ವಿದ್ಯುತ್
ಮೈಸೂರು: ಅವಧಿ ಮೀರಿದ್ದರೂ ವಿದ್ಯುತ್ ಶುಲ್ಕ ಪಾವತಿಸದಿರುವವರ ವಿರುದ್ಧ ಕ್ರಮಕ್ಕೆ ಸೆಸ್ಕ್ ಮುಂದಾಗಿದೆ.
ನಿಗದಿತ ಅವಧಿಯೊಳಗೆ ಶುಲ್ಕ ಪಾವತಿಸದಿದ್ದಲ್ಲಿ ವಿದ್ಯುತ್ ಕಡಿತಗೊಳಿಸುವುದಾಗಿ ತಿಳಿಸಿದೆ.
ಕೆಲವು ಗ್ರಾಹಕರು ವಿದ್ಯುತ್ ಶುಲ್ಕವನ್ನು ಕಟ್ಟಿಲ್ಲ. ಗ್ರಾಮ ಪಂಚಾಯಿತಿ ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದ ಹಾಗೂ ಬೀದಿ ದೀಪಗಳ ಸ್ಥಾವರಗಳು ಒಳಗೊಂಡಂತೆ ವಿದ್ಯುತ್ ಶುಲ್ಕ ಪಾವತಿಸದೆ ಬಾಕಿ ಉಳಿಸಿಕೊಂಡಿವೆ. ಅವಧಿ ಮೀರಿದ್ದರೂ ವಿದ್ಯುತ್ ಶುಲ್ಕ ಹಾಗೂ ಹೆಚ್ಚುವರಿ ಭದ್ರತಾ ಠೇವಣಿ ಪಾವತಿಸದೆ ಬಾಕಿ ಉಳಿಸಿಕೊಂಡಿವೆ. ಈ ರೀತಿ ಬಿಲ್ ಬಾಕಿ ಉಳಿಸಿಕೊಂಡಿರುವವರ ವಿರುದ್ಧ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ವಿದ್ಯುತ್ ಕಡಿತಗೊಳಿಸಲು ಸೆಸ್ಕ್ ನಿರ್ಧರಿಸಿದೆ.
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಪ್ರಕಾರ ವಿದ್ಯುತ್ ಸರಬರಾಜಿನ, ವಿತರಣಾ ಲೈಸೆನ್ಸ್‌ದಾರರ ಷರತ್ತುಗಳು 2004 ಅನುಬಂಧ-04ರ ನಿಯಮ 4.18(ಜೆ) ಪ್ರಕಾರ, ಗ್ರಾಹಕರು ಬಿಲ್ ಪಾವತಿಗೆ ನೀಡಿರುವ ದಿನಾಂಕದೊಳಗೆ ಬಿಲ್ ಪಾವತಿಸದಿದ್ದರೆ, ನಿಗದಿತ ಗಡುವಿನ ದಿನಾಂಕದ ನಂತರ ಶುಲ್ಕ ಪಾವತಿಸದ ಗ್ರಾಹಕರಿಗೆ 15 ದಿನಗಳ ಸ್ಪಷ್ಟ ನೋಟಿಸ್ ನೀಡಿ, ಬಾಕಿ ಪಾವತಿಸದ ಕಾರಣಕ್ಕೆ ವಿದ್ಯುತ್ ಸ್ಥಾವರದ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಹಕ್ಕನ್ನು ಲೈಸೆನ್ಸ್‌ದಾರರು ಹೊಂದಿರುತ್ತಾರೆ. ಅಲ್ಲದೇ ನಿಯಮ 2.11ರ ಪ್ರಕಾರ, ಬಿಲ್ ನೀಡಿದ ಬಳಿಕ 15 ದಿನಗಳಲ್ಲಿ ಪಾವತಿಸಬೇಕು. ಗ್ರಾಹಕರಿಗೆ ನೀಡುವ ಬಿಲ್‌ನ ಹಿಂಬದಿಯ ಸೂಚನೆ– 1ರಲ್ಲಿ ನಿಗದಿತ ದಿನದೊಳಗೆ ಬಿಲ್ ಪಾವತಿಸದಿದ್ದಲ್ಲಿ ಈ ಬಿಲ್‌ನ್ನೇ ವಿದ್ಯುತ್ ಸರಬರಾಜು ನಿಲ್ಲಿಸುವ 15 ದಿನಗಳ ನೋಟಿಸ್ ಎಂದು ಪರಿಗಣಿಸಬೇಕು ಎಂದು ನಮೂದಿಸಲಾಗಿದೆ ಹಾಗೂ ಹಿಂದಿನ ಬಾಕಿಗೆ ವಾಯ್ದೆ ದಿನಾಂಕ ಅನ್ವಯಿಸುವುದಿಲ್ಲ ಎಂದು ತಿಳಿಸಲಾಗಿರುತ್ತದೆ.
ಈ ಕಾರಣದಿಂದ ತುರ್ತು ಸೇವೆಗಳಾದ ಸರ್ಕಾರಿ ಆಸ್ಪತ್ರೆಗಳು, ಕುಡಿಯುವ ನೀರು, ಬೀದಿ ದೀಪಗಳ ಸೇವೆಗಳನ್ನು ಹೊರತುಪಡಿಸಿ ಎಲ್ಲ ಪ್ರವರ್ಗದ ವಿದ್ಯುತ್ ಗ್ರಾಹಕರು, ಸರ್ಕಾರಿ ಇಲಾಖೆ ಒಳಗೊಂಡಂತೆ ತಮ್ಮ ಸ್ಥಾವರಗಳ ವಿದ್ಯುತ್ ಶುಲ್ಕ ಬಾಕಿಯನ್ನು 3 ದಿನದೊಳಗೆ ಸೆಸ್ಕ್ ಅಧಿಕೃತ ನಗದು ಕೌಂಟರ್, ಆನ್‌ಲೈನ್ ಮೂಲಕ ಪಾವತಿಸಬೇಕು. ಇಲ್ಲದಿದ್ದಲ್ಲಿ, ಡಿ.9ರಂದು ವಿದ್ಯುತ್ ಕಡಿತಗೊಳಿಸಲಾಗುವುದು. ನಿಗದಿತ ಅವಧಿಯೊಳಗೆ ಶುಲ್ಕ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ಸ್ಥಾವರಗಳಿಗೆ ನಿಯಮಾನುಸಾರ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ನಿರ್ಧರಿಸಲಾಗಿದೆ. ಆದ್ದರಿಂದ ಗ್ರಾಹಕರು, ಸರ್ಕಾರಿ ಇಲಾಖೆಗಳು ತುರ್ತಾಗಿ ಬಾಕಿ ಪಾವತಿಸಿ ಸಹಕರಿಸಬೇಕು ಎಂದು ವ್ಯವಸ್ಥಾಪಕ ನಿರ್ದೇಶಕಿ ಜಿ.ಶೀಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.