ADVERTISEMENT

ಮಾಲಿನ್ಯದ ವಿಷವರ್ತುಲದಲ್ಲಿ ನಗರಿ!

ಹೆಚ್ಚುತ್ತಿರುವ ವಾಯುಮಾಲಿನ್ಯ, ವಿಷಮಯವಾದ ಕೆರೆಗಳು

ಕೆ.ಎಸ್.ಗಿರೀಶ್
Published 5 ಜೂನ್ 2019, 19:31 IST
Last Updated 5 ಜೂನ್ 2019, 19:31 IST

ಮೈಸೂರು: ‘ನಗರದಲ್ಲಿ ವಾಯುಮಾಲಿನ್ಯ ಪ್ರಮಾಣ ಮಿತಿ ಮೀರಿಲ್ಲ’ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಹೇಳುತ್ತಾರೆ. ಆದರೆ, ಮಾಲಿನ್ಯದ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ಅಂಕಿಅಂಶಗಳು ಹೇಳುತ್ತವೆ. ಇದು ಆತಂಕಕ್ಕೆ ಕಾರಣವಾಗಿದೆ.

ರಾಜ್ಯದಲ್ಲಿ ಬೆಂಗಳೂರು, ಕಲಬುರ್ಗಿ, ಹುಬ್ಬಳ್ಳಿ–ಧಾರವಾಡ ಹಾಗೂ ದಾವಣಗೆರೆ ನಗರಗಳನ್ನು ಕೇಂದ್ರ ಸರ್ಕಾರವು ‘ರಾಷ್ಟ್ರೀಯ ಸ್ವಚ್ಛ ಗಾಳಿ’ ಕಾರ್ಯಕ್ರಮದಡಿ ಆಯ್ಕೆ ಮಾಡಿಕೊಂಡಿದೆ. ಇಲ್ಲಿ ಮುಂದಿನ 5 ವರ್ಷಗಳಲ್ಲಿ ವಾಯುಮಾಲಿನ್ಯದ ಪ್ರಮಾಣವನ್ನು ಶೇ 50ರಷ್ಟು ಕಡಿಮೆ ಮಾಡುವ ಉದ್ದೇಶ ಹಾಕಿಕೊಂಡಿದೆ. ‘ಗ್ರೀನ್‌ಪೀಸ್‌’ ಸಂಘಟನೆ ಬಿಡುಗಡೆ ಮಾಡಿರುವ ವಾಯುಮಾಲಿನ್ಯದ ನಗರಿಗಳ ಪಟ್ಟಿಯಲ್ಲಿಯೂ ಮೈಸೂರು ಇಲ್ಲ.

ಇಷ್ಟಾದರೂ ಆತಂಕ ತಪ್ಪಿದ್ದಲ್ಲ. ವರ್ಷದಿಂದ ವರ್ಷಕ್ಕೆ ವಾಯುಮಾಲಿನ್ಯದ ಪ್ರಮಾಣ ಹೆಚ್ಚಾಗುತ್ತಿದೆ ಎಂಬುದನ್ನು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಒಪ್ಪಿಕೊಳ್ಳುತ್ತಾರೆ. ವಾರ್ಷಿಕವಾಗಿ ಶೇ 2ರಿಂದ 3ರಷ್ಟು ಪ್ರಮಾಣದಲ್ಲಿ ಗಾಳಿ ಕಲುಷಿತಗೊಳ್ಳುತ್ತಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಕೆ.ಆರ್.ವೃತ್ತದಲ್ಲಿರುವ ವಾಯುಮಾಲಿನ್ಯಕ್ಕಿಂತ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿಯೇ ಹೆಚ್ಚಿನ ವಾಯಮಾಲಿನ್ಯ ಇದೆ.

ಒಂದು ಕೆರೆಯೂ ಪರಿಶುದ್ಧವಾಗಿಲ್ಲ: ನಗರದಲ್ಲಿ ಜಲಮಾಲಿನ್ಯದ ಪ್ರಮಾಣ ಮೇರೆ ಮೀರಿದೆ. ಯಾವ ಒಂದು ಕೆರೆಯ ನೀರೂ ಕುಡಿಯಲು ಮಾತ್ರವಲ್ಲ ಯಾವುದೇ ವಿಧವಾದ ಬಳಕೆಗೆ ಯೋಗ್ಯವಾಗಿಲ್ಲ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಅಂಕಿಅಂಶಗಳು ಹೇಳುತ್ತವೆ.

ಕುಕ್ಕರಹಳ್ಳಿ, ಕಾರಂಜಿಕೆರೆ, ದಳವಾಯಿ ಹಾಗೂ ದೇವನೂರು ಕೆರೆಗಳ ನೀರು ಮೀನುಗಾರಿಕೆಗೂ ಯೋಗ್ಯವಾಗಿಲ್ಲ. ಇವೆಲ್ಲವೂ ಅತ್ಯಂತ ಕಳಪೆ ದರ್ಜೆಗೆ ಸೇರುತ್ತವೆ (ಡಿ ಮತ್ತು ಇ). ಹೆಬ್ಬಾಳ ಕೆರೆ ಪುನರುಜ್ಜೀವನಗೊಳ್ಳುತ್ತಿದೆ. ವರುಣಾ ಮತ್ತು ಶೆಟ್ಟಿಕೆರೆಗಳು ಮಾತ್ರ ಮೀನುಗಾರಿಕೆಗಷ್ಟೇ ಯೋಗ್ಯವಾಗಿವೆ.

ಮಿತಿಯಲ್ಲಿ ವಾಯುಮಾಲಿನ್ಯ

ಮೈಸೂರು ನಗರದಲ್ಲಿ ವಾಯುಮಾಲಿನ್ಯ ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನಿಗದಿಪಡಿಸಿರುವ ಮಿತಿಗಿಂತ ಕಡಿಮೆ ಇದೆ. ಆದರೆ, ವರ್ಷದಿಂದ ವರ್ಷಕ್ಕೆ ಇದು ಹೆಚ್ಚಾಗುತ್ತಿದೆ ಎಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಹೇಳುತ್ತಾರೆ. ನಗರದ ಹೃದಯಭಾಗವಾದ ಕೆ.ಆರ್.ವೃತ್ತಕ್ಕಿಂತ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲೇ ಹೆಚ್ಚು ವಾಯುಮಾಲಿನ್ಯ ಇದೆ ಎಂದು ಅಂಕಿಅಂಶಗಳು ಹೇಳುತ್ತವೆ.

ಅಳತೆಯ ಮಾಪನ ಯುಜಿ/ಮೆಟ್ರಿಕ್ ಕ್ಯೂಬ್

ಕೆ.ಆರ್.ವೃತ್ತದಲ್ಲಿ

ಗಂಧಕದ ಡೈ ಆಕ್ಸೈಡ್ 80ಕ್ಕೆ 2.3

ಸಾರಜನಕದ ಆಕ್ಸೈಡ್ 80ಕ್ಕೆ 15.7

ದೂಳಿನ ಕಣ 100ಕ್ಕೆ 52.7 ಮೈಕ್ರಾನ್

ಸೀಸ 1ಕ್ಕೆ 0.003

ಅಮೋನಿಯಾ 400ಕ್ಕೆ 13.6

***

ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ

ಗಂಧಕದ ಡೈ ಆಕ್ಸೈಡ್ 80ಕ್ಕೆ 8.55

ಸಾರಜನಕದ ಆಕ್ಸೈಡ್ 80ಕ್ಕೆ 16.63

ದೂಳಿನ ಕಣ 100ಕ್ಕೆ 68.45 ಮೈಕ್ರಾನ್

ಸೀಸ 1ಕ್ಕೆ 0.005

ಅಮೋನಿಯಾ 400ಕ್ಕೆ 17.32

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.