
ಮೈಸೂರು: ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ)ಯಡಿ ಸಾಲ ಸೌಲಭ್ಯ ಕೋರಿ ಫಲಾನುಭವಿಗಳು ಸಲ್ಲಿಸಿರುವ ಅರ್ಜಿಗಳು ತಲುಪಿಯೇ ಇಲ್ಲ ಎಂದು ಬ್ಯಾಂಕ್‌ಗಳು ತಿಳಿಸಿರುವ ಅಚ್ಚರಿಯ ಸಂಗತಿ ಇಲ್ಲಿ ಬಹಿರಂಗಗೊಂಡಿತು. ಇದು, ಗೊಂದಲಕ್ಕೆ ಕಾರಣವಾಗಿರುವ ಹಾಗೂ ಯೋಜನೆಯ ತ್ವರಿತ ಅನುಷ್ಠಾನಕ್ಕೆ ಹಿನ್ನಡೆಯಾಗಿಯೂ ಪರಿಣಮಿಸಿರುವ ಮಾಹಿತಿ ಹೊರಬಿದ್ದಿತು.
ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್–ಎಸ್‌ಬಿಐ ವತಿಯಿಂದ ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಬ್ಯಾಂಕ್‌ಗಳ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಮಿತಿಯ ತ್ರೈಮಾಸಿಕ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಯಿತು.
ವಿಷಯ ಪ್ರಸ್ತಾಪಿಸಿದ ಮಾರ್ಗದರ್ಶಿ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಕೃಷ್ಣಮೂರ್ತಿ ಎನ್.ಪಿ., ‘ಪಿಎಂಎವೈ ಅಡಿ ಮಂಡಕಳ್ಳಿ, ಲಲಿತಾದ್ರಿಪುರ ಹಾಗೂ ಕೆ.ಆರ್.ನಗರದಲ್ಲಿ ನಿರ್ಮಿಸುತ್ತಿರುವ ಮನೆಗಳ ಫಲಾನುಭವಿಗಳು ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಒಂದು ಬ್ಯಾಂಕ್ ಬಿಟ್ಟರೆ ಇತರ ಎಲ್ಲ ಬ್ಯಾಂಕ್‌ಗಳ ಅಧಿಕಾರಿಗಳು ಕೂಡ ಅರ್ಜಿಗಳು ಬಂದೇ ಇಲ್ಲವೆಂದೇ ಹೇಳುತ್ತಿದ್ದಾರೆ. ಎರಡು ಬಾರಿ ವಿಡಿಯೊ ಕಾನ್ಫರೆನ್ಸ್ ನಡೆಸಿದಾಗಲೂ ಇದೇ ರೀತಿ ತಿಳಿಸಿದ್ದಾರೆ’ ಎಂದು ಮಾಹಿತಿ ನೀಡಿದರು.
ದಾಖಲೆ ಇವೆ: ‘ನಾವು ಅರ್ಜಿಗಳನ್ನು ರವಾನಿಸಿರುವುದಕ್ಕೆ ಹಾಗೂ ಬ್ಯಾಂಕ್‌ಗಳವರು ಸ್ವೀಕರಿಸುವುದಕ್ಕೆ ದಾಖಲೆಗಳಿವೆ. ಆದರೆ, ವಿಚಾರಿಸಿದರೆ ನಮ್ಮ ಬಳಿ ಅರ್ಜಿಗಳೇ ಇಲ್ಲ ಎನ್ನುತ್ತಿದ್ದಾರೆ’ ಎಂದು ವಸತಿ ನಿಗಮದ ಅಧಿಕಾರಿಯೊಬ್ಬರು ತಿಳಿಸಿದರು.
ಇದಕ್ಕೆ ಅಚ್ಚರಿ ವ್ಯಕ್ತಪಡಿಸಿದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ‘ನೀವು ಅರ್ಜಿಗಳನ್ನು ಸಲ್ಲಿಕೆ ಮಾಡಿರುವ ಬಗ್ಗೆ ದಾಖಲೆಗಳ ಪ್ರತಿಯನ್ನು ನಮಗೆ ಕೊಡಿ, ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.
‘ಬ್ಯಾಂಕ್‌ಗಳು ಸಾಲ ನೀಡಿಕೆಗೆ ಸಂಬಂಧಿಸಿದ ಮಾಹಿತಿಯನ್ನು ಪೋರ್ಟಲ್‌ನಲ್ಲಿ ತ್ವರಿತವಾಗಿ ಅಪ್‌ಡೇಟ್ ಮಾಡಬೇಕು. ಆಗ ತಳಮಟ್ಟದ ಮಾಹಿತಿ ನಮಗೆ ದೊರೆಯುತ್ತದೆ. ಪ್ರತಿ ತಿಂಗಳ ಕೊನೆಯಲ್ಲಿ ಈ ಕೆಲಸವನ್ನು ನಿರ್ವಹಿಸಬೇಕು’ ಎಂದು ಸಂಸದರು ನಿರ್ದೇಶನ ನೀಡಿದರು.
ಪರಿಶೀಲಿಸಿರಿ: ‘ಕೇಂದ್ರ ಸರ್ಕಾರದ ಪಿಎಂ ಸ್ವನಿಧಿ, ಪಿಎಂ ವಿಶ್ವಕರ್ಮ ಯೋಜನೆಯಡಿ ಫಲಾನುಭವಿಗಳು ಸಲ್ಲಿಸಿರುವ ಅರ್ಜಿಗಳಲ್ಲಿ ತಿರಸ್ಕೃತ ಅರ್ಜಿಗಳ ಪ್ರಮಾಣ ಹೆಚ್ಚಾಗಿದ್ದು, ಪುನರ್ ಪರಿಶೀಲಿಸಿ ಆಯ್ಕೆಗೆ ಪರಿಗಣಿಸಬೇಕು’ ಎಂದು ಸಂಸದರು ಸೂಚಿಸಿದರು.
ಎನ್.ಪಿ.ಕೃಷ್ಣಮೂರ್ತಿ ಮಾತನಾಡಿ, ‘ಬ್ಯಾಂಕ್ ವ್ಯವಸ್ಥಾಪಕರು ಫಲಾನುಭವಿಗಳ ಅರ್ಜಿಯನ್ನು ತಿರಸ್ಕರಿಸುವ ಮುನ್ನ ಮತ್ತೊಮ್ಮೆ ಪರಿಶೀಲಿಸಬೇಕು. ಕಾರಣವನ್ನು ಗಮನಿಸಬೇಕು’ ಎಂದು ತಿಳಿಸಿದರು.
‘ಸಮರ್ಪಕ ದಾಖಲೆ ಹಾಗೂ ಮಾಹಿತಿ ಕೊಡದಿರುವ ಅರ್ಜಿಗಳನ್ನು ನಿಯಮಾನುಸಾರ ತಿರಸ್ಕರಿಸಲಾಗಿದೆ’ ಎಂದು ಕೆಲವು ಬ್ಯಾಂಕ್‌ಗಳ ಪ್ರತಿನಿಧಿಗಳು ಪ್ರತಿಕ್ರಿಯಿಸಿದರು.
ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿ.ಪಂ ಸಿಇಒ ಎಸ್.ಯುಕೇಶ್ ಕುಮಾರ್, ಆರ್‌ಬಿಐ ಸಹಾಯಕ ಪ್ರಧಾನ ವ್ಯವಸ್ಥಾಪಕ ಆರ್.ಪ್ರಭಾಕರನ್, ನಬಾರ್ಡ್ ಡಿಜಿಎಂ ಶಾಂತವೀರ್ ಪಾಲ್ಗೊಂಡಿದ್ದರು.
ಅಭಿನಂದನೆ ಪತ್ರಕ್ಕೆ ಶ್ಲಾಘನೆ
'2024ರ ಜೂನ್ 30ರಿಂದ 2025ರ ಮೇ 31ರ ಅವಧಿಯಲ್ಲಿ ನಡೆದ ‘ಚಾಲೆಂಜ್ ಫಂಡ್’ ಯೋಜನೆಯಡಿ ಮೈಸೂರು ಜಿಲ್ಲೆಯು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯ ನೋಂದಣಿ ಅಭಿಯಾನದ ‘ಎಫ್’ ಗುಂಪಿನಲ್ಲಿ ದ್ವಿತೀಯ ಸ್ಥಾನ ಹಾಗೂ ಪ್ರಧಾನ ಮಂತ್ರಿ ಜೀವನ್ ಬಿಮಾ ಯೋಜನೆಯ ‘ಸಿ’ ಗುಂಪಿನಲ್ಲಿ ಚತುರ್ಥ ಸ್ಥಾನ ಪಡೆದಿದೆ. ಇದಕ್ಕಾಗಿ ಕಾರಣವಾದ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ" ಎಂದು ಸಂಸದ ಯದುವೀರ್ ತಿಳಿಸಿದರು.
‘ಕ್ಲೇಮು ಇತ್ಯರ್ಥ’ಕ್ಕೆ ಡಿಸೆಂಬರ್‌ವರೆಗೆ ಅಭಿಯಾನ
ಕೇಂದ್ರ ಸರ್ಕಾರದ ಸೂಚನೆಯಂತೆ ‘ನಿಮ್ಮ ಹಣ ನಿಮ್ಮ ಹಕ್ಕು’– ಹಣಕಾಸು ವಲಯದಲ್ಲಿ ಕ್ಲೇಮು ಪಡೆಯದ ಸ್ವತ್ತುಗಳ ದಕ್ಷ ಹಾಗೂ ತ್ವರಿತ ಇತ್ಯರ್ಥಕ್ಕಾಗಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಸಂಬಂಧ ಪ್ರಚಾರ ಸಾಮಗ್ರಿಯನ್ನು ಸಂಸದ ಯದುವೀರ್ ಬಿಡುಗಡೆ ಮಾಡಿದರು. ಈ ಬಗ್ಗೆ ಮಾಹಿತಿ ನೀಡಿದ ಕೃಷ್ಣಮೂರ್ತಿ ‘ಡಿಸೆಂಬರ್‌ವರೆಗೆ ಅಭಿಯಾನ ಹಮ್ಮಿಕೊಳ್ಳಲಾಗಿದೆ. ನ.3ರಂದು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಎಲ್ಲ ಬ್ಯಾಂಕ್‌ನವರು ಗ್ರಾಹಕರನ್ನು ಕರೆತರಬೇಕು. ನಂತರ ಬ್ಯಾಂಕ್ ಮಟ್ಟದಲ್ಲಿ ಅಭಿಯಾನ ನಡೆಸಿ ಕನಿಷ್ಠ 100 ಖಾತೆಗಳನ್ನು ಇತ್ಯರ್ಥಪಡಿಸಬೇಕು’ ಎಂದು ಬ್ಯಾಂಕ್‌ಗಳ ಪ್ರತಿನಿಧಿಗಳಿಗೆ ಸೂಚಿಸಿದರು. ‘ಕೆನರಾ ಬ್ಯಾಂಕ್ ಎಸ್‌ಬಿಐ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ 31 ಬ್ಯಾಂಕ್‌ಗಳಿಂದ 534 ಶಾಖೆಗಳಿವೆ. ಅದರಲ್ಲಿ 505424 ಖಾತೆಗಳಿವೆ. ಇದರಲ್ಲಿ ಕ್ಲೇಮು ಪಡೆಯದ ಖಾತೆಗಳನ್ನು ಇತ್ಯರ್ಥಗೊಳಿಸಬೇಕು’ ಎಂದು ತಿಳಿಸಿದರು. ‘ಹುಲ್ಲಹಳ್ಳಿಯಲ್ಲಿರುವ ಎಸ್‌ಬಿಐ ಶಾಖೆ ಸ್ಥಳಾಂತರಕ್ಕೆ ಪ್ರಸ್ತಾಪಿಸಲಾಗಿದೆ. ದಾಸನೂರಿನಲ್ಲಿ ಬ್ಯಾಂಕ್ ತೆರೆಯಲು ಹಾಗೂ ಮುಖ್ಯಮಂತ್ರಿಯವರ ಕಚೇರಿಯ ಸೂಚನೆಯಂತೆ ನಗರ್ಲೆಯಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಶಾಖೆ ಆರಂಭಕ್ಕೆ ಬ್ಯಾಂಕ್‌ಗಳವರು ಸಮೀಕ್ಷೆ ನಡೆಸಿ ವರದಿ ಸಲ್ಲಿಸಬೇಕು’ ಎಂದು ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.