ಮೈಸೂರು: ಇಲ್ಲಿನ ಯಾದವಗಿರಿ ನಿವಾಸಿ, ಫ್ರಾನ್ಸ್ ಮೂಲದ ಸಂಸ್ಕೃತ ಪಂಡಿತ ಪಿಯರ್ ಸಿಲ್ವನ್ ಫಿಲಿಯೋಜಾ (89) ಫ್ರಾನ್ಸ್‌ನ ರಾಜಧಾನಿ ಪ್ಯಾರಿಸ್‌ನಲ್ಲಿ ಶನಿವಾರ ನಿಧನರಾದರು.
ವಯೋಸಹಜ ಅನಾರೋಗ್ಯದಿಂದ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಅವರನ್ನು ಈಚೆಗೆ ಏರ್‌ಲಿಫ್ಟ್ ಮೂಲಕ ಸ್ಥಳಾಂತರಿಸಿ ಪ್ಯಾರಿಸ್‌ನ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅವರಿಗೆ ಪತ್ನಿ, ಧಾರವಾಡದ ಇತಿಹಾಸ ತಜ್ಞೆ ವಸುಂಧರಾ ಕವಲಿ ಫಿಲಿಯೋಜಾ, ಇಬ್ಬರು ಪುತ್ರಿಯರು ಇದ್ದಾರೆ. ಪ್ಯಾರಿಸ್‌ನಲ್ಲೇ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಪಿಯರ್ ಅವರ ತಂದೆ ಜಾನ್ ಫಿಲಿಯೋಜಾ ಸಹ ಸಂಸ್ಕೃತ ವಿದ್ವಾಂಸರು. ತಂದೆ ಮಾರ್ಗದರ್ಶನದಲ್ಲಿ ಐದು ದಶಕಗಳ ಕಾಲ ಸಂಸ್ಕೃತ ವ್ಯಾಕರಣ ಮತ್ತು ಶೈವಾಗಮವನ್ನು ಅಧ್ಯಯನ ಮಾಡಿದ್ದ ಅವರು, ಹಂಪಿ, ಬಾದಾಮಿ ಚಾಲುಕ್ಯರು, ಕಲ್ಯಾಣದ ಚಾಲುಕ್ಯರ ದೇವಾಲಯಗಳ ಬಗ್ಗೆ ‘ಹಂಪಿ ಸೇಕ್ರೆಡ್ ಇಂಡಿಯಾ, ಗ್ಲೋರಿಯಸ್ ಇಂಡಿಯಾ’ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದರು. ಸಂಸ್ಕೃತ, ಫ್ರೆಂಚ್ ಹಾಗೂ ಇಂಗ್ಲಿಷ್‌ನಲ್ಲಿ ಕೃತಿಗಳನ್ನು ಬರೆದಿದ್ದರು. ಜೀವನದ ಬಹುಕಾಲವನ್ನು ಭಾರತದಲ್ಲೇ ಕಳೆದಿದ್ದರು.
2024ರ ಜನವರಿಯಲ್ಲಿ ಕೇಂದ್ರ ಸರ್ಕಾರದ ‘ಪದ್ಮಶ್ರೀ’ ಪ್ರಶಸ್ತಿಗೆ ಭಾಜನರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.