ADVERTISEMENT

ಜಿಲ್ಲೆಯಲ್ಲಿ ಗರಿಗೆದರಿದ ರಾಜಕೀಯ ಬೆಟ್ಟಿಂಗ್‌

ಮಧ್ಯವರ್ತಿಗೆ ಶೇ 15ರಷ್ಟು ಕಮೀಷನ್‌; ಪಣಕ್ಕೆ ಬೈಕು, ಟ್ರಾಕ್ಟರ್‌, ಹಣ, ಒಡವೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2019, 11:18 IST
Last Updated 24 ಏಪ್ರಿಲ್ 2019, 11:18 IST

ಮೈಸೂರು: ಮತದಾನ ಮುಗಿದ ಬಳಿಕ ಬೆಟ್ಟಿಂಗ್ ಭರಾಟೆ ಜಿಲ್ಲೆಯಲ್ಲಿ ಜೋರಾಗಿ ನಡೆಯಲಾರಂಭಿಸಿದೆ. ಹೆಚ್ಚಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಬೆಟ್ಟಿಂಗ್‌ ಗರಿಗೆದರುತ್ತಿದೆ. ಆದರೆ, ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಬೆಟ್ಟಿಂಗ್ ಹೆಚ್ಚಾಗಿ ನಡೆಯುತ್ತಿಲ್ಲ.

ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿ ಮಧ್ಯವೇ ಬಹುತೇಕ ಎಲ್ಲ ಬೆಟ್ಟಿಂಗ್‌ಗಳೂ ಕೇಂದ್ರೀಕೃತವಾಗಿವೆ. ಕೆಲವೊಂದು ಕಡೆ ಬಿಜೆಪಿ ಪರವಾಗಿ, ಮತ್ತೆ ಕೆಲವೊಂದು ಕಡೆ ಮೈತ್ರಿಕೂಟದ ಪರವಾಗಿ ಬೆಟ್ಟಿಂಗ್ ನಡೆಯುತ್ತಿದೆ.

ಹಣದ ಬೆಟ್ಟಿಂಗ್‌ ಹೆಚ್ಚು ವ್ಯಾಪಕವಾಗಿದೆ. ಶೇ 10ರಷ್ಟು ಕಮಿಷನ್‌ ಮಧ್ಯವರ್ತಿಗೆ ಸಿಗುತ್ತದೆ. ಮಧ್ಯವರ್ತಿಗೆ ಹೆಚ್ಚಿನ ಲಾಭ ಇರುವುದರಿಂದ ಬೆಟ್ಟಿಂಗ್‌ಗೆ ಇವರೇ ಹೆಚ್ಚು ಪ್ರಚೋದನೆ ನೀಡುತ್ತಿದ್ದಾರೆ.

ADVERTISEMENT

₹ 10 ಸಾವಿರದಿಂದ ₹ 1 ಲಕ್ಷಕ್ಕೂ ಹೆಚ್ಚಿನ ಮೊತ್ತದ ಹಣಕಾಸಿನ ಬೆಟ್ಟಿಂಗ್‌ ನಡೆಯುತ್ತಿದೆ. ಮಧ್ಯವರ್ತಿಯ ಕಡೆಗೆ ಎರಡೂ ಕಡೆಯವರು ನಿಗದಿತ ಮೊತ್ತವನ್ನು ನೀಡಬೇಕು. ಫಲಿತಾಂಶ ಬಂದಾಗ ಗೆದ್ದವರಿಗೆ ಶೇ 10ರಷ್ಟು ಕಮಿಷನ್ ತೆಗೆದುಕೊಂಡು ಉಳಿದ ಹಣ ನೀಡುತ್ತಾರೆ.‌ ಈ ಜಾಲವು ಮಾಫಿಯಾದ ಹಾಗೆ ಕಾರ್ಯನಿರ್ವಹಿಸುತ್ತಿದೆ.

ಇದನ್ನು ಬಿಟ್ಟರೆ ಸ್ಥಳೀಯವಾಗಿಯೂ ಅಲ್ಲಲ್ಲಿ ಬೆಟ್ಟಿಂಗ್‌ ನಡೆಯುತ್ತಿವೆ. ಬೈಕ್‌ಗಳನ್ನು, ದನಕರುಗಳನ್ನು ಪಣಕ್ಕೆ ಒಡ್ಡುತ್ತಿದ್ದಾರೆ. ಕೆಲವೊಂದು ಕಡೆ ಕಾರುಗಳನ್ನು ಪಣಕ್ಕಿಟ್ಟರೆ ಮತ್ತೆ ಕೆಲವೆಡೆ ವಿರಳವಾಗಿ ಅಲ್ಲಲ್ಲಿ ನಿವೇಶನಗಳನ್ನು ಪಣಕ್ಕಿಡಲಾಗುತ್ತಿದೆ. ಆದರೆ, ಈ ಕುರಿತು ಖಚಿತವಾಗಿ ಹೇಳಿಕೊಳ್ಳಲು ಬಹಳಷ್ಟು ಜನರು ಹಿಂಜರಿಯುತ್ತಿದ್ದಾರೆ.

ಇಂತಹ ಬೆಟ್ಟಿಂಗ್‌ಗಳು ಹೆಚ್ಚಾಗಿ ತಮಾಷೆಗೆ ನಡೆಯುತ್ತಿವೆಯಾದರೂ ಕೆಲವೊಮ್ಮೆ ಅತಿರೇಕಕ್ಕೆ ಹೋಗುವ ಸಂಭವವೂ ಇದೆ. ಸೋತವರು ತಾವು ಪಣಕ್ಕಿಟ್ಟ ವಸ್ತುಗಳನ್ನು ಕಳೆದುಕೊಂಡು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಕೆಲವೊಂದು ಕಡೆ ಇಂತಹ ಪಕ್ಷವಾರು ಅಲ್ಲದೇ ಬೆಟ್ಟಿಂಗ್‌ ಜಾತಿ ಆಧಾರಿತವಾಗಿಯೂ ನಡೆಯತ್ತಿರುವುದು ಆತಂಕ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.