ADVERTISEMENT

ಪೊಲೀಸ್‌ ಕಥೆ ಹೇಳಲಿದೆ ‘ವಾಕಿ– ಟಾಕಿ ವಿಥ್‌ ಖಾಕಿ’

ಪೊಲೀಸ್ ಅಕಾಡೆಮಿಯಿಂದ ವಿಶೇಷ ಪ್ರಯತ್ನ ಆರಂಭ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 3:19 IST
Last Updated 29 ಅಕ್ಟೋಬರ್ 2025, 3:19 IST
ಮೈಸೂರಿನ ಪೊಲೀಸ್‌ ಅಕಾಡೆಮಿಯು ಆರಂಭಿಸಿರುವ ‘ವಾಕಿ– ಟಾಕಿ ವಿಥ್‌ ಖಾಕಿ’ ಪಾಡ್‌ಕಾಸ್ಟ್‌ನಲ್ಲಿ ಪಿಎಸ್‌ಐ ಪ್ರಶಿಕ್ಷಣಾರ್ಥಿಗಳಾದ ಸಿದ್ದೇಶ್‌ ಹಾಗೂ ಕೆ.ಎಂ.ನಂದಿನಿ ಮಾತನಾಡುತ್ತಿರುವುದು
ಮೈಸೂರಿನ ಪೊಲೀಸ್‌ ಅಕಾಡೆಮಿಯು ಆರಂಭಿಸಿರುವ ‘ವಾಕಿ– ಟಾಕಿ ವಿಥ್‌ ಖಾಕಿ’ ಪಾಡ್‌ಕಾಸ್ಟ್‌ನಲ್ಲಿ ಪಿಎಸ್‌ಐ ಪ್ರಶಿಕ್ಷಣಾರ್ಥಿಗಳಾದ ಸಿದ್ದೇಶ್‌ ಹಾಗೂ ಕೆ.ಎಂ.ನಂದಿನಿ ಮಾತನಾಡುತ್ತಿರುವುದು   

ಮೈಸೂರು: ವ್ಯಕ್ತಿಯೊಬ್ಬನ ಯಶಸ್ಸಿನ ಕಥೆಯು ಮತ್ತೊಬ್ಬನಿಗೆ ಪ್ರೇರಣೆಯಾಗಬಲ್ಲದು ಎಂಬ ಮಾತಿದೆ. ಇದಕ್ಕೆ ಪೂರಕವಾಗಿ ಪೊಲೀಸ್‌ ಅಕಾಡೆಮಿಯು ಇಲಾಖೆಗೆ ಹೊಸದಾಗಿ ಸೇರುವವರಿಗಾಗಿ, ಇಲಾಖೆಯಲ್ಲೇ ಸಾಧನೆ ಮಾಡಿದವರ ಕಥೆಗಳನ್ನು ಪಾಡ್‌ಕಾಸ್ಟ್‌ ಮೂಲಕ ಬಿತ್ತರಿಸಲು ಹೊರಟಿದೆ.

ಅಕಾಡೆಮಿಯು ಈ ವಿನೂತನ ಪ್ರಯತ್ನಕ್ಕೆ ‘ವಾಕಿ– ಟಾಕಿ ವಿಥ್‌ ಖಾಕಿ’ ಎಂದು ಶೀರ್ಷಿಕೆ ನೀಡಿದೆ. ಹೊಸಬರಿಗೆ ಮಾರ್ಗದರ್ಶನ ಹಾಗೂ ಪ್ರೇರಣೆ ನೀಡುವುದರೊಂದಿಗೆ ಸಮಾಜಕ್ಕೆ ಪೊಲೀಸ್‌ ವ್ಯವಸ್ಥೆಯಲ್ಲಿರುವ ಸವಾಲುಗಳ ಬಗ್ಗೆ ತಿಳಿಸುವ ಉದ್ದೇಶದಿಂದ ಕಾರ್ಯಕ್ರಮ ಆರಂಭಿಸಲಾಗಿದೆ.

ಈ ಪಾಡ್‌ಕಾಸ್ಟ್‌ಗಾಗಿ ಅಕಾಡೆಮಿ ಆವರಣದಲ್ಲಿ ಸ್ಟುಡಿಯೊ ವ್ಯವಸ್ಥೆ ಮಾಡಿಕೊಂಡಿದ್ದು, ಪ್ರಶಿಕ್ಷಣಾರ್ಥಿಗಳು ಹಾಗೂ ಸಿಬ್ಬಂದಿ ಕಾರ್ಯಕ್ರಮ ನಿರ್ವಹಿಸಲಿದ್ದಾರೆ. ಪ್ರಥಮ ಸಂಚಿಕೆಯಲ್ಲಿ ಪಿಎಸ್‌ಐ ಪ್ರಶಿಕ್ಷಣಾರ್ಥಿ ಸಿದ್ದೇಶ್‌ ಅವರು ಪೊಲೀಸ್‌ ಇಲಾಖೆಗೆ ಆಯ್ಕೆಯಾಗಿರುವ ಕುರಿತ ಅನುಭವಗಳನ್ನು ಕೆ.ಎಂ.ನಂದಿನಿ ಅವರೊಂದಿಗೆ ಹಂಚಿಕೊಂಡಿದ್ದಾರೆ. ಈ ಪಾಡ್‌ಕಾಸ್ಟ್‌ ಕೆಪಿಎ ಮೈಸೂರು (KPA-MYSURU) ಯೂಟ್ಯೂಬ್‌ ಚಾನೆಲ್‌ನಲ್ಲಿ ಪ್ರಸಾರಗೊಂಡಿದೆ.

ADVERTISEMENT

ಪೊಲೀಸ್‌ ಇಲಾಖೆಗೆ ಹೊಸತಾಗಿ ಸೇರಿರುವವರ ಅನುಭವ, ವಿಶೇಷ ಸೇವೆಯಿಂದ ಗುರುತಿಸಿರುವ ಅಧಿಕಾರಿಗಳು ಮಾತುಕತೆ, ನಿವೃತ್ತ ಅಧಿಕಾರಿಗಳ ಯಶೋಗಾಥೆಗಳು ಈ ಕಾರ್ಯಕ್ರಮದಲ್ಲಿ ಪ್ರಸಾರವಾಗಲಿದೆ. ‘ಪೊಲೀಸ್‌ ಇಲಾಖೆಯ ಸೇವೆಗಳ ಬಗ್ಗೆ ಸಮಾಜದಲ್ಲಿ ಉತ್ತಮ ಸಂದೇಶ ಹಂಚಲು ಈ ಪ್ರಯತ್ನ ಸಹಾಯವಾಗಲಿದೆ’ ಎನ್ನುತ್ತಾರೆ ಪೊಲೀಸ್‌ ಅಕಾಡೆಮಿ ಅಧಿಕಾರಿಗಳು.

ಜರ್ಮನಿಯ ಬವೇರಿಯಾದ ಪೊಲೀಸರ ತಂಡವು ಅಕಾಡಮಿಗೆ ಆಗಮಿಸಲಿದ್ದು, ಅಲ್ಲಿನ ಪೊಲೀಸ್‌ ವ್ಯವಸ್ಥೆಯ ಕುರಿತು ಅಧಿಕಾರಿಗಳು ಪಾಡ್‌ಕಾಸ್ಟ್‌ ಮೂಲಕ ಮಾಹಿತಿ ಹಂಚಿಕೊಳ್ಳಲಿದ್ದಾರೆ. ಮುಂದೆ ಪತ್ರಕರ್ತರು ಹಾಗೂ ಸಾಹಿತಿಗಳನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸುವ ಯೋಜನೆ ರೂಪಿಸಲಾಗಿದೆ.

‘ಅಧಿಕಾರಿಗಳ ಅನುಭವವು ಪ್ರಶಿಕ್ಷಣಾರ್ಥಿಗಳಿಗೆ ಉತ್ಸಾಹ ತುಂಬಲು ಸಹಾಯಕವಾಗಲಿದೆ. ಅತಿಥಿಗಳ ಆಯ್ಕೆಯ ಬಳಿಕ ನಿರೂಪಕರನ್ನು ನಿರ್ಧರಿಸಲಿದ್ದು, ಅಕಾಡೆಮಿ ಉಪನ್ಯಾಸಕರು ಹಾಗೂ ಪ್ರಶಿಕ್ಷಣಾರ್ಥಿಗಳಿಗೆ ಅವಕಾಶ ನೀಡಲಿದ್ದೇವೆ’ ಎಂದು ಅಕಾಡೆಮಿ ನಿರ್ದೇಶಕ ಎಸ್‌.ಎಲ್.ಚನ್ನಬಸವಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು. 

ಎಸ್.ಎಲ್‌.ಚನ್ನಬಸವಣ್ಣ

- ‘ಜನರನ್ನು ಪರಿಣಾಮಕಾರಿಯಾಗಿ ತಲುಪಲಿದ್ದೇವೆ’

‘ಸಾಮಾಜಿಕ ಮಾಧ್ಯಮದ ಮೂಲಕ ಜನರನ್ನು ಪರಿಣಾಮಕಾರಿಯಾಗಿ ತಲುಪಲು ಪಾಡ್‌ಕಾಸ್ಟ್‌ ಆಯ್ಕೆ ಮಾಡಿದ್ದೇವೆ. ಇಲಾಖೆಗೆ ಸೇರಲು ಯುವ ಸಮೂಹವನ್ನು ಪ್ರೇರೇಪಿಸಲಿದ್ದೇವೆ. ಪ್ರಸ್ತುತ ಪೊಲೀಸರ ತಪ್ಪುಗಳನ್ನಷ್ಟೇ ಎತ್ತಿಹಿಡಿಯುವ ಕೆಲಸಗಳಾಗುತ್ತಿವೆ. ಈ ಕಾರ್ಯಕ್ರಮದ ಮೂಲಕ ಪೊಲೀಸರ ಸೇವೆಯ ಬಗ್ಗೆಯೂ ತಿಳಿಸಲಿದ್ದೇವೆ. ಮುಂದಿನ ಹಂತದಲ್ಲಿ ಪದವಿಪೂರ್ವ ಕಾಲೇಜುಗಳಿಗೆ ಭೇಟಿ ನೀಡಿ ಪೊಲೀಸ್‌ ವೃತ್ತಿ ಜೀವನ ರೂಪಿಸಿಕೊಳ್ಳುವ ಬಗ್ಗೆ ಜಾಗೃತಿ ಮೂಡಿಸುತ್ತೇವೆ’ ಎಂದು ಪೊಲೀಸ್‌ ಅಕಾಡೆಮಿ ನಿರ್ದೇಶಕ ಎಸ್‌.ಎಲ್.ಚನ್ನಬಸವಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.