ADVERTISEMENT

ಮೈಸೂರು | ‘ಶೆಟ್ಟಿಕೆರೆ’ ಒಡಲಿಗೆ ಮಲಿನ ನೀರು

ಕೆರೆ ಸುತ್ತಲೂ ಏಳುತ್ತಿರುವ ಹೊಸ ಬಡಾವಣೆಗಳು

ಮೋಹನ್ ಕುಮಾರ ಸಿ.
Published 10 ಜೂನ್ 2025, 5:48 IST
Last Updated 10 ಜೂನ್ 2025, 5:48 IST
<div class="paragraphs"><p>ಮೈಸೂರು ತಾಲ್ಲೂಕಿನ ಮಂಡಕಳ್ಳಿ ಗ್ರಾಮದ ‘ಶೆಟ್ಟಿಕೆರೆ’ ತೇಲುಕಳೆಯಿಂದ ಮುಚ್ಚಿದೆ&nbsp; ಪ್ರಜಾವಾಣಿ ಚಿತ್ರ: ಅನೂಪ್ ರಾಘ. ಟಿ.</p></div>

ಮೈಸೂರು ತಾಲ್ಲೂಕಿನ ಮಂಡಕಳ್ಳಿ ಗ್ರಾಮದ ‘ಶೆಟ್ಟಿಕೆರೆ’ ತೇಲುಕಳೆಯಿಂದ ಮುಚ್ಚಿದೆ  ಪ್ರಜಾವಾಣಿ ಚಿತ್ರ: ಅನೂಪ್ ರಾಘ. ಟಿ.

   

ಮೈಸೂರು: ಮೈಸೂರು–ಊಟಿ ರಸ್ತೆಗೆ ಹೊಂದಿಕೊಂಡಂತೆ ಚಾಚಿರುವ ‘ಶೆಟ್ಟಿಕೆರೆ’ ಎಂದೂ ಬತ್ತಿಲ್ಲ. ಆದರೆ, ನಗರದ ಮಲಿನ ನೀರೆಲ್ಲ ‘ದಳವಾಯಿ ಕೆರೆ’ ಮೂಲಕ ಅದರ ಒಡಲು ತುಂಬುತ್ತಿದೆ.

ಮಂಡಕಳ್ಳಿ ಗ್ರಾಮದ ಸರ್ವೆ ಸಂಖ್ಯೆ 18ರಲ್ಲಿ 20.19 ಎಕರೆಯಷ್ಟು ವಿಸ್ತಾರವಾದ ಕೆರೆಯಲ್ಲಿ ತೇಲುಕಳೆಯೇ ತುಂಬಿದೆ. 4,092 ಎಕರೆ ಜಲಾನಯನ ಪ್ರದೇಶವಿದ್ದು, ಪಶ್ಚಿಮ ಭಾಗದಲ್ಲಿ ಬಡಾವಣೆಗಳು ಏಳುತ್ತಿವೆ. ಚರಂಡಿ ತ್ಯಾಜ್ಯವೆಲ್ಲ ಕೆರೆಗೆ ಸೇರುತ್ತಿದೆ.

ADVERTISEMENT

ಕೆರೆಯ ದಕ್ಷಿಣ ಭಾಗಕ್ಕೆ ಮೈಸೂರು ವಿಮಾನ ನಿಲ್ದಾಣವಿದೆ. ಕೃಷಿಕರು ಪಶ್ಚಿಮ ಹಾಗೂ ಪೂರ್ವಭಾಗದ ಕಡೆ ಒತ್ತುವರಿಯನ್ನೂ ಮಾಡಿದ್ದಾರೆ. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಸೇರುವ ಕೆರೆಯಾಗಿದ್ದು, ಇದರ ನಿರ್ವಹಣೆಯ ಜವಾಬ್ದಾರಿ ತಾಲ್ಲೂಕು ಪಂಚಾಯಿತಿ ಮೇಲೆಯೂ ಇದೆ. ಆದರೆ, ಕೆರೆ ಬಗ್ಗೆ ಆಡಳಿತ ವ್ಯವಸ್ಥೆ ನಿರ್ಲಕ್ಷ್ಯ ವಹಿಸಿದೆ.

ಕೃಷಿ ಚಟುವಟಿಕೆಗಳಿಗೆ ನೀರು ಒದಗಿಸುತ್ತಿರುವ ಕೆರೆಯ ಸುತ್ತಲೂ ತೆಂಗಿನ ತೋಟಗಳು, ಫಾರ್ಮ್‌ಹೌಸ್‌ಗಳು ನೆಲೆಗೊಂಡಿವೆ. ವರುಣಾ ನಾಲೆಯು ಕೆರೆಯ ಮೇಲಿನ ಜಲಾನಯನ ಪ್ರದೇಶದಲ್ಲಿ ಹಾದುಹೋಗಿದ್ದು, ಅಲ್ಲಿನ ನೀರೂ ಇಲ್ಲಿಗೆ ಸೇರುತ್ತಿದೆ.

ಬಡಾವಣೆಗಳ ನೀರು: 

ಬಿಇಎಂಎಲ್‌ ಬಡಾವಣೆ, ಶ್ರೀನಗರ, ಗೆಜ್ಜಗಳ್ಳಿ, ಮಂಡಕಳ್ಳಿ ವ್ಯಾಪ್ತಿಯಲ್ಲಿನ ಹೊಸ ಬಡಾವಣೆಗಳ ಚರಂಡಿ ನೀರು ಶೆಟ್ಟಿಕೆರೆ ಸೇರುತ್ತಿದ್ದು, ನೈದಿಲೆಗಳಿಂದ ತುಂಬಿದ್ದ ಕೆರೆಯಲ್ಲಿ, ‘ಕತ್ತೆ ಕಿವಿ’ ತೇಲುಕಳೆ ಬೆಳೆದಿದೆ. ಇದು ನೀರಿನಲ್ಲಿ ಆಮ್ಲಜನಕ ಪ್ರಮಾಣ ಕಡಿಮೆ ಮಾಡುವುದರಿಂದ ಮೀನುಗಾರಿಕೆ ತಗ್ಗಿದೆ. ಅಲ್ಲದೇ ಬಾನಾಡಿಗಳ ಹಾಜರಿ ಇಲ್ಲಿ ಮೊದಲಿನಂತಿಲ್ಲ. 

ಮೊದಲು ಕಾಣಸಿಗುತ್ತಿದ್ದ ಬಣ್ಣದ ಕೊಕ್ಕರೆ, ಬೂದು ಸಿಪಿಲೆ, ಹಾವಕ್ಕಿ, ಕಪ್ಪು ತಲೆಯ ಕೆಂಬರಲು, ನೀರು ನಡಿಗೆ, ಮರಳು ಪೀಪಿ ಹಕ್ಕಿಗಳ ಸಂಖ್ಯೆ ಎರಡಂಕಿಗೆ ಇಳಿದಿದೆ. 

ಸಂಸ್ಕರಣಗೊಳ್ಳದ ನೀರು: 

ಸೀವೇಜ್‌ ಫಾರಂನಲ್ಲಿ ಸಂಸ್ಕರಣೆಗೊಳ್ಳದ ಚರಂಡಿ ನೀರಿನೊಂದಿಗೆ ಜೆ.ಪಿ.ನಗರ, ಕೊಪ್ಪಲೂರು, ಗೆಜ್ಜಗಳ್ಳಿ ಸೇರಿದಂತೆ ರಿಂಗ್‌ ರಸ್ತೆಯ ಇಕ್ಕೆಲಗಳಲ್ಲಿ ದಶಕದಿಂದೀಚೆಗೆ ನಿರ್ಮಾಣಗೊಂಡ ಬಡಾವಣೆಗಳ ಮಲಿನ ನೀರು ರಾಜಕಾಲುವೆ, ಚರಂಡಿಗಳ ಮೂಲಕ ನೇರವಾಗಿ ದಳವಾಯಿ ಕೆರೆ ತಲುಪಿ ಅಲ್ಲಿನ ನೀರು ಈ ಶೆಟ್ಟಿಕೆರೆಗೆ ಬರುತ್ತಿದೆ. ಇದೇ ನೀರು ಕಬಿನಿ ನದಿಯನ್ನೂ ತಲುಪುತ್ತದೆ.

ಹೊಸ ಬಡಾವಣೆಗಳ ಕಟ್ಟಡ ತ್ಯಾಜ್ಯ ಕೆರೆಗೆ ಹೊಂದಿಕೊಂಡಿರುವ ರಸ್ತೆ, ಏರಿ ಬದಿಯಲ್ಲೇ ಸುರಿಯಲಾಗುತ್ತಿದೆ. ಪ್ಲಾಸ್ಟಿಕ್‌ ಕವರ್‌ಗಳು, ಮದ್ಯದ ಬಾಟಲಿಗಳು, ಎಲೆಕ್ಟ್ರಾನಿಕ್‌ ವಸ್ತುಗಳು ಕೆರೆಯಂಚನ್ನು ಆವರಿಸಿವೆ. 

ಅಳಿವಿನಂಚಿಗೆ ಊರಕಟ್ಟೆ

ಮಂಡಕಳ್ಳಿ ಗ್ರಾಮದಲ್ಲಿ ‘ಊರಕಟ್ಟೆ’ ಹಾಗೂ ‘ಮಂಡಕಳ್ಳಿ ಕುಂಟೆ’ ಎಂಬ ನೀರನ್ನು ಇಂಗಿಸುವ ಮೂಲಗಳೂ ಇವೆ. ಊರಕಟ್ಟೆಯು 2.03 ಎಕರೆಯಷ್ಟಿದ್ದು ಕುಂಟೆಯು 0.35 ಎಕರೆಯಷ್ಟಿದೆ. ಎರಡೂ ಗ್ರಾಮದ  ತ್ಯಾಜ್ಯವನ್ನು ಸುರಿಯುವ ತಾಣವಾಗಿ ಮಾರ್ಪಟ್ಟಿದ್ದು ಅಳಿವಿನ ಸನಿಹದಲ್ಲಿವೆ.   ಊರಕಟ್ಟೆಯ ಸುತ್ತಲೂ ತೆಂಗಿನ ತೋಟಗಳು ಇವೆ. ಕುಂಟೆಯ ಒಂದಿ ಭಾಗವನ್ನು ಸ್ಮಶಾನವಾಗಿ ಬಳಕೆ ಮಾಡಲಾಗುತ್ತಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.