ADVERTISEMENT

‘ಕೋವಿಡ್‌ ಪೀಡಿತರ ಸಾವಿನ ವಿರುದ್ಧ ಪಿಐಎಲ್– ಬಡಗಲಪುರ ನಾಗೇಂದ್ರ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2021, 13:51 IST
Last Updated 23 ಏಪ್ರಿಲ್ 2021, 13:51 IST
ಬಡಗಲಪುರ ನಾಗೇಂದ್ರ
ಬಡಗಲಪುರ ನಾಗೇಂದ್ರ   

ಮೈಸೂರು: ಕೋವಿಡ್‌ ಪೀಡಿತರ ಸಾವಿನ ವಿರುದ್ಧ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

ಮನುಷ್ಯರು ಮಾತ್ರವಲ್ಲ, ಪ್ರಾಣಿ, ಪಕ್ಷಿಗಳು, ನೆಲ, ಜಲ ಸೇರಿದಂತೆ ಎಲ್ಲವನ್ನು ಸಂರಕ್ಷಿಸುವ ಹೊಣೆಗಾರಿಕೆ ಪ್ರಭುತ್ವದ ಮೇಲಿದೆ. ಹಾಗಾಗಿ, ಕೋವಿಡ್‌ಪೀಡಿತರ ಸಾವಿನ ವಿರುದ್ಧ ಪ್ರಧಾನಮಂತ್ರಿ, ಮುಖ್ಯಮಂತ್ರಿ ಹಾಗೂ ಅಧಿಕಾರಿಗಳನ್ನು ಪಾರ್ಟಿ ಮಾಡಿ ದಾವೆ ಹೂಡಲಾಗುವುದು ಎಂದು ಅವರು ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕೋವಿಡ್‌ನಿಂದ ಮೃತಪಡುವವರನ್ನು ನೋಡಿದರೆ ದೇಶದಲ್ಲಿ ಆಡಳಿತವಿದೆಯೇ? ಆಡಳಿತವಿದ್ದರೆ ಅದನ್ನು ಮನುಷ್ಯರು ನಡೆಸುತ್ತಿದ್ದಾರೆಯೇ ಎಂಬ ಅನುಮಾನಗಳು ಮೂಡುತ್ತವೆ. ಈ ದೇಶದ ಆಡಳಿತಕ್ಕೆ ಕೊರೊನಾ ಸೋಂಕಿತರ ಜೀವ ಉಳಿಸಲು ಸಾಧ್ಯವಿಲ್ಲ ಎಂಬುದು ಈಗಾಗಲೇ ಮನವರಿಕೆಯಾಗಿದೆ. ಕನಿಷ್ಠ ಅವರ ಶವಸಂಸ್ಕಾರವನ್ನಾದರೂ ಗೌರವಯುತವಾಗಿ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ADVERTISEMENT

ಖಾಲಿ ಇರುವ ಅಪಾರ್ಟ್‌ಮೆಂಟ್‌ಗಳನ್ನು, ಸರ್ಕಾರಿ ಜಾಗವನ್ನು ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಬಳಕೆ ಮಾಡಿಕೊಳ್ಳಬೇಕು. ಸರ್ಕಾರ ಈ ಕೂಡಲೇ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಿ ರೋಗಿಗಳ ಜೀವ ಉಳಿಸಲು ಸಮರೋಪಾದಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

‘ಪಿಎಂ ಕೇರ್ ನಿಧಿ’ಗೆ ಹರಿದು ಬಂದಿರುವ ಹಣ ಎಷ್ಟು, ಅದನ್ನು ರಾಜ್ಯಗಳಿಗೆ ಎಷ್ಟೆಷ್ಟು ಹಂಚಲಾಗಿದೆ ಎಂಬ ಮಾಹಿತಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಮುಂದಿನ ‘ಮನ್‌ ಕಿ ಬಾತ್‌’ ನಲ್ಲಿ ತಿಳಿಸಬೇಕು. ಎಲ್ಲರಿಗೂ ಉಚಿತವಾಗಿ ಕೊರೊನಾ ಲಸಿಕೆ ಹಾಕಬೇಕು, ರೈತರು ಸೇರಿದಂತೆ ನಿತ್ಯ ದುಡಿದು ಬದುಕುವ ಎಲ್ಲ ಕುಟುಂಬದವರಿಗೂ ಕನಿಷ್ಠ ಮಾಸಿಕ ₹ 10 ಸಾವಿರ ಹಣ ನೀಡಬೇಕು, ದರ ಕುಸಿದಿರುವ ಎಲ್ಲ ತರಕಾರಿಯನ್ನೂ ಸರ್ಕಾರವೇ ನೇರವಾಗಿ ಖರೀದಿಸಬೇಕು ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.