ ನಡೆಸುವೆ ಎಂದು ರಿಷ್ಯಂತ್ ತಿಳಿಸಿದರು.

* ಸಿದ್ದರಾಜು, ಯಲಚಗೆರೆ: ಕೊಳವೆಬಾವಿಗಳ ಕೇಬಲ್ ಕಳ್ಳತನ ಹೆಚ್ಚಿದೆ ?

ನಿಮ್ಮ ಭಾಗದ ಪಿಎಸ್‌ಐ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿ, ಕಳ್ಳರನ್ನು ಬಂಧಿಸಲಾಗುವುದು.

* ಸುರೇಶ, ಮರೆಯನ ಹುಂಡಿ: ಇಸ್ಪೀಟ್‌ ಜೂಜಾಟ ಹೆಚ್ಚಿದೆ. ನಿಯಂತ್ರಿಸಿ ?

ಇಲವಾಲ ಪೊಲೀಸರು ಬೀಟ್‌ ನಡೆಸುತ್ತಿಲ್ಲವೇ ? ಸೂಕ್ತ ಕ್ರಮ ಜರುಗಿಸಲು ಸೂಚಿಸುವೆ.

* ಮಲ್ಲೇಶ್‌, ಬೆಟ್ಟದಪುರ: ಸರಕು ಸಾಗಣೆ ವಾಹನದಲ್ಲಿ ಜನರ ಪ್ರಯಾಣ, ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದಾರೆ. ಕ್ರಮ ಜರುಗಿಸಿ ?

ಹುಣಸೂರು, ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಹೆಚ್ಚಿದೆ. ವಾಹನ ಚಾಲಕರಿಗೆ ಎಚ್ಚರಿಕೆ ನೀಡಿದ್ದೇವೆ. ಉಲ್ಲಂಘಿಸಿದ 92 ಚಾಲಕರ ಚಾಲನಾ ಪರವಾನಗಿಯನ್ನೇ ರದ್ದುಗೊಳಿಸಿದ್ದೇವೆ.

* ಸುರೇಂದ್ರ, ನಂಜನಗೂಡು: ಬಿಳಿಗೆರೆ ಪಿಎಸ್‌ಐ ಕಾರ್ಯವೈಖರಿ ಸರಿಯಿಲ್ಲ ?

ನಿರ್ದಿಷ್ಟ ಪ್ರಕರಣವೊಂದರ ಮಾಹಿತಿ ಕೊಡಿ. ಕ್ರಮ ಜರುಗಿಸೋಣ.

* ಮಂಜುನಾಥ್, ಸಿದ್ದರಾಮನಹುಂಡಿ: ಕ್ರಿಕೆಟ್‌ ಬೆಟ್ಟಿಂಗ್ ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳಲ್ಲೂ ವ್ಯಾಪಕವಾಗಿದೆ ?

ಬೆಟ್ಟಿಂಗ್ ಜಾಲದ ಬಗ್ಗೆ ಮಾಹಿತಿ ಕೊಡಿ. ಬುಕ್ಕಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವೆ.

*ಹನುಮಂತರಾಯಪ್ಪ, ಹಳ್ಳಿ ಬೋಗಾದಿ: ಪದೇ ಪದೇ ರಸ್ತೆ ಅಗೆದು ಸಮಸ್ಯೆ ಸೃಷ್ಟಿಸಲಾಗುತ್ತಿದೆ ?

ಸಂಬಂಧಿಸಿದ ಸ್ಥಳೀಯ ಆಡಳಿತಕ್ಕೆ ಮಾಹಿತಿ ಕೊಟ್ಟು, ರಸ್ತೆ ಸರಿಪಡಿಸಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.