ADVERTISEMENT

ಪೊಲೀಸರಿಗೆ ಸೇವಾ ಮನೋಭಾವ ಇರಬೇಕು: ವಿಫುಲ್‌ಕುಮಾರ್

ತರಬೇತಿ ಪೂರ್ಣಗೊಳಿಸಿದ 242 ಮಹಿಳಾ ಕಾನ್‌ಸ್ಟೆಬಲ್‌ಗಳು

​ಪ್ರಜಾವಾಣಿ ವಾರ್ತೆ
Published 12 ಜನವರಿ 2021, 11:48 IST
Last Updated 12 ಜನವರಿ 2021, 11:48 IST
ಮೈಸೂರಿನ ಸಿಎಆರ್ ಮೈದಾನದಲ್ಲಿ ಮಂಗಳವಾರ 5ನೇ ತಂಡದ ಮಹಿಳಾ ಕಾನ್‌ಸ್ಟೆಬಲ್, ರೈಲ್ವೇಸ್, ಕೆಎಸ್‌ಐಎಸ್‌ಎಫ್‌ ಹಾಗೂ 2ನೇ ತಂಡದ ಮಹಿಳಾ ಕಾನ್‌ಸ್ಟೆಬಲ್‌ ಪ್ರಶಿಕ್ಷಣಾರ್ಥಿಗಳಿಂದ ಐಜಿಪಿ ವಿಫುಲ್‌ಕುಮಾರ್ ಗೌರವ ವಂದನೆ ಸ್ವೀಕರಿಸಿದರು
ಮೈಸೂರಿನ ಸಿಎಆರ್ ಮೈದಾನದಲ್ಲಿ ಮಂಗಳವಾರ 5ನೇ ತಂಡದ ಮಹಿಳಾ ಕಾನ್‌ಸ್ಟೆಬಲ್, ರೈಲ್ವೇಸ್, ಕೆಎಸ್‌ಐಎಸ್‌ಎಫ್‌ ಹಾಗೂ 2ನೇ ತಂಡದ ಮಹಿಳಾ ಕಾನ್‌ಸ್ಟೆಬಲ್‌ ಪ್ರಶಿಕ್ಷಣಾರ್ಥಿಗಳಿಂದ ಐಜಿಪಿ ವಿಫುಲ್‌ಕುಮಾರ್ ಗೌರವ ವಂದನೆ ಸ್ವೀಕರಿಸಿದರು   

ಮೈಸೂರು: ಮುಂಜಾನೆಯ ಮಂಜಿನ ನಡುವೆ ಇಲ್ಲಿನ ಸಿಎಆರ್‌ ಮೈದಾನದಲ್ಲಿ ದಾಪುಗಾಲಿಡುತ್ತಾ ಬಂದ ತರಬೇತಿ ನಿರತ ಮಹಿಳಾ ಕಾನ್‌ಸ್ಟೆಬಲ್‌ಗಳು ಸಾರ್ವಜನಿಕರನ್ನು ಸೂಜಿಗಲ್ಲಿನಂತೆ ಸೆಳೆದರು. ಚುಮುಚುಮು ಚಳಿಯಲ್ಲಿ ಕರಾರುವಕ್ಕಾಗಿ ಹೆಜ್ಜೆ ಇಕ್ಕುತ್ತಾ ಸಾಗಿದ ಇವರ ನಿರ್ಗಮನ ಪಥ ಸಂಚಲನಕ್ಕೆ ಎಲ್ಲರೂ ಬೆರಗಾದರು.

ಇಲ್ಲಿ ಮಂಗಳವಾರ ನಡೆದ 5ನೇ ತಂಡದ ಮಹಿಳಾ ಕಾನ್‌ಸ್ಟೆಬಲ್, ರೈಲ್ವೇಸ್, ಕೆಎಸ್‌ಐಎಸ್‌ಎಫ್‌ ಹಾಗೂ 2ನೇ ತಂಡದ ಮಹಿಳಾ ಕಾನ್‌ಸ್ಟೆಬಲ್‌ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಈ ದೃಶ್ಯಗಳು ಕಂಡು ಬಂದವು.

ಗೌರವ ವಂದನೆ ಸ್ವೀಕರಿಸಿದ ಮಾತನಾಡಿದ ಕರ್ನಾಟಕ ಪೊಲೀಸ್ ಅಕಾಡೆಮಿಯ ಐಜಿಪಿ ವಿಫುಲ್‌ಕುಮಾರ್, ‘ಪೊಲೀಸರು ಸೇವಾ ಮನೋಭಾವ ಹೊಂದಿರಬೇಕು. ಸೇವಾ ಮನೋಭಾವ ಇರದಿದ್ದರೆ ಅವರು ಪೊಲೀಸರೇ ಅಲ್ಲ’ ಎಂದು ತಿಳಿಸಿದರು.

ADVERTISEMENT

ಪೊಲೀಸರ ಕಾರ್ಯವೈಖರಿ ಹಿಂದಿಗಿಂತಲೂ ಈಗ ಬದಲಾಗಿದೆ. ಲಾಠಿ, ದಂಡವನ್ನೂ ಮೀರಿದೆ. ಈ ಹೊತ್ತಿನ ಪೊಲೀಸರೆಂದರೆ ಮಹಾಸೇವಕರು. ಕೋವಿಡ್ ಸಂಕಷ್ಟ ಸಮಯದಲ್ಲಿ ಇವರು ಅವಿರತ ಸೇವೆ ಸಲ್ಲಿಸಿದ್ದಾರೆ ಎಂದು ತಿಳಿಸಿದರು.

ಸಮಸ್ಯೆ ಬಂದ ಮೇಲೆ ಕಾರ್ಯಾಚರಣೆ ನಡೆಸುವ ಬದಲಿಗೆ ಬರಲಿರುವ ಸಮಸ್ಯೆಯ ಸ್ವರೂಪವನ್ನು ಮೊದಲೇ ಅಂದಾಜು ಮಾಡಿ, ಅದನ್ನು ತಪ್ಪಿಸಬೇಕು. ಜನರೊಂದಿಗೆ ಅತ್ಯಂತ ಸ್ನೇಹಪರವಾಗಿ ನಡೆದುಕೊಳ್ಳಬೇಕು. ಮಾನವ ಹಕ್ಕುಗಳ ರಕ್ಷಣೆ, ಪಾರದರ್ಶಕತೆ ಕುರಿತು ಹೆಚ್ಚಿನ ಗಮನಹರಿಸಬೇಕು ಎಂದು ಕಿವಿಮಾತು ಹೇಳಿದರು.

ರಾಜ್ಯದಲ್ಲಿ ಶೇ 20ರಿಂದ 25ರಷ್ಟು ಮಹಿಳಾ ಪೊಲೀಸರಿದ್ದಾರೆ. ಈಗ ತರಬೇತಿ ಮುಗಿಸಿ ತೆರಳುತ್ತಿರುವವರು ಇದಕ್ಕೆ ಸೇರ್ಪಡೆಯಾಗಿದ್ದಾರೆ. ತರಬೇತಿ ಎಂಬುದು ಎಂದೂ ಮುಗಿಯುವುದಿಲ್ಲ. ಅದು ನಿರಂತರವಾಗಿರುತ್ತದೆ ಎಂದರು.

ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲರಾದ ಧರಣೀದೇವಿ ಮಾಲಗತ್ತಿ ಮಾತನಾಡಿ, ‘ಪೊಲೀಸ್ ತರಬೇತಿ ಶಾಲೆಯು 2015ರಲ್ಲಿ ಕಾರ್ಯಾರಂಭ ಮಾಡಿದ್ದು, ಇಲ್ಲಿಯವರೆಗೆ 4 ತಂಡಗಳಲ್ಲಿ 952 ಮಂದಿ ತರಬೇತಿ ಪೂರ್ಣಗೊಳಿಸಿದ್ದಾರೆ. 1996ರಲ್ಲಿ ಕಾರ್ಯಾರಂಭ ಮಾಡಿದ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯು 15 ತಂಡಗಳಲ್ಲಿ 2,017 ಮಂದಿ ತರಬೇತಿ ಪಡೆದಿದ್ದಾರೆ’ ಎಂದು ಮಾಹಿತಿ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ನಗರ ಪೊಲೀಸ್ ಕಮಿಷನರ್ ಡಾ.ಚಂದ್ರಗುಪ್ತ, ಡಿಸಿಪಿ ಡಾ.ಎ.ಎನ್.ಪ್ರಕಾಶ್‌ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.