ADVERTISEMENT

ತನಿಖೆಗೆ ಆಗ್ರಹಿಸಿ ಪತ್ರ ಚಳವಳಿ

ಕೆಪಿಎಸ್‌ಸಿ ನೇಮಕಾತಿಯಲ್ಲಿ ಎಚ್‌.ಡಿ.ಕುಮಾರಸ್ವಾಮಿ ಹಸ್ತಕ್ಷೇಪ: ಆರೋಪ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2020, 8:08 IST
Last Updated 25 ಅಕ್ಟೋಬರ್ 2020, 8:08 IST
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ವತಿಯಿಂದ ಶನಿವಾರ ಪತ್ರ ಚಳವಳಿ ನಡೆಯಿತು. ಕೆ.ಎಸ್‌.ಶಿವರಾಮು, ಮಹೇಶ್‌ ಸೋಸಲೆ ಹಾಗೂ ಇತರರು ಇದ್ದಾರೆ
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ವತಿಯಿಂದ ಶನಿವಾರ ಪತ್ರ ಚಳವಳಿ ನಡೆಯಿತು. ಕೆ.ಎಸ್‌.ಶಿವರಾಮು, ಮಹೇಶ್‌ ಸೋಸಲೆ ಹಾಗೂ ಇತರರು ಇದ್ದಾರೆ   

ಮೈಸೂರು: ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿಯಲ್ಲಿ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಹಸ್ತಕ್ಷೇಪ ನಡೆಸಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಹಿಂದುಳಿದ
ವರ್ಗಗಳ ಜಾಗೃತ ವೇದಿಕೆ ವತಿಯಿಂದ ಶನಿವಾರ ಪತ್ರ ಚಳವಳಿ ಹಮ್ಮಿಕೊಳ್ಳಲಾಯಿತು.

ಪಾಲಿಕೆಯ ಅಂಚೆ ಕಚೇರಿ ಎದುರು ಸೇರಿದ ಪ್ರತಿಭಟನಕಾರರು ಈ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿ ರಾಜ್ಯಪಾಲರಿಗೆ ಪತ್ರ ಕಳುಹಿಸಿದರು.

‘ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿರುವ ಪುಟ್ಟಣ್ಣ ಕುಟುಂಬದ 10–12 ಸದಸ್ಯರಿಗೆ ತಮ್ಮ ಪ್ರಭಾವ ಬಳಸಿ ಹುದ್ದೆ ಕೊಡಿಸಿದ್ದಾಗಿ ಎಚ್‌.ಡಿ.ಕುಮಾರಸ್ವಾಮಿ ಹೇಳಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಬಗ್ಗೆ ರಾಜ್ಯಪಾಲರು ತನಿಖೆ ನಡೆಸಬೇಕು’ ಎಂದು ವೇದಿಕೆಯ ರಾಜ್ಯಾಧ್ಯಕ್ಷ ಕೆ.ಎಸ್‌.ಶಿವರಾಮು ಒತ್ತಾಯಿಸಿದರು.

ADVERTISEMENT

ಅಧಿಕಾರಸ್ಥರ ತಾಳಕ್ಕೆ ತಕ್ಕಂತೆ ಕೆಪಿಎಸ್‌ಸಿ ಕುಣಿಯುತ್ತದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಆಯೋಗದಲ್ಲಿ ಸ್ವಜನ ಪಕ್ಷಪಾತ, ಭ್ರಷ್ಟಾಚಾರ ಎಲ್ಲೆ ಮೀರಿದೆ ಎಂಬುದನ್ನು ಈ ಹೇಳಿಕೆ ಪುಷ್ಟೀಕರಿಸುತ್ತದೆ. ರಾಜ್ಯದ ಜನರು ಕೆಪಿಎಸ್‌ಸಿ ಮೇಲಿನ ವಿಶ್ವಾಸ ಕಳೆದುಕೊಳ್ಳುವ ಸಾಧ್ಯತೆಯಿದೆ. ಆದ್ದರಿಂದ ಕೆಪಿಎಸ್‌ಸಿಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಎನ್‌.ಆರ್‌.ನಾಗೇಶ್, ದಲಿತ ಸಂಘಟನೆಗಳ ಒಕ್ಕೂಟದ ಸಂಚಾಲಕ ಪಿ.ರಾಜು, ದಲಿತ ವಿದ್ಯಾರ್ಥಿ ಒಕ್ಕೂಟದ ಗೌರವ ಸಲಹೆಗಾರ ಮಹೇಶ್‌ ಸೋಸಲೆ, ಸಂದೇಶ್‌, ಎಚ್‌.ಎಸ್‌.ಪ್ರಕಾಶ್‌ ಮತ್ತಿತರರು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.