ADVERTISEMENT

ಅಪರಾಧ ಕೃತ್ಯಗಳ ಕಡಿವಾಣಕ್ಕೆ ಎಡಿಜಿಪಿ ಸೂಚನೆ

ಮೈಸೂರು ದಕ್ಷಿಣ ವಲಯ ವ್ಯಾಪ್ತಿಯ ಅಪರಾಧ ಪರಿಶೀಲನಾ ಸಭೆ

​ಪ್ರಜಾವಾಣಿ ವಾರ್ತೆ
Published 15 ಮೇ 2019, 18:10 IST
Last Updated 15 ಮೇ 2019, 18:10 IST
ಮೈಸೂರಿನಲ್ಲಿ ಬುಧವಾರ ನಡೆದ ಮೈಸೂರು ವಲಯದ ಅಪರಾಧ ಪರಿಶೀಲನಾ ಸಭೆಯಲ್ಲಿ ರಾಜ್ಯ ಪೊಲೀಸ್ ಇಲಾಖೆಯ ಅಪರಾಧ ವಿಭಾಗದ ಎಡಿಜಿಪಿ ಡಾ.ಎಂ.ಎ.ಸಲೀಂ ಮಾತನಾಡಿದರು
ಮೈಸೂರಿನಲ್ಲಿ ಬುಧವಾರ ನಡೆದ ಮೈಸೂರು ವಲಯದ ಅಪರಾಧ ಪರಿಶೀಲನಾ ಸಭೆಯಲ್ಲಿ ರಾಜ್ಯ ಪೊಲೀಸ್ ಇಲಾಖೆಯ ಅಪರಾಧ ವಿಭಾಗದ ಎಡಿಜಿಪಿ ಡಾ.ಎಂ.ಎ.ಸಲೀಂ ಮಾತನಾಡಿದರು   

ಮೈಸೂರು: ಮೈಸೂರು ದಕ್ಷಿಣ ವಲಯದಲ್ಲಿ ಹೆಚ್ಚುತ್ತಿರುವ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಬೇಕು ಎಂದು ರಾಜ್ಯ ಪೊಲೀಸ್ ಇಲಾಖೆಯ ಅಪರಾಧ ವಿಭಾಗದ ಎಡಿಜಿಪಿ ಡಾ.ಎಂ.ಎ.ಸಲೀಂ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಇಲ್ಲಿ ಬುಧವಾರ ಅವರು ಮೈಸೂರು, ಚಾಮರಾಜನಗರ, ಮಂಡ್ಯ, ಕೊಡಗು ಹಾಗೂ ಹಾಸನ ಜಿಲ್ಲೆಗಳ ಅಪರಾಧ ಪರಿಶೀಲನಾ ಸಭೆ ನಡೆಸಿದರು.

ವಿಶೇಷವಾಗಿ ಮೈಸೂರು ನಗರದಲ್ಲಿ ಹೆಚ್ಚಾದ ಸರಗಳ್ಳತನದ ಕುರಿತು ಮಾಹಿತಿ ಕಲೆ ಹಾಕಿದರು. ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ನಡೆಸಿರುವ ಕಾರ್ಯಾಚರಣೆ, ನಂತರ ಸರಗಳ್ಳತನ ನಿಯಂತ್ರಣಕ್ಕೆ ಬಂದಿರುವ ವಿಚಾರವನ್ನು ನಗರ ಪೊಲೀಸ್ ಕಮೀಷನರ್ ಕೆ.ಟಿ.ಬಾಲಕೃಷ್ಣ ಸಭೆಯಲ್ಲಿ ವಿವರಿಸಿದರು.

ADVERTISEMENT

ಜತೆಗೆ, ನಗರದ ಹೊರವಲಯದಲ್ಲಿ ಯುವತಿಯೊಬ್ಬರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಗ್ಗೆಯೂ ಅವರು ಮಾಹಿತಿ ಪಡೆದುಕೊಂಡರು. ನಗರ ಮತ್ತು ಜಿಲ್ಲಾ ವ್ಯಾಪ್ತಿಯಲ್ಲಿ ಈ ಬಗೆಯ ಅಪರಾಧ ಕೃತ್ಯಗಳು ಮತ್ತೆ ಘಟಿಸದಂತೆ ಮಾಡಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಸೂಚಿಸಿದರು.

ಮಹಿಳೆಯರು ಮತ್ತು ಮಕ್ಕಳ ಮೇಲೆ ಹೆಚ್ಚುತ್ತಿರುವ ಅಪರಾಧಗಳನ್ನು ತಡೆಯಬೇಕು. ಬಹಳಷ್ಟು ಅಪರಾಧ ಕೃತ್ಯಗಳು ಸಾಮಾಜಿಕ ಒತ್ತಡದ ಕಾರಣಕ್ಕೆ ಉಂಟಾಗುತ್ತವೆ. ಇಂತಹ ಒತ್ತಡಗಳು ಏನು ಎಂಬುದನ್ನು ಗುರುತಿಸಬೇಕು ಎಂದು ಅವರು ಹೇಳಿದರು.

ಮೈಸೂರು ದಕ್ಷಿಣ ವಲಯ ಐಜಿಪಿ ಉಮೇಶ್‌ಕುಮಾರ್, ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ, ಚಾಮರಾಜನಗರ ಎಸ್‌.ಪಿ ಧಮೇಂದ್ರಕುಮಾರ್‌ ಮೀನಾ, ಹಾಸನ ಎಸ್‌.ಪಿ ಚೇತನ್‌ಸಿಂಗ್ ರಾಥೋರ್, ಕೊಡಗು ಎಸ್‌.ಪಿ ಸುಮನ್ ಡಿ.ಪಣ್ಣೇಕರ್, ಮಂಡ್ಯ ಎಸ್‌.ಪಿ ಶಿವಪ್ರಕಾಶ್ ದೇವರಾಜ್, ಮೈಸೂರು ಹೆಚ್ಚುವರಿ ಎಸ್‌.ಪಿ ಸ್ನೇಹಾ, ಮೈಸೂರು ನಗರ ಡಿಸಿಪಿ ಮುತ್ತುರಾಜ್ ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.